ಸುದರ್ಶನ ದೇಸಾಯಿ

ಸುದರ್ಶನ ಕೃಷ್ಣರಾವ ಮುತಾಲಿಕದೇಸಯಿ ಎಂಬುದು ಅವರ ಪೂರ್ಣ ಹೆಸರು. ಸಾಹಿತ್ಯ ಕ್ಷೇತ್ರದಲ್ಲಿ ಸುದರ್ಶನ ದೇಸಾಯಿ ಎಂದೇ ಪರಿಚಿತರು. ಇವರು ಹುಟ್ಟಿದ್ದು ೧೯೪೫ರ ಸಂಕ್ರಾಂತಿಯ ದಿನ. ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಹಾಗೂ ಟಿ.ಸಿ.ಎಚ್ ತರಬೇತಿ ಪಡೆದದ್ದು ಧಾರವಾಡದಲ್ಲಿ. ಹಿಂದಿ ವಿಷಯದಲ್ಲಿ ಆಸಕ್ತಿ ಹೊಂದಿದ ಅವರು ಹಿಂದಿ ವಿಶಾರದ ಪದವಿ ಪಡೆದರು. ದಾಂಡೇಲಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಆ ಹೊತ್ತಿಗೆ ಚೌಪದಿ ಕವಿ ಎಂದು ಪ್ರಸಿದ್ಧರಾದ ದಿನಕರ ದೇಸಾಯಿ ಅವರ ಪರಿಚಯವಾಯಿತು, ಇದರಿಂದ ಇವರ ಸಾಹಿತ್ಯಾಸಕ್ತಿ ವೃದ್ಧಿಸಲು ಆರಂಭಿಸಿತು. ನಂತರ ಧಾರವಾಡ ವಲಯದ ಗುಲಗಂಜಿಕೊಪ್ಪದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಆರಂಭಿಸಿ ೩೨ ವರ್ಷ ಸೇವೆ ಸಲ್ಲಿಸಿ ಉಣಕಲ್ಲ ಶಾಲೆಯಿಂದ ಸ್ವಯಂನಿವೃತ್ತಿ ಪಡೆದರು.

ಸಾಹಿತ್ಯ ಕ್ಷೇತ್ರದಲ್ಲಿ ೧೯೭೯ ರಿಂದ ತೊಡಗಿಸಿಕೊಂಡರು. ಮೂಲತಃ ಸಣ್ನಕತೆಗಾರರಾಗಿ ಸುಮಾರು ೫೦ರಷ್ಟು ರೋಚಕ ಕಥೆಗಳನ್ನು ರಚಿಸಿದ್ದಾರೆ. ೨೦-೨೫ ಹಾಸ್ಯ ಲೇಖನಗಳನ್ನು ರಚಿಸಿದ್ದಾರೆ. ೮-೧೦ ಬಾನುಲಿ ನಾಟಕಗಳನ್ನು, ೧೫-೨೦ ಸಾಮಾಜಿಕ ವೈಜ್ಞಾನಿಕ, ಮನೋವೈಜ್ಞಾನಿಕ ಕಾದಂಬರಿಗಳನ್ನು ೫೦ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ರಚಿಸಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿ, ಸಾಂಸ್ಕೃತಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸುದರ್ಶ ದೇಸಾಯಿ ಅವರು ಸಾಹಿತ್ಯ ಸಂಗೀತ ಕಲಾನಿಕೇತನ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆ ಮೂಲಕ ತಮ್ಮ ಕುಟುಂಬದ ಸದಸ್ಯರೆಲ್ಲರನ್ನು ಆ ಸಂಸ್ಥೆಯ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿದರು. ಈ ಎಲ್ಲಾ ಸಂಘಟನೆಯ ಪೂರ್ಣ ಜವಾಬ್ದಾರಿಯನ್ನು ಪತ್ನಿ ಸುಜಾತಾ ದೇಸಾಯಿ ಅವರಿಗೆ ವಹಿಸಿದರು. ಅವರ ಮೂರು ಹೆಣ್ಣುಮಕ್ಕಳನ್ನೊಳಗೊಂಡಂತೆ ಸುವಿರೇಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಹಲವಾರು ಪ್ರಕಟಣೆ ಮಾಡಿದ್ದು ಕೂಡ ಅವರ ಸಾಹಸದ ಕೆಲಸವೇ ಸರಿ.

