ಧಾರವಾಡಕರ.. ಈ ಹೆಸರೇ ಅನ್ವರ್ಥಕನಾಮದಂತಿದೆ. ಮೂಲ ಬೇರು ಬಾಗಲಕೋಟೆಯಾಗಿದ್ದರೂ, ಶಿಕ್ಷಣ ಪಡೆದದ್ದು ಮಹಾರಾಷ್ಟ್ರದ ಸಾಂಗ್ಲಿಯಾಗಿದ್ದರೂ ಮೊದಲ ಕಾರ್ಯಕ್ಷೇತ್ರ ಮುಂಬೈಯಾಗಿದ್ದರೂ, ಧಾರವಾಡದ ಋಣಾನುಬಂಧವು ಈ ಮೇಧಾವಿ ಶಿಕ್ಷಕ, ಸಾಹಿತಿ, ಆಡಳಿತಗಾರರನ್ನು ಧಾರವಾಡಕ್ಕೆ ಎಳೆದು ತಂದಿತು. ವಿದ್ಯಾಗಿರಿಯ ಗುಡ್ಡ ಮೇಲೆ ತಲೆಯೆತ್ತಿ ನಿಂತ ಜನತಾ ಶಿಕ್ಷಣ ಸಮಿತಿಯ ಮಹಾವಿದ್ಯಾಲಯದಲ್ಲಿ ಸುದೀರ್ಘಕಾಲ ಪ್ರಾಂಶುಪಾಲರಾಗಿ ಒಂದು ವಿದ್ಯಾಸಂಸ್ಥೆಯನ್ನು ಕಟ್ಟಿ ಲಕ್ಷಗಟ್ಟಲೇ ವಿದ್ಯಾರ್ಥಿಗಳಿಗೆ ತಮ್ಮ ವಿದ್ವತ್ತಿನ ಬೆಳಕನ್ನು ಕೊಟ್ಟ ಶಿಕ್ಷಕರಾಗಿ, ಭಾಷಾಶಾಸ್ತ್ರಜ್ಞರಾಗಿ ಸಾಹಿತಿಗಳಾಗಿ ಧಾರವಾಡದ ಹೆಸರನ್ನು ತೇಜೋಮಯವಾಗಿ ಮಾಡಿದ ಅಸಾಧಾರಣ ವ್ಯಕ್ತಿ.
ಪ್ರೊ. ಧಾರವಾಡಕರರು ಹುಟ್ಟಿದ್ದು ಬಾಗಲಕೋಟೆಯಲ್ಲಿ ೧೯೧೯ರ ಜುಲೈ೧೫ರಂದು ಜನಿಸಿದರು. ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ತಮ್ಮ ಬಿ.ಎ. ಡಿಗ್ರಿಗಾಗಿ ಕನ್ನಡ ಪ್ರಧಾನ ವಿಷಯ ಮತ್ತು ಇಂಗ್ಲೀಷನ್ನು ಐಚ್ಛಿಕ ವಿಷಯವಾಗಿ ಅಭ್ಯಸಿಸಿ ಪ್ರಥಮ ಗೌರವವನ್ನು ಪಡೆದರು. ೧೯೪೦ರಲ್ಲಿ ಫೆಲೋ ಆಗಿ ನಂತರ ಇಂಗ್ಲೀಷ್ ವಿಷಯದ ನಂತರ ರೇಶನಿಂಗ್ ಇಲಾಖೆಯಲ್ಲಿ ಕೆಲಸ ಮಾಡಿದರು. ಧಾರವಡದಲ್ಲಿ ಪ್ರಾರಂಭವಾದ ಕೆ.ಇ. ಬೋರ್ಡ್ನಲ್ಲಿ ಕನ್ನಡ ದಿಗ್ಗಜ ಬಿ.ಎಂ. ಶ್ರೀಕಂಠಯ್ಯನವರು ಪ್ರಿನ್ಸಿಪಾಲರಾಗಿದ್ದರು. ಆಗ ಧಾರವಾಡಕರರು ಈ ಸಂಸ್ಥೆಯತ್ತ ಆಕರ್ಷಿತರಾಗಿ ಬಂದು ಸೇರಿಕೊಂಡರು. ಬಿ.ಎಂ.ಶ್ರೀ ರವರು ತೀರಿದಾಗ ಅವರ ಸ್ಥಾನಕ್ಕೆ ಧಾರವಾಡಕರರನ್ನು ತಾತ್ಕಾಲಿಕ ಪ್ರಿನ್ಸಿಪಾಲರಾಗಿ ನೇಮಕ ಮಾಡಿದಾಗ ಅವರಿಗೆ ಕೇವಲ ೨೭ ವರ್ಷ. ೧೯೫೩ರಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಿನ್ಸಿಪಾಲರಾಗಿ ನೇಮಕಗೊಂಡರು. ಜೆ.ಎಸ್.ಎಸ್ ಅನ್ನು ಒಂದು ಉತ್ತಮ ಮಹಾವಿದ್ಯಾಲಯವನ್ನಾಗಿ ಮಾಡುವಲ್ಲಿ ಇವರ ಪಾತ್ರ ಬಹಳ ದೊಡ್ಡದು. ೧೯೬೩ರಲ್ಲಿ ಮೂರು ತಿಂಗಳ ಕಾಲ ಅಮೇರಿಕ ಪ್ರವಾಸದ ಸೌಲಭ್ಯವು ದೊರೆಯಿತು.
