ಸಾರಾ ಅಬೂಬಕ್ಕರ

೨೦ನೇ ಶತಮಾನದ ಎಪ್ಪತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಹೊಸ ಅಲೆಗಳು ಕಾಣಿಸಿಕೊಂಡವು. ತಮ್ಮ ಅಸ್ತಿತ್ವದ ಬಗೆಗೆ, ವಿಶಿಷ್ಟತೆಯ ಬಗೆಗೆ ಚಿಂತಿಸಲು ಪ್ರಾರಂಭಿಸಿದವರಲಿ ಮಹಿಳೆಯರು ಮತ್ತು ಮುಸ್ಲಿಂ ಲೇಕಕರು ಸೇರಿದರೆನ್ನುವುದು ಗಮನಾರ್ಹ. ಿವರು ತಮ್ಮ ಧರ್ಮದಲ್ಲಿ ನಡೆಯುತ್ತಿರುವ ಶೋಷಣೆಗಳನ್ನು, ಅಲ್ಲಿನ ದೋಷಗಳನ್ನು ಅಂಧಸಂಪ್ರದಾಯಗಳನ್ನು ಕನ್ನಡ ಸಾಹಿತ್ಯದಲ್ಲಿ ಅಭಿವ್ಯಕ್ತಿಸಲು ಪ್ರಾರಂಭಿಸಿದರು. ಇಂತಹ ಲೇಖಕರಲ್ಲಿ ಸಾರಾ ಅಬೂಬಕ್ಕರ ಅವರ ಹೆಸರು ಮಹತ್ವದಾಗಿರುತ್ತದೆ. ಇವರು ಸ್ವಧರ್ಮ, ಸ್ವಸಮಾಜ, ಸ್ವಸಂಸ್ಕೃತಿಯ ಪರಾಮರ್ಶ, ಪರಿಷ್ಕರಣದ ಬಹುದೊಡ್ಡ ಸಾಮಾಜಿಕ ಹೊಣೆಗಾರಿಕೆಯಿಂದ ತಮ್ಮ ಸಮಾಜದ ಸಾಮಾಜಿಕ ವಾಸ್ತವವನ್ನು ಅನಾವರಣಗೊಳಿಸುವ ಸಾಹಸಕ್ಕಿಳಿದಿರುವ ಲೇಖಕಿ. ಇವರ ಪ್ರಯತ್ನ ತುಂಬಾ ಸಂಘರ್ಷದ ಮಾರ್ಗವಾಗಿದೆ.
ಕಾಸರಗೋಡಿನ ಹತ್ತಿರ ಚಮನನಾಡು ಎಂಬ ಹಳ್ಳಿ ಸಾರಾ ಅವರ ಹುಟ್ಟೂರು. ಸುಸಂಸ್ಕೃತ ಮತ್ತು ವಿದ್ಯಾವಂತ ಮನೆತನದಲ್ಲಿ ಹೆಣ್ಣುಮಕ್ಕಳಿಗಾಗಿ ಹರಕೆ ಹೊತ್ತು ಹೆತ್ತ ಮಗು ಸಾರಾ. ಇವರ ತಂದೆ ಪ್ರಸಿದ್ಧ ವಕೀಲರಾಗಿದ್ದರು. ಅವರ ವೈಚಾರಿಕ ಪ್ರಜ್ಞೆಯಿಂದ ತಮ್ಮ ಸಮುದಾಯದ ನೀತಿಯನ್ನು ಹುಸಿಗೊಳಿಸಿ ತಮ್ಮ ಮಗಳು ಸಾರಾ ಅವರನ್ನು ವಿದ್ಯಾವಂತರನ್ನಾಗಿಸಿದರು. ಕಾಸರಗೂಡಿನಲ್ಲಿ ಶಾಲೆಗೆ ಹೋಗುವ ಪ್ರಥಮ ಮುಸ್ಲಿಂ ಹುಡುಗಿಯಾಗಿದ್ದ ಕಾರಣ ಅವರು ತಮ್ಮ ಸಮುದಾಯದ ಜನರಿಂದ ಅನೇಕ ಕಿರುಕುಳ ಅನುಭವಿಸಿದರು. ಪ್ರಥಮವೆನ್ನುವುದೆಲ್ಲಾ ಸಂಘರ್ಷದಿಂದ ಕೂಡಿರುತ್ತದೆನ್ನುವುದಕ್ಕೆ ಸಾರಾ ಅವರ ವಿದ್ಯಾಭ್ಯಾಸವೇ ಸಾಕ್ಷಿ. ಈ ಕಷ್ಟಗಳ ನಡುವೆಯೇ ಅವರು ಎಸ್.ಎಸ್.ಎಲ್.ಸಿ ವರೆಗಿನ ಶಿಕ್ಷಣ ಪೂರ್ತಿಗೊಳಿಸಿದರು.

ಎಕ್ಸಿಕ್ಯೂಟೀವ್ ಎಂಜಿನಿಯರ್ ಎಂ. ಅಬೂಬಕ್ಕರ ಅವರೊಂದಿಗೆ ಸಾರಾ ಅವರ ವಿವಾಹ ನಡೆಯಿತು. ಅವರದು ಅತ್ಯಂತ ದೊಡ್ಡ ಸಂಪ್ರದಾಯಸ್ಥ ಕುಟುಂಬ. ಕಟ್ಟುನಿಟ್ಟಾಗಿ ಬುರ್ಕಾ ಪದ್ಧತಿ ಪಾಲಿಸುತ್ತಿದ್ದರು. ಆ ಮನೆಯಲ್ಲಿ ಸಾರಾ ಅವರಿಗೆ ಪತ್ರಿಕೆಗಳನ್ನು ಓದಲು ಕಷ್ಟವಾಗುತ್ತಿತ್ತು. ಎಲ್ಲರೂ ಓದಿದ ನಂತರ ಹರಿದ ಚೂರು ಚೂರಾದ ಪತ್ರಿಕೆಗಳನ್ನು ಹೊಂದಿಸಿಕೊಂಡು ರಾತ್ರಿಯೇ ಓದಬೇಕಾದ ಸಂದರ್ಭ. ತಮ್ಮ ಪತಿಗೆ ಬೆಂಗಳೂರಿಗೆ ವರ್ಗಾವಣೆಯಾದ ಸಂದರ್ಭವು ಸಾರಾ ವರಿಗೆ ಪಂಜರದ ಹಕ್ಕಿಯನ್ನು ಹಾಇ ಬಿಟ್ಟಂತಾಯಿತು. ಅಲ್ಲಿಂದ ಸಾರಾ ಅವರ ಅಧ್ಯಯನ ಪ್ರಾರಂಭವಾಗಿ, ತಾವು ಲೇಖಕಿಯಾಗಬೇಕೆಂಬ ಆಶೆ ಮೂಡಿತು. ಅಂಕುರಗೊಂಡ ಭಾವನೆಗಳನ್ನು ಸಾಧಿಸಲು ಸಾರಾ ಅವರಿಗೆ ನಲ್ವತ್ತೈದು ವರ್ಷ ಆಗುವವರೆಗೂ ಸಾಧ್ಯವಾಗಲಿಲ್ಲ. ಬಿಜಾಪುರದ ನಾಜಿಮಾ ಭಾಂಗೆ ಎಂಬ ಮುಸ್ಲಿಂ ಮಹಿಳೆ ಸಿನೇಮಾ ನೋಡಬಾರದು ಎಂಬ ಫತ್ವಾ ಹೊರಡಿಸಿದರ ವಿರುದ್ಧ ಸಿಡಿದೆದ್ದ ಸಮಾಜದಿಂದ ಬಹಿಷ್ಕಾರ ಹೊಂದಿದ್ದಳು ಈ ಫತ್ವಾ ವಿರೋಧಿಸಿ ಭಾಂಗೆಗೆ ಕೊಟ್ಟ ಕಿರುಕುಳ ವಿರೋಧಿಸಿ ಸಾರಾ ವರ ಪ್ರತಿಕ್ರಿಯೆಯನ್ನು ಲಂಕೇಶ ಪತ್ರಿಕೆ ಪ್ರಕಟಿಸಿತು. ಈ ಪ್ರತಿಕ್ರಿಯೆ ನೋಡಿ ಪಿ. ಲಂಕೇಶ ಅವರು ತಮ್ಮ ಧರ್ಮದ ಕುರಿತು ಒಂದು ಕಾದಂಬರಿ ಬರೆದು ಕೊಡಿಯೆಂದು ಕೇಳಿದ ಕಾರಣ ಸಾರ ಅವರು ಚಂದ್ರಗಿರಿ ತೀರದಲ್ಲಿ ಕಾದಂಬರಿ ಬರೆದರು.
