ಶಾಂತಾದೇವಿ ಮಾಳವಾಡ

೨೦ನೇ ಶತಮಾನದ ಮೊದಲ ಭಾಗದಲ್ಲಿ ಲೆಕ್ಕಣಿಕೆಯನ್ನು ಕೈಗೆತ್ತಿಕೊಂಡ ಲೇಖಕಿಯರು ಕಥನ ಸಾಹಿತ್ಯದತ್ತ ಒಲವು ತೋರಿದರು. ಅಂತಹವರಲ್ಲಿ ಶಾಂತಾದೇವಿ ಮಾಳವಾಡರು ಪ್ರಮುಖರು. ಇವರು ಸಾಹಿತಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಮಹಿಳಾ ಸಂಘಟನೆಯ ರೂವಾರಿಯಾಗಿ ಮಾಡಿದ ಸಾಧನೆ ಗಮನಾರ್ಹ.

ಶಾಂತಾದೇವಿಯವರು ಹುಟ್ಟಿದ್ದು ೧೯೨೨ ಡಿಸೆಂಬರ್ ೧೦ರಂದು ಬೆಳಗಾವಿಯಲ್ಲಿ. ೧೯ನೇ ಶತಮಾನದ ಉತ್ತರಾರ್ಧದಲ್ಲಿಯೆ ಮುಲ್ಕಿ ಪರೀಕ್ಷೆಯವರೆಗೆ ಅವರು ಓದಿದವರಾಗಿದ್ದರು. ತಮ್ಮ ಮುದ್ದಿನ ಮಗಳಿಗೆ ದಂಪತಿಗಳು ಮನೆದೇವತೆಯಾದ ದಾನಮ್ಮಳ ಹೆಸರನ್ನೇ ಇಟ್ಟರು. ಎರಡು ವರ್ಷದವರಾಗಿದ್ದಾಗ ಇವರಿಗೆ ತಂದೆಯ ಅಕಾಲಿಕ ವಿಯೋಗ, ಹತ್ತನೇ ವಯಸ್ಸಿನಲ್ಲಿ ತಾಯಿಯ ವಿಯೋಗವಾಯಿತು. ಮುಂದೆ ಇವರು ಅಜ್ಜಿಯ ಮಡಿಲಲ್ಲಿ ಬೆಳೆದರು. ಪೌರಾಣಿಕ ಕಥೆಗಳನ್ನು, ಜನಪದ ಹಾಡುಗಳನ್ನು ಕೇಳುತ್ತಾ ಬೆಳೆದರು.

ದಾನಮ್ಮ ಬೆಳಗಾವಿಯ ವನಿತಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಶುರುಮಾದಿದರು. ಹೈಸ್ಕೂಲ್ ಎರಡನೆಯ ತರಗತಿಯಲ್ಲಿರುವಾಗಲೇ ದೊಡ್ಡಪ್ಪನವರ ಆದೇಶದಂತೆ ಶಾಲೆ ಬಿಡಬೇಕಾಯಿತು. ಮುಂದೆ ಓದುವ ಹಟದಿಂದ ದಾನಮ್ಮ ಎರಡು ದಿನ ಉಪವಾಸ ಮಾಡಿದರಾದರು ಅನುಮತಿ ಸಿಗಲಿಲ್ಲ. ಸ್ನೇಹಿತೆಯರಿಂದ ಕಥೆ, ಕಾದಂಬರಿಗಳನ್ನು ತಂದು ಓದುವ ಹವ್ಯಾಸವನ್ನು ಜೀವಂತವಾಗಿರಿಸಿಕೊಂಡರು.

