ಪಿ. ಲಂಕೇಶ್

ನವ್ಯ ಸಾಹಿತ್ಯದ ಪ್ರಮುಖ ಕವಿ, ಕಥೆಗಾರ, ಕಾದಂಬರಿಕಾರ ವಿಮರ್ಶಕ ಹಾಗೂ ಪತ್ರಿಕೋದ್ಯಮಿಯಾಗಿ ಪ್ರಸಿದ್ಧಿ ಪಡೆದಿರುವ ಪಿ. ಲಂಕೇಶರು ೧೯೩೫ರಲ್ಲಿ ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ ಜನಿಸಿದರು. ಇವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕಾವ್ಯ ಸಂಕಲನಗಳು: ತಲೆಮಾರು, ಬಿಚ್ಚು. ಕಾದಂಬರಿಗಳು: ಮುಸ್ಸಂಜೆಯ ಕಥಾ ಪ್ರಸಂಗ, ಬಿರುಕು, ಅಕ್ಕ. ಕಥಾಸಂಕಲನಗಳು: ನಾನಲ್ಲ, ಕೆರೆಯ ನೀರು ಕೆರೆಗೆ ಚೆಲ್ಲಿ, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ, ಕಲ್ಲು ಕರ್ಗುವ ಸಮಯ ಮತ್ತು ಇತರ ಕಥೆಗಳು. ಚಲನಚಿತ್ರ ನಿರ್ದೇಶನ: ಪಲ್ಲವಿ, ಅನುರೂಪ, ಮುಂತಾದವು. ನಟರಾಗಿ, ಪ್ರಕಾಶಕರಾಗಿ, ಮುದ್ರಕರಾಗಿ, ಸಾಹಿತ್ಯದ ಎಲ್ಲಾ ರಂಗದಲ್ಲಿ ಆಳವಾಗಿ ಇಳಿದ ಒಂದು ಕಾಲಮಾನದ ಮಹತ್ವದ ಲೇಖಕರ ಸಾಲಿನಲ್ಲಿ ನಿಲ್ಲುವ ಬಹುಮುಖಿ ವ್ಯಕ್ತಿತ್ವ ಲಂಕೇಶ್ ೨೦೦೦ರಲ್ಲಿ ಇಹಲೋಕ ತ್ಯಜಿಸಿದರು.

ಎರಡು ದಶಕಗಳ ಕಾಲ ಕನ್ನಡ ನಾಡಿನ ಮನಃಸ್ಥಿತಿಯನ್ನು ಜಾಗೃತವಾಗಿಡುವಷ್ಟು ಚೈತನ್ಯವನ್ನು ಅಂತರ್ಗತಗೊಳಿಸಿಕೊಂಡ ಹೆಸರು. ತನ್ನ ಹೆಸರಿನ ಪತ್ರಿಕೆಯೊಂದು ತನ್ನ ನಂತರವೂ ಇಷ್ಟು ಗಾಢವಾದ ಅನೂಹ್ಯವಾದ ಪ್ರಭಾವವನ್ನು ಹೋಮ್ದಿರಬಲ್ಲದು ಎನ್ನುವುದು ಲಂಕೇಶ ಅರಿತಿದ್ದರೋ ಇಲ್ಲವೋ ತಿಳಿಯದು. ಬದುಕನ್ನು ತನ್ನಿಷ್ಟದಂತೆಯೇ ಬದುಕಿದ ಅಪರೂಪದ ವ್ಯಕ್ತಿ. ಹಾಗಿರದಿದ್ದರೆ ಹುಳಿ ಮಾವಿನ ಮರ ದಂತಹ ಅಪರೂಪದ ಆತ್ಮಕತೆಯೊಂದು ಹೊರಬರುತ್ತಿರಲಿಲ್ಲ.