ಕರ್ನಾಟಕದಲ್ಲಿಯ ವೃತ್ತಪತ್ರಿಕೆಗಳು, ನಮ್ಮ ದೇಶದ ಯೋಜನೆಗಳು, ಕನ್ನಡದಲ್ಲಿ ಕಾನೂನು, ಸಾಹಿತ್ಯ ಸಮೀಕ್ಷೆ, ಕನ್ನಡ ಭಾಷಾಶಾಸ್ತ್ರ, ಹೊಸಗನ್ನಡ ಸಾಹಿತ್ಯದ ಉದಯಕಾಲ ಮುಂತಾದವು ಇವರ ಪ್ರಮುಖ ಕೃತಿಗಳು. ಜೀವನ ಅರಿತ್ರೆ ನಿರೂಪಿಸುವಲ್ಲಿ ಲೇಖಕರ ಅನುಪಮ ಪ್ರಾವೀಣ್ಯದ ದರ್ಶನವಾಗುತ್ತದೆ. ಶಾಂತಕವಿಗಳ ಮೂರು ಕೀರ್ತನೆಗಳು, ಶ್ರೀ ವಿದ್ಯಾರಣ್ಯ ವಿಜಯ, ರಾವಣವೇದವತಿ, ಶ್ರೀ ಕೃಷ್ಣ ದಾನಾಮೃತ ಈ ಕೀರ್ತನೆಗಲನ್ನು ಬೆಳಕಿಗೆ ತಂದರು. ಅಮೇರಿಕನ್ ನಿಗ್ರೋ ಕತೆಗಳು ಹಾಗೂ ತೆರೆಯ ಹಿಂದೆ ಇವರ ಕಥಾ ಸಂಗ್ರಹಗಳು. ಧೂಮ್ರವಲಂಬಿಗಳು, ತೂರಿದ ಚಿಂತನೆಗಳು ಇವು ಧಾರವಾಡಕರರು ಕನ್ನಡ ಸಾಹಿತ್ಯದ ಪ್ರಬಂಧ ಪ್ರಕಾರಕ್ಕೆ ಕೊಟ್ಟ ಅನನ್ಯರತ್ನಗಳೆಂದೇ ಹೇಳಬೇಕು.
ಪ್ರಬಂಧ ಸಾಹಿತ್ಯ ಚರಿತ್ರೆ, ಜೀವನ ಚರಿತ್ರೆ, ಸಂಶೋಧನೆ, ಕಥೆ, ವಿಮರ್ಶನದಂಥ ಸಾಹಿತ್ಯ ಪ್ರಕಾರಗಳಿಗೆ ಅತ್ಯುತ್ತಮ ಕೃತಿಗಳನ್ನು ನೀಡಿದ ಧಾರವಾಡಕರರು ಮುಂಬರುವ ಕನ್ನಡದ ಪೀಳಿಗೆಯ ಚಿಂತನ ಮಂಥನಕ್ಕೆ ಸಾಕಷ್ಟು ವಿಷಯ ನೀಡುವುದರ ಜೊತೆಗೆ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸುವಂಥ ಅಪರೂಪದ ಪ್ರೇರಣೆಗಳನ್ನು ನೀಡಿದ್ದಾರೆ.
ವಿದ್ಯಾವರ್ಧಕ ಸಂಘದ ಪುಸ್ತಕ ಬಹುಮಾನ, ಲೋಕ ಶಿಕ್ಷಣ ಪುಸ್ತಕ ಬಹುಮಾನ, ಹೀಗೆ ಹಲವಾರು ಪ್ರಶಸ್ತಿಗಳು ಬಂದವು. ತೂರಿದ ಚಿಂತನಗಳು ಪ್ರಬಂಧ ಸಂಗ್ರಹಕ್ಕೆ ಜಗದ್ಗುರು ಮೂರುಸಾವಿರ ಮಠದ ಸಾಹಿತ್ಯ ಪುರಸ್ಕಾರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದವು.
ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