೧೪ನೇ ವಯಸ್ಸಿಗೆ ಪ್ರೊ. ಸ. ಸ. ಮಾಳವಾಡರೊಂದಿಗೆ ವಿವಾಹ ನಿಶ್ಚಯವಾಯಿತು. ೧೫ವರ್ಷ ತುಂಬುವವರೆಗೆ ಮದುವೆಗೆ ಅವಕಾಶವಿರಲಿಲ್ಲವಾದ್ದರಿಂದ ಆ ಒಂದು ವರ್ಷದ ಅವಧಿಯಲ್ಲಿ ಅವರು ಹಾಗು ಪ್ರೊ. ಮಾಳವಾಡರ ನಡುವೆ ಪತ್ರವ್ಯವಹಾರದ ವಿನಿಮಯ ನಡೆಯಿತು. ಸೂತ್ರದಗೊಂಬೆ, ಬಂಧನದ ಆಚೆ ಮುಂತಾದ ಪುಸ್ತಕಗಳನ್ನು ದಾನಮ್ಮವರಿಗೆ ಓದಲು ಕಳಿಸುತ್ತಿದ್ದ ಮಾಳವಾಡರು, ತಮ್ಮ ಪತ್ನಿ ಮನೆಗೆಲಸದ ದಾಸಿಯಾಗದೆ ಬಾಳಸಂಗಾತಿಯಾಗಬೇಕೆಂಬ ಅಭಿಪ್ರಾಯ ಸ್ಪಷ್ಟಪದಿಸಿದರು. ಇದು ದಾನಮ್ಮನ ಮನಸ್ಸಿನಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬಿತು. ಮದುವೆಯಾದ ನಂತರ ಪ್ರೊ. ಮಾಳವಾಡರು ಕೊಟ್ಟ ಹೆಸರು ಶಾಂತಾದೇವಿ, ಅದು ಅವರಿಗೆ ಸಂದ ಅರ್ಥಪೂರ್ಣ ನಾಮವಾಯಿತು. ೩೫ ಜನ ಸದಸ್ಯರಿರುವ ಅವಿಭಕ್ತ ಕುಟುಂಬದಲ್ಲಿ ಸೊಸೆಯಾಗಿ ಬಂದ ಕಿರುವರೆಯದ ಶಾಂತಾದೇವಿ ಆಧುನಿಕತೆ ಸಂಪ್ರದಾಯನಿಷ್ಟತೆಯನ್ನು ಬೆಸೆವ ಕೊಂಡಿಯಾಗಿ ತೂಕ ತಪ್ಪದಂತೆ ಸಮನ್ವಯ ಸಾಧಿಸಿದ್ದು ನಿಜಕ್ಕೂ ಶ್ಲಾಘನೀಯ. ಸಂಸಾರದ ಒತ್ತಡಗಳ ಮಧ್ಯದಲ್ಲೂ ಸ್ವಧ್ಯಯನ ಮುಂದುವರೆಸಿ, ೧೯೪೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ‘ಜಾಣ’ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪ್ರೊ. ಮಾಳವಾಡರ ಮಾರ್ಗದರ್ಶನದಲ್ಲಿ ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯ ಅಧ್ಯಯನ ಮಾಡಿದರು.

ಸಾಹಿತಿಯಾಗಿ ಶಾಂತಾದೇವಿಯವರ ಸಾಹಿತ್ಯ ಕೃಷಿ ವಿಪುಲ ಹಾಗೂ ವೈವಿಧ್ಯಪೂರ್ಣ. ಕಥಾ ರಚನೆಯ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶ ಮಾಡಿದ ಅವರು ಕಾದಂಬರಿ, ಜೀವನ ಚರಿತ್ರೆ, ಪ್ರಬಂಧ ಪ್ರವಾಸ ಕಥನ ಆತ್ಮಚರಿತ್ರೆ ಮಕ್ಕಳ ಪುಸ್ತಕ ಹೀಗೆ ಒಟ್ಟು ನಲವತ್ತಾರು ಕೃತಿಗಳ ಕರ್ತೃ. ೧೯೪೧ರಲ್ಲಿ ಅವರ ಮೊದಲ ಕಥಾ ಸಂಕಲನ ಮೊಗ್ಗೆಯ ಮಾಲೆ ಪ್ರಕಟವಾಯಿತು. ಅಕ್ಕಮಹಾದೇವಿಯವರ ಜೀವನದ ಮಹತ್ವಘಟನೆ ಹಾಗು ವಚನಗಳನ್ನಾಧರಿಸಿದ ಅಕ್ಕನ ಭಾವಸೌರಭ ಪ್ರಕಟವಾಯಿತು. ಬಸವಪ್ರಕಾಸಹ್, ದಾನದಾಸೋಹಿ ದಾನಮ್ಮ ಹಾಗು ಶೂರರಾಣಿ ಕೆಳದಿ ಚಿನ್ನಮ್ಮ ಶಾಂತಕ್ಕನವರ ಮೂರು ಕಾದಂಬರಿಗಳು.