ತಮ್ಮ ಮಗ ಇಂದ್ರಜಿತ್ ಹಿಂದೊಮ್ಮೆ ಬೆಂಗಳೂರಿನಲ್ಲಿ ಒಂದು ಸಣ್ಣ ಅಪಘಾತದಲ್ಲಿ ಸಿಲುಕಿ ಲಂಕೇಶರ ಹೆಸರು ಬಳಸಿ ಪಾರಾಗಿ ಬಂದಾಗ ಲಂಕೇಶರು ಇನ್ನೊಮ್ಮೆ ಇಂಥಾ ಕೆಲಸ ಮಾಡಿ ನನ್ನ ಹೆಸರನ್ನು ಎಲ್ಲೂ ಬಳಸತಕ್ಕದ್ದಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದ್ದರು. ಎಂದೂ ತಾನೊಂದು ಪತ್ರಿಕೆಯ ಸಂಪಾದಕ ಎಂದು ರಿಯಾಯಿತಿ ಪಡೇದವರಲ್ಲ. ಅತ್ಯಂತ ತತ್ವನಿಷ್ಟೆಯ ಮೂಲಕ ಎರಡು ದಶಕಗಳಷ್ಟು ಕಾಲ ಯಾವುದೇ ಜಾಹೀರಾತುಗಳಿಲ್ಲದೆಯೂ ಅವರು ಪತ್ರಿಕೆಯನ್ನು ನಡೆಸಿದ್ದರು. ಅದು ಕೇವಲ ಪತ್ರಿಕೆಯಾಗಿರದೆ, ನಾಡಿನ ಪ್ರಜ್ಞಾವಂತ ಮನಸ್ಸುಗಳ ಮೂರ್ತ ರೂಪವಾಗಿತ್ತು. ತೀರಾ ಸಾಮಾನ್ಯ ಬರವಣಿಗೆ ಎನ್ನುವುದು ಕೂಡ ಲಂಕೆಷ ಪತ್ರಿಕೆಯ ಸಹವಾಸಕ್ಕೆ ಬಂದದ್ದೇ ಅಗಾಧವಾದ ಪ್ರಚುರತೆಯನ್ನು ಪಡೆಯುತ್ತಿತ್ತು.

ಲಂಕೇಶ್ ಮೂಲತಃ ಅಧ್ಯಾಪಕರು. ಅಪಾರವಾದ ಓದು, ವ್ಯಾಪಕವಾದ ಬರವಣಿಗೆಯ ಮೂಲಕ ಅವರು ಗುರುತಿಸಿಕೊಂಡಿದ್ದರೂ ಉತ್ತಮ ಬೋಧಕರಾಗಿ ಲಂಕೇಶ ವಿದ್ಯಾರ್ಥಿಗಳ ವಲಯದಲ್ಲಿ ಗಮನ ಸೆಳೆಯಲಿಲ್ಲ. ಲಂಕೇಶರಂತಹ ಗದ್ಯ ಬರಹಗಾರರು ಕನ್ನಡ ನಾಡಿನ ಬಹುದೊಡ್ಡ ಆಸ್ತಿ. ಯಾವುದನ್ನೆ ಬರೆಯಲಿ ಅದರ ಪ್ರಕಾರದ ತಾತ್ವಿಕ ಚೌಕಟ್ಟಿಗೆ ತಕ್ಕ ಹಾಗೆಯೇ ಬರೆಯುವ ಲಂಕೇಶ ಎಲ್ಲೂ ವಿಮರ್ಶೆಯನ್ನು ತುತ್ತೂರಿ ಮಾಡಿ ಊದಿದವರಲ್ಲ. ಬೋದಿಲೇರನಂಥ ಫ್ರೆಂಚ್ ಕವಿಯನ್ನು ಕನ್ನಡದ ಜನರಿಗೆ ಪರಿಚಯಿಸಿದ ರೀತಿಯೇ ಅನನ್ಯ. ಒಂದು ವಾರಪತ್ರಿಕೆಯನ್ನು ಪ್ರತಿ ಬುಧವಾರ ಸಂಜೆ ಬಸ್ ನಿಲ್ದಾಣದ ಬುಕ್ ಸ್ಟಾಲಗಳಲ್ಲಿ ಕಾದು ನಿಂತು, ಖರೀದಿಸಿ ಓದುವ ಆರೋಗ್ಯಕರ ಪರಂಪರೆಯನ್ನು ಲಂಕೇಶ ಪತ್ರಿಕೆಯ ಹಾಗೆ ಮತ್ತಾವುದೂ ಬೆಳೆಸಲಿಲ್ಲ. ಪತ್ರಿಕೆಯನ್ನು ಬೆಳೆಸುವ ಜೊತೆಗೆ ಅನೇಕ ಹೊಸ ಲೇಖಕರನ್ನೂ ಬೆಳಸಿದರು. ಮಾನವ ಸಹದ ದೌರ್ಬಲ್ಯಗಳು ಅವರಲ್ಲಿದ್ದವು. ಆದರೆ ಆ ದೌರ್ಬಲ್ಯಗಳನ್ನು ಬಳಸಿ ಅವರು ಬೇರೆಯವರನ್ನು ಶೋಷಣೆ ಮಾಡಲಿಲ್ಲ. ಆ ದೌರ್ಬಲ್ಯಗಳಿಗೆ ತಮ್ಮನ್ನೇ ತಾವು ಒಗ್ಗಿಸಿಕೊಂಡರು. ಸತತ ಅಧ್ಯಯನ ಮತ್ತು ಬರವಣಿಗೆಯ ಮೂಲಕ ಕ್ರಿಯಾಶೀಲರಾಗಿರುತ್ತಿದ್ದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s