ಡಾ| ಅನುಪಮಾ ನಿರಂಜನ

ಅನುಪಮಾ ನಿರಂಜನ ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತೆಯಲ್ಲಿ ಎರಡನೆಯ ಘಟ್ಟದ ತಲೆಮಾರಿನ ಲೇಖಕಿಯರಲ್ಲಿ ತಮ್ಮ ಬದುಕು ಬರಹಗಳಿಂದ ವಿಶಿಷ್ಠ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಪ್ರಥಮ ಕಥಾಸಂಕಲನ ಕಣ್ಮಣಿ ೧೯೫೨ರಲ್ಲಿ ಪ್ರಕಟಗೊಂಡಿತು. ನವ್ಯತೆಯ ಸುಳುಹುಗಳು ಕಾಣಿಸುತ್ತಿದ್ದ ಸಂದರ್ಭದಲ್ಲಿ ಅನುಪಮಾ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದರು.

ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದೇ ಅಪರೂಪವಾಗಿದ್ದ ಕಾಲದಲ್ಲಿ ಅನುಪಮಾ ವೈದ್ಯ ಪದವಿಯನ್ನು ಅಲಂಕರಿಸಿದ್ದರು. ಪ್ರಗತಿಶೀಲ ಕಾದಂಬರಿಕಾರ ನಿರಂಜನರ ವಿಚಾರ ಹಾಗೂ ವ್ಯಕ್ತಿತ್ವದಿಂದ ಪ್ರಹಾವಿತರಾಗಿ ಅವರನ್ನು ಪ್ರೀತಿಸಿ ಅಂತರ್ಜಾತೀಯ ವಿವಾಹವಾಗಿ ಸಮಾಜದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಸಮನ್ವಯ ಸಾಧಿಸಿದರು. ವೈದ್ಯಕೀಯ ಸಾಹಿತ್ಯವನ್ನು ಕನ್ನಡಿಗರಿಗೆ ಕೊಟ್ಟ ಅಪರೂಪದ ಲೇಖಕಿ.

ಇವರ ಮೊದಲ ಹೆಸರು ವೆಂಕಟಲಕ್ಷ್ಮಿ. ತೀರ್ಥಹಳ್ಳಿಯಲ್ಲಿ ೧೭ ಮೇ ೧೯೩೪ ರಂದು ಜನಿಸಿದರು. ತಮ್ಮ ದೊಡ್ಡಪ್ಪ ಕೊಂಗಾದಿಯಪ್ಪನವರ ಮೇಜಿನ ಮೇಲಿದ್ದ ದಪ್ಪ ದಪ್ಪ ಪುಸ್ತಕಗಳನ್ನಿಟ್ಟುಕೊಂಡು ಬರೆಯುತ್ತಿದ್ದುದನ್ನು ನೋಡಿದ ಬಾಲಕಿ ಅನುಪಮಾಗೆ ತಾವು ಹಾಗೆ ಬರೆಯಬೇಕೆಂಬ ಬಯಕೆ ಅಂಕುರಿಸಿತು. ಬೇಸಿಗೆ ರಜೆಯಲ್ಲಿ ತಾತನ ಮನೆಯಲ್ಲಿದ್ದ ಪುಸ್ತಕಗಳು ಅವರ ಗಮನ ಸಳೆದವು. ಹೀಗೆ ಸಾಹಿತ್ಯಾಂಕುರವಾದ ಅನುಪಮಾ ಚಿಕ್ಕ ವಯಸ್ಸಿನಲ್ಲಿಯೇ ಶುಭಾ ಮತ್ತು ನಯನಾ ಎಂಬ ಕೈ ಬರಹದ ಎರಡು ಕಥಾಸಂಕಲನಗಳನ್ನು ಸಿದ್ಧಪಡಿಸಿದ್ದರು. ಮಗಳು ಕಥೆ, ಕಾದಂಬರಿ ಹುಚನ್ನು ವಿರೋಧಿಸುತ್ತಿದ್ದರು. ಇಂಟರ್ ಮಿಡಿಯಟನಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಬಡತನದ ಬವಣೆ ಎಂಬ ಕಥೆಗೆ ಬಹುಮಾನ ಬಂದಾಗ ತಾನೂ ಚೆನ್ನಾಗಿ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತು.

ಅವರ ಪ್ರಥಮ ಕಾದಂಬರಿ ಅನಂತ ಗೀತೆ ೧೯೫೪ ರಲ್ಲಿ ಪ್ರಕಟಗೊಂಡಿತು. ೧೯೫೫ ರಲ್ಲಿ ಪ್ರಕಟಗೊಂಡ ಸಂಕೋಲೆಯೊಳಗಿಂದ ಕಾದಂಬರಿಯಲ್ಲಿ ಸ್ತ್ರೀ ಶೋಷಣೆಯ ಚಿಂತನೆಯೊಂದಿಕೆ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ಚಿತ್ರಣ, ರೋಗಿಗಳ ಸಾವು-ನೋವು ಇವುಗಳ ಚಿತ್ರಣವಾಗಿದೆ. ಮಹಿಳೆಯರ ಬಗೆಗೆ ಅಪಾರ ಕಳಕಳಿ ಹೊಂದಿದ್ದ ಅನುಪಮಾ ಅರೋಗ್ಯಕರ ಜೀವನಕ್ಕೆ ಮಾರ್ಗದರ್ಶನ ಮಾಡುವಂತಹ ವಿಶಿಷ್ಠ ಕೃತಿಗಳನ್ನು ರಚಿಸಿದ್ದಾರೆ. ವಧುವಿಗೆ ಕಿವಿಮಾತು, ದಾಂಪತ್ಯ ದೀಪಿಕೆ, ತಾಯಿ-ಮಗು ಇವರ ಪ್ರಸಿದ್ಧ ಕೃತಿಗಳು.

ಅನುಪಮಾ ಕತೆಗಳಿಂದ ಸಾಹಿತ್ಯ ರಚನೆಯನ್ನು ಪ್ರಾರಂಭಿಸಿದರೂ ನಂತರ ಕಾದಂಬರಿ, ಪ್ರವಾಸ ಕಥನ್, ಮಕ್ಕಳ ಸಾಹಿತ್ಯ, ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಕೊಡುಗೆಯನ್ನಿತ್ತಿದ್ದಾರೆ. ನೆನಪು, ಸಿಹಿ-ಕಹಿ, ಬರಹಗಾರ್ತಿಯ ಬದುಕು ಅವರ ಆತ್ಮ ಕಥನಗಳು. ಅಂಗೈಯಲ್ಲಿ ಯೂರೋ ಅಮೇರಿಕೆ ಅವರ ಪ್ರವಾಸ ಕಥನ. ಮಕ್ಕಳಿಗಾಗಿ ದಿನಕ್ಕೊಂದು ಕಥೆಗಳನ್ನು ರಚಿಸಿದ್ದಾರೆ.
ಇವರ ಸಾಹಿತ್ಯ ಸೇವೆಗೆ ೧೯೭೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮತ್ತು ಅದೇ ವರ್ಷ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸಿ, ೧೯೮೩ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.

ಸ್ನೇಹಮಯಿ, ಮಂದಸ್ಮಿತೆ, ಸರಳ ವ್ಯಕ್ತಿತ್ವದ ಸ್ತ್ರೀ ಸಂವೇದನೆಯ ಮಾನವೀಯ ಹೃದಯದ ಒಬ್ಬ ಧೀಮಂತ ಲೇಖಕಿ ಅನುಪಮಾ ನಿರಂಜನ ೧೯೯೧ ರಲ್ಲಿ ನಮ್ಮನ್ನು ಅಗಲಿದರು. ಅವರು ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಕನ್ನಡಿಗರೆಂದಿಗೂ ಮರೆಯಲಾರರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s