ಮಹಿಳಾ ಪ್ರಧಾನ ರಚನೆಯತ್ತ ವಿಶೇಷ ಒಲವು ತೋರಿದ ಶಾಂತಕ್ಕನವರು ಸೊಬಗಿನ ಮನೆ, ದಾಂಪತ್ಯ ಯೋಗ, ವಧಿವಿನ ಉಡುಗೊರೆ, ೮ ಬಾರಿ ಮುದ್ರಣಗೊಂಡ ರಸಪಾಕ ಇವರ ಮಹಿಳಾ ಪರ ವಿಶೇಷ ಆಸಕ್ತಿಗೆ ಸಾಕ್ಷಿ. ಶಿಲ್ಪ ಸಾಹಿತ್ಯದಲ್ಲಿ ವ್ಯಕ್ತವಾದ ಮಹಿಳಾಕೇಶ ವಿನ್ಯಾಸ, ತೊಡಿಗೆ, ಉಡಿಗೆಗಳ ಅಲಂಕಾರವನ್ನು ಆಧುನಿಕ ಅಲಂಕಾರಗಳೊಂದಿಗೆ ಚಿತ್ರವತ್ತಾಗಿ ಸಮೀಕರಿಸಿ ವಿವರಿಸುವ ಮಹಿಳೆಯರ ಅಲಂಕಾರ ವಿದ್ವಾಂಸರು ಗುರುತಿಸಿರುವಂತೆ ಇವರ ಕೃತಿಗಳಿಗೆಲ್ಲ ಮುಡಿಪ್ರಾಯದ ಸಂಶೋಧನಾತ್ಮಕ ಕಲಾತ್ಮಕ ಕೃತಿ.

ಶ್ರೀಗಿರಿಯಿಂದ ಹಿಮಗಿರಿಗೆ ಶಾಂತಕ್ಕನವರು ಬರೆದ ಪ್ರವಾಸ ಕಥನ. ಪ್ರೊ. ಮಾಳವಾಡರು ವಿಧಿವಶರಾದಾಗ ಅವರು ಬರೆಯುತ್ತಿದ್ದ ಆತ್ಮಚರಿತ್ರೆ ಅಪೂರ್ಣವಾಗಿತ್ತು. ಶಾಂತಾದೇವಿ ತಮಗಾದ ಅನೂಹ್ಯ ದುಃಖವನ್ನು ಅದುಮಿಟ್ಟುಕೊಂಡು ಅವರ ಆತ್ಮಚರಿತೆಯನ್ನು ಪೂರ್ಣಗೊಳಿಸಿದರು. ೧೯೩೮ರಲ್ಲಿ ಅವರು ಕೆಲವೇ ಜನ ಮಹಿಳೆಯರನ್ನು ಕೂಡಿಸಿ ಸ್ಥಾಪಿಸಿದ ಅಕ್ಕನ ಬಳಗ ಇಂದು ಒಂದು ಮಹತ್ವದ ಮಹಿಳಾ ಸಂಘಟನೆಯಾಗಿದೆ. ೧೯೪೦ರಲ್ಲಿ ಧಾರವಾಡದಲ್ಲಿದ್ದ ಅಖಿಲ ಭಾರತ ಮಹಿಳಾ ಪರಿಷತ್ತಿನ ಸದಸ್ಯೆಯಾಗಿ ಮರಾಠಿಮಯವಾಗಿದ್ದ ಆ ಸಂಸ್ಥೆಯನ್ನು ಕನ್ನಡತಿಯರ ಸಂಸ್ಥೆಯನ್ನಗಿಸಿ, ಕಾರದರ್ಶ್ಯಾಗಿ ಕೆಲಸ ಮಾಡಿದರು.

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೯೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠ ಇವು ಶಾಂತಕ್ಕನವರನ್ನು ಹುಡುಕಿಕೊಂದು ಬಂದ ಪ್ರತಿಷ್ಠಿತ ಪ್ರಶಸ್ತಿಗಲೂ. ತಮಗೆ ಬಂದ ಪ್ರಶಸ್ತಿಯ ಹಣವನ್ನು ಶಾಂತಕ್ಕ ಅನೇಕ ಸಂಘ ಸಂಸ್ಥೆಗಳಿಗೆ ದತ್ತಿಯಾಗಿ ನೀಡಿದುದು ಅವರ ಔದಾರ್ಯಕ್ಕೆ ನಿದರ್ಶನ. ಇವರು ೨೦೦೫ರಂದು ನಮ್ಮನ್ನು ಅಗಲಿದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s