ಅವರು ರಚಿಸಿದ ಕಾದಂಬರಿಗಳಲ್ಲಿ ಹಲವು ಚಲನಚಿತ್ರಗಳಾಗಿ ಪರದೆಯ ಮೇಲೆ ಬಂದವು. ಮಾನಸ ಸರೋವರ, ಅರುಣರಾಗ, ಮುದುಡಿದ ತಾವರೆ ಅರಳಿತು, ಇಬ್ಬನಿ ಕರಗಿತು, ಬಾಡದ ಹೂವು, ಶರವೇಗದ ಸರದಾರ, ಕೆರಳಿದ ಸರ್ಪ, ಎಂಟೆದೆಯ ಬಂಟ, ಮೃತ್ಯುಬಂಧನ ಅಶ್ವಮೇಧ ಮುಂತಾದವು. ಅವುಗಳಲ್ಲಿ ಹಲವಕ್ಕೆ ಕಥೆ, ಕಥಾ ಟಿಪ್ಪಣಿ, ಸಂಭಾಷಣೆ ರಚಿಸುವಲ್ಲಿ ಯಶಸ್ವಿಯಾದರು.

ಅವರ ಅಪರಿಚಿತ, ಸಪ್ತಪದಿ, ಕರಿನಾಯಿ ಹಾಗೂ ನೆಲುವಿಗೆ ಹಾರದ ಬೆಕ್ಕು ಮುಂತಾದ ಕಥೆಗಳಿಗ ರಾಜ್ಯಮಟ್ಟದ ಬಹುಮಾನ ಬಂದಿವೆ. ಎರಡು ಬಾರಿ ರಾಜ್ಯ ಮಟ್ಟದ ಪತ್ತೇದಾರಿ ಸಾಹಿತ್ಯ ಸಮ್ಮೇಳನ ಸಂಘಟಿಸುವಲ್ಲಿ ಅವರು ಯಶಸ್ವಿಯಾದರು. ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯ ಎಂಬ ಅವರ ಸಂಶೋಧಕನಾತ್ಮಕ ಕೃತಿ ಒಂದು ಆಕರ ಗ್ರಂಥವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅವರು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡವರು. ಇವರಿಗೆ ೧೯೯೧ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನುಪಮ ಸೇವೆಗಾಗಿ ೧೯೯೮ರಲ್ಲಿ ರಾಷ್ಟ್ರಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ದೊರೆಯಿತು.

ಧಾರವಾಡದ ಸಾರಸ್ವತಪುರ ಬಡಾವಣೆಯೊಂದಕ್ಕೆ ಸುದರ್ಶನ ದೇಸಾಯಿ ಕಾಲೊನಿ ಎಂದು ನಾಮಕರಣ ಮಾಡಲಾಗಿದೆ. ನಾಟಕಕ್ಕೆ ಮೀಸಲಾದ ರಂಗತೋರಣ ಪತ್ರಿಕೆಯನ್ನು ತಮ್ಮ ಸಂಪಾದಕತ್ವದಲ್ಲಿ ಹೊರತರುವ ಸಂದರ್ಭದಲ್ಲಿ ಪತ್ರಿಕೆಗೆ ನಾಟಕ ಅಕಾಡೆಮಿಯ ಸುವರ್ಣ ಕರ್ನಾಟಕ ಪ್ರಶಸ್ತಿ ಬಂತು. ನಟನಾ ಕೌಶಲ್ಯ್ವನ್ನು ಪಡೆದ ಸುದರ್ಶನ ದೇಸಾಯಿ ಸ್ವತಃ ವೃತ್ತಿ ನಾಟಕ ಕಂಪನಿ ಕಟ್ಟಿ ತಾವೇ ಸ್ವತಃ ನಾಯಕ, ಖಳನಾಯಕ, ಚಾರಿತ್ರಿಕ ಪಾತ್ರ ಹಾಗು ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಯಶಸ್ವಿಯಾದವರು. ಕನಿಷ್ಠ ೨೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ದೇಸಾಯಿಯವರು ನೋವು ನಲಿವನ್ನು ಅನುಭವಿಸಿದವರು. ಇವರು ೨೦೧೨ರಂದು ಇಹಲೋಕದ ಯಾತ್ರೆ ಮುಗಿಸಿದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s