ಡಾ| ಹಾ ಮಾ ನಾಯಕ

ಹಾಮಾನಾ ಎಂದೇ ಹೆಸರುವಾಸಿಯಾಗಿದ್ದ ಹಾರೋಗದ್ದೆ ಮಾನಪ್ಪ ನಾಯಕರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾರೋಗದ್ದೆಯಲ್ಲಿ ೧೯೩೧ರ ಸೆಪ್ಟೆಂಬರ್ ೧೨ ರಂದು ರೈತಾಪಿ ಕುಟುಂಬದಲ್ಲಿ ಜನಿಸಿದರು. ಮೇಗರವಳ್ಳಿ, ತೀರ್ಥಹಳ್ಳಿಗಳಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿ, ಶಿವಮೊಗ್ಗದಲ್ಲಿ ಬಿ.ಎ ಮುಗಿಸಿ, ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾಲಯ ಸೇರುವುದರೊಂದಿಗೆ ಉನ್ನತ ವ್ಯಾಸಂಗ ವೇತನ ಪಡೆದು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಫುಲ್ ಬ್ರೈಟ್ ಶಿಷ್ಯವೇತನ ಪಡೆದು ಕನ್ನಡ ಸಾಹಿತ್ಯ ಮತ್ತು ಆಡು ಭಾಷೆ ವಿಷಯದ ಮೇಲೆ ಪ್ರಬಂಧ ಮಂಡಿಸಿ ಅಮೇರಿಕಾದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಹಾಮಾನಾ ಅವರು ಸುಮಾರು ೨೯ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿಗಾಗಿ ಮಾರ್ಗದರ್ಶನ ಮಾಡಿದ್ದಾರೆ. ಇವರ ‘ಸ್ವಂತ’ ಪುಸ್ತಕದ ರಕ್ಷಾ ಕವಚದಲ್ಲಿ ಕವಿ ನಾಡೋಜ ಚೆನ್ನವೀರ ಕಣವಿಯವರು ಹಾಮಾನಾರವರಲ್ಲಿ ಸೇವಕ, ನಾಯಕ, ಸಮರ್ಥ ಲೇಖಕ ಮೂವರ ಗುಣಗಳು ಸಮಕ್ಷಮಗೊಂಡಿವೆ. ಕನ್ನಡ ನಾಡಿನ ಸಮಸ್ಯೆಗಳನ್ನು ಅವರಂತೆ ಸಮಗ್ರವಾಗಿ ಪರಿಶೀಲಿಸಿ, ಪರಿಹಾರವನ್ನು ಸೂಚಿಸಿದವರು ಹಾಗೂ ಆ ಬಗ್ಗೆ ಯೋಚಿಸಿದವರು ನಮ್ಮಲ್ಲಿ ವಿರಳ, ಎಂದು ಹೇಳಿದ್ದಾರೆ.

ಹಾಮಾನಾ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಎರಡು ವರ್ಷ ಕೆಲಸ ಮಾಡಿದ ನಂತರವೂ ಅನೈತಿಕ ರಾಜಕಾರಣಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಅವರ ಆತ್ಮ ಸಾಕ್ಷಿ ಒಪ್ಪದೇ ತಾತ್ವಿಕ ಕಾರಣಗಳನ್ನು ನೀಡಿ ಆ ಹುದ್ದೆಗೆ ರಾಜೀನಾಮೆ ಕೊಟ್ಟರು. ಅವರ ಬದುಕಿನ ನಿಲುವುಗಳೆಲ್ಲವೂ ಅವರ ವ್ಯಕ್ತಿತ್ವದ ನೈತಿಕತೆಯ ಗಟ್ಟಿತನಕ್ಕೆ ಬಳಕೆಯಾದುವೇ ಹೊರತು ವೈಯಕ್ತಿಕ ಪ್ರದರ್ಶನ ಪ್ರಚಾರಕ್ಕೆ ಬಳಕೆಗೊಳ್ಳಲಿಲ್ಲ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾಗ ಹಾಕಿಕೊಂಡಿದ್ದ ಯೋಜನೆಗಳಾದ ಕನ್ನಡ ವಿಶ್ವಕೋಶ, ವಿಷಯ ವಿಶ್ವಕೋಶ, ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಛಂದಸ್ಸಿನ ಚರಿತ್ರೆ, ಶಾಸನ ಸಂಪುಟಗಳು, ಜಾನಪದ ವಸ್ತು ಸಂಗ್ರಹಾಲಯ ಮುಂತಾದವು ಕಾರ್ಯರೂಪಕ್ಕೆ ಬಂದವು.

ಚಿಕ್ಕಂದಿನಿಂದಲೂ ಸಾಹಿತ್ಯದ ಗೀಳು. ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಬಾಳ್ನೋಟಗಳು ಎಂಬ ಪ್ರಬಂಧ ಸಂಕಲನ ಪ್ರಕಟಿಸುವುದರೊಂದಿಗೆ ೧೩೦ಕ್ಕೂ ಹೆಚ್ಚು ಕೃತಿಗಳ ರಚನೆ. ವೈವಿಧ್ಯಮಯ ವಿಷಯಗಳ ರಸಪಾಕದಂತಿದ್ದ ಅಂಕಣ ಬರಹಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಸಂದರ್ಭಾನುಸಾರ ವಿಚಾರಗಳ ಪ್ರಸ್ತುತತೆಯ ಮೂಲಕ ಆಲೋಚನೆಗಳು ನಿರಂತರ ಬೆಳಕು ಕಾಣುತ್ತಿದ್ದುದೇ ವಿಶಿಷ್ಟ ರೀತಿ. ಅಂಕಣ ಬರಹಕ್ಕೆ ತೂಕ ಮತ್ತು ಗೌರವ ತಂದು ಕೊಡುವುದರೊಂದಿಗೆ ಅಂಕಣ ಬರಹಗಳ ಸಂಗ್ರಹ ‘ಸಂಪ್ರತ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಗೌರವಕ್ಕೆ ಇವರು ಪಾತ್ರರು.

ಬೀದರಿನಲ್ಲಿ ಜರುಗಿದ ಐವತ್ತೇಳನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ತುಳಸಿ ಸಮ್ಮಾನ, ಕರ್ನಾಟಕ ಸರ್ಕಾರದ ಪ್ರಶಸ್ತಿ, ಐಬಿಎಚ್ ಶಿಕ್ಷಣದತ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಮುಂತಾದವು ಇವರಿಗೆ ಸಂದಿವೆ. ಕನ್ನಡದ ಪ್ರೇಮಿ, ಕನ್ನಡದ ವಿದ್ವಾಂಸ, ಕನ್ನಡಕ್ಕೆ ಹಲವಾರು ಮೌಲಿಕ ಮತ್ತು ಸಕಾಲಿಕ ಕೊಡುಗೆಗಳನ್ನು ನೀಡಿದ ಎತ್ತರಕ್ಕೆ ಏರಿಯೂ ಎಲ್ಲರ ಹತ್ತಿರದವರಾಗಿದ್ದ ಔದಾರ್ಯ ವ್ಯಕ್ತಿತ್ವದ ಡಾ| ಹಾಮಾನಾ ಅವರು ೨೦೦೦ ದಲ್ಲಿ ಅಪಾರ ಶಿಷ್ಯವೃಂದ ಮತ್ತು ಅಭಿಮಾನಿಗಳನ್ನು ಅಗಲಿದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s