ಇವರು ಸೃಜನ ಮತ್ತು ಸೃಜನೇತರ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತೆರಡು ಕೃತಿಗಳನ್ನು ರಚಿಸಿದ್ದಾರೆ. ಸಹನಾ, ವಜ್ರಗಳು, ಕದನ ವಿರಾಮ, ಸುಳಿಯಲ್ಲಿ ಸಿಕ್ಕವರು ಮುಂತಾದ ಕಾದಂಬರಿಗಳನ್ನು, ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡಾ ಎಂಬ ಕಥಾ ಸಂಕಲಗಳನ್ನು, ಲೇಖನಗುಚ್ಛ, ಅನಾವರಣ ಎಂಬ ವಿಚಾರ ಸಾಹಿತ್ಯ ಕುರಿತ ಸಂಕಲನಗಳನ್ನು ರಚಿಸಿದ್ದಾರೆ. ಹೊತ್ತು ಕಂತುವ ಮುನ್ನ ಎಂಬ ಆತ್ಮಕಥೆ ಕೃತಿಗಳನ್ನು ರಚಿಸಿ ಸಾರಾ ಅವರು ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಒಂದು ಛಾಪನ್ನು ಒತ್ತಿದ್ದಾರೆ.
ಲೇಖನ ಗುಚ್ಛ ಮತ್ತು ಅನಾವರಣ ಇವರ ವೈಚಾರಿಕ ಸಾಹಿತ್ಯ ಕುರಿತಾದ ಕೃತಿಗಳು. ಇಲ್ಲಿ ಇವರ ಧರ್ಮದಲ್ಲಿ ಮಹಿಳಾ ಶೋಷಣೆಯ ಕಾರಣಗಳನ್ನು ಶೋಧಿಸುತ್ತಾರೆ. ಪ್ರಶ್ನಾತೀತವಾದ ಇವರ ಧರ್ಮದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಧರ್ಮದ ಅನೇಕ ವಲಯಗಳಿಂದಲೂ ಮಹಿಳಾ ಶೋಷಣೆ ನಡೆಯುತ್ತದೆ, ಈ ಧರ್ಮದ ಕುರುಡು ನಂಬಿಕೆಗಳು, ಕಾನೂನುಗಳು, ಮಹಿಳಾ ಮಸೂದೆಗಳೆಲ್ಲವೂ ಮಹಿಳೆಯರ ಸ್ಥಿತಿ ಗೌಣವಾಗಿರಲು ಕಾರಣವಾಗಿದೆ ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.
ಹೀಗೆ ಸಾರಾ ಅವರು ಮುಸ್ಲಿಂ ಸಮುದಾಯದ ಧಾರ್ಮಿಕ, ಸಾಮಾಜಿಕ, ನೈತಿಕ ವ್ಯವಸ್ಥೆಯ ಸ್ತ್ರೀ ವಿರೋಧಿ ನೀತಿಯನ್ನು ಅತ್ಯಂತ ನಿರ್ಭೀತಿಯಿಂದ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಬರಹಗಳಲ್ಲಿ ಪ್ರಶ್ನಿಸುತ್ತಾ, ಸ್ತ್ರೀಪರ ಜೀವಪರ ವ್ಯವಸ್ಥೆಯ ನಿರ್ಮಾಣಕ್ಕಾಗಿ ಸೃಜನಾತ್ಮಕವಾಗಿ ಪ್ರಯತ್ನಿಸಿದ್ದಾರೆ. ಅವರ ಮೊದಲ ಕಾದಂಬರಿ ತಮಿಳು, ಇಂಗ್ಲೀಷ್ ಮತ್ತು ಇತರ ಭಾಷೆಗಳಿಗೆ ಭಾಷಾಂತರಗೊಂಡಿದೆ. ಹೀಗೆ ಸಮಾಜದ ಶುದ್ಧೀಕರಣವನ್ನಿಟ್ಟುಕೊಂಡು ಕನ್ನಡ ಸಾಹಿತ್ಯದಲ್ಲಿ ಅತ್ಯಂತ ತೀವ್ರವಾಗಿ ಮುಸ್ಲಿಂ ಮಹಿಳಾ ಸಂವೇದನೆಯನ್ನು ಅಭಿವ್ಯಕ್ತಿಸಿದ ಸಾರಾ ಅವರ ಸಾಹಿತ್ಯಕ್ಕೆ ವಿಶಿಷ್ಟ ಮೌಲ್ಯ ದೊರೆತಿದೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s