ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ಒಬ್ಬ ಸಾಮಾನ್ಯ ವ್ಯಕ್ತಿ ಉದಾತ್ತ ಆದರ್ಶಗಳನ್ನು ಇಟ್ಟುಕೊಂಡರೆ ಎಷ್ಟೊಂದು ಎತ್ತರಕ್ಕೆ ಏರಬಲ್ಲನು ಎಂಬುದಕ್ಕೆ ಅಣ್ಣಾರಾಯರ ವ್ಯಕ್ತಿತ್ವ ಒಂದು ಜೀವಂತ ಸಾಕ್ಷಿಯಾಗಿದೆ. ಅಣ್ಣಾರಾಯರು ಕತೆಗಾರ, ಕಾದಂಬರಿಕಾರ, ಪ್ರಬಂಧಕಾರ, ಸಂಶೋಧಕ, ಚಿಂತಕ, ತತ್ತ್ವವೇತ್ತ ಆದರ್ಶ ಶಿಕ್ಷಕ, ಸರಳ ಆದರ್ಶಜೀವಿಯಾಗಿ ತೋರಿದ ವಿಶೇಷತೆಗಳು ಈ ಮಾತಿಗೆ ನಿದರ್ಶನವೆನಿಸಿವೆ. ಮಹಾರಾಷ್ಟ್ರ-ಕರ್ನಾಟಕ ಗಡಿ ಪ್ರದೇಶವಾದ ಸೇಡಬಾಳ ಗ್ರಾಮವು ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತವಾಗಿರುವುದು ಮಿರ್ಜಿ ಅಣ್ಣಾರಾಯರಿಂದ.
ಸೇಡಬಾಳ ಗ್ರಾಮದ ಜೈನ ಒಕ್ಕಲಿಗೆ ಕುಟುಂಬದಲ್ಲಿ ೧೯೧೮ರ ಆಗಸ್ಟ್ ೨೫ರಂದು ಅಣ್ಣಾರಾಯರ ಜನನ. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿಯೇ ಪೂರೈಸಿತು. ಇಂಗ್ಲೀಷ್ ಶಾಲೆಗೆ ಕಳಿಸುವಷ್ಟು ಸ್ಥಿತಿವಂತರಾಗಿರಲಿಲ್ಲ ಅವರ ತಂದೆ. ಕನ್ನಡ ಮುಲ್ಕಿ ಪರೀಕ್ಷೆವರೆಗೆ ಮಾತ್ರ ಓದು ಪೂರೈಸಿದರು. ಹಿಂದಿ ಪ್ರಾಕೃತ, ಸಂಸ್ಕೃತ ಭಾಷೆಗಳ ಸ್ವಂತ ಅಭ್ಯಾಸದಿಂದ ಮಾಡಿಕೊಂಡು, ಸ್ವಯಂ ಪ್ರೇರಣೆಯಿಂದ ಗುರಜಾತಿ, ಇಂಗ್ಲೀಷ್ ಭಾಷೆಗಳನ್ನು ರೂಢಿಸಿಕೊಂಡರು. ಅಣ್ಣಾರಾಯರಲ್ಲಿ ವಾಚನಭಿರುಚಿ, ಜಿಜ್ಞಾಸೆಗಳ ಬೀಜ ಬಿತ್ತಿದ ಗುರುಗಳೆಂದರೆ ಅಚ್ಯುತರಾವ ಪದಕಿ ಮಾಸ್ತರರು.
ಚಲೇಜಾವ್ ಚಳುವಳಿಯಲ್ಲಿಯೂ ಅಣ್ಣಾರಾಯರ ಪಾತ್ರವಿದ್ದೇ ಇತ್ತು. ಮಳವಾಡ ಎಂಬ ಗ್ರಾಮದಲ್ಲಿ ರಹಸ್ಯವಾಗಿ ಕರ್ನಾಟಕ ನೇತರರಾಗಿದ್ದ ರಂಗನಾಥ ದಿವಾಕರರ ಆದೇಶದಂತೆ ಚಳುವಳಿಗೆ ಸಂಬಂಧಿಸಿ ಬುಲೆಟಿನ್ ಹೊರಡಿಸುವಲ್ಲಿ ಸಕ್ರಿಯ ಭಾಗವಹಿಸಿದರು. ೧೯೩೯ರಲ್ಲಿ ಪ್ರಾಥಮಿಕ ಶಿಕ್ಷಕರೆಂದು ಉಗಾರದಲ್ಲಿ ಸೇವೆಗೆ ತೊಡಗಿದ ಇವರು ಮುಂದೆ ಮಾಂಜರಿ, ಸೇಡಬಾಳಗಳಲ್ಲಿ ಕಾರ್ಯ ಮಾಡಿದರು. ಎಸ್. ಎಸ್. ಸಿ ಯ ಅಭ್ಯಾಸ ನಡೆಸಿ ೧೯೩೫ ರಲ್ಲಿ ತೇರ್ಗಡೆ ಹೊಂದಿದರು. ತುಂಬ ಉತ್ಸಾಹದಿಂದ ತಮ್ಮ ಕಾರ್ಯವನ್ನು ನಿವಹಿಸುತ್ತ ಸೇಡಬಾಳ ಶಾಲೆಯ ಮುಖ್ಯಾಧ್ಯಾಪಕರೂ ಆದರು. ಆ ಶಾಲೆಯ ಶತಮಾನೋತ್ಸವವನ್ನೂ ಆಚರಿಸಿದರು. ಸೇಡಬಾಳದ ಶತಮಾನ ಎಂಬ ಗ್ರಂಥವನ್ನು ಹೊರತಂದರು. ೧೯೬೯ರಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಪಡೆದರು.
ಮನೆಯಲ್ಲಿ ತಮ್ಮದೇ ಆದ ಒಂದು ಪುಸ್ತಕ ಭಂಡಾರವನ್ನು ಕಟ್ಟಿಕೋಂಡರು. ಮೊದ ಮೊದಲು ಇಂದುತನಯ ಎಂಬ ಕಾವ್ಯನಾಮದಿಂದ ಕವಿತೆ ಕತೆಗಳನ್ನು ಬರೆಯತೊಡಗಿದರು. ಧಾರವಾಡದಲ್ಲಿದ್ದಾಗ ಅಲ್ಲಿನ ಪ್ರಮುಖ ಸಾಹಿತಿಗಳ ಪರಿಚಯ ಬೆಳೆಸಿಕೊಂಡರು. ಇವರ ಬರವಣಿಗೆಯ ಮೊದಲ ಕುಡಿಗಳು ಕಾಣಿಸಿಕೊಂಡದ್ದು ಜಯಂತಿ, ಜೀವನ, ಜಯ ಕರ್ನಾಟಕ, ಪ್ರಬುದ್ಧ ಕರ್ನಾಟಕ ಪತ್ರಿಕೆಗಳಲ್ಲಿ.
೧೯೪೫ರಲ್ಲಿ ಪ್ರಕಟವಾದ ಇವರ ನಿಸರ್ಗ ಕಾದಂಬರಿ ತುಂಬ ಜನಪ್ರಿಯವಾಗಿ ಸಾಹಿತಿಗಳ ಗಮನ ಸೆಳೆಯಿತು. ನಿಸರ್ಗ ಕಾದಂಬರಿಯ ಯಶಸ್ಸು ಜನಪ್ರಿಯತೆಗಳು, ಅದಕ್ಕೆ ದೊರಕಿದ ಪುರಸ್ಕಾರ, ಪ್ರಶಸ್ತಿ, ಬಹುಮನಗಳಿಂದಲೇ ಇವರ ಪ್ರೌಢಿಮೆ ಪ್ರಮಾಣೀತವಾಗುತ್ತದೆ. ಮುಂಬಯಿ ಸರಕಾರದ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ ಮತ್ತು ದೇವರಾಜ ಬಹಾದ್ದೂರ್ ಪಾರಿತೋಷಕಗಳನ್ನು ಇಲ್ಲಿ ಉದಾಹರಿಸಬಹುದು. ಡಾ| ಶಿವರಾಮ ಕಾರಂತರು ನಿಸರ್ಗ ಕಾದಂಬರಿ ಒಂದು ಅಮೂಲ್ಯವಾದ ಮುತ್ತು ಎಂದು ಉದ್ಗಾರ ತೆಗೆದಿದ್ದರು. ಇಂತಹ ಹತ್ತು ಕಾದಂಬರಿಗಳು ಬಂದರೆ ಸಾಕು, ಕನ್ನಡದ ದಾರಿದ್ರ್ಯ ದೂರಾಗುತ್ತದೆ ಎಂದು ಪ್ರಶಂಸೆ ಮಾಡಿದ್ದರು.
ಬೇಂದ್ರೆ ಕಾವ್ಯವನ್ನು ಗುರಿಬದ್ಧವಾಗಿ ಅಭ್ಯಾಸ ಮಾಡಿದುದರ ಫಲವಾಗಿ ದತ್ತವಾಣಿ ಎಂಬ ಕೃತಿ ಹೊರಬಂದುದನ್ನೂ ರಾಷ್ಟ್ರ ಪುರುಷ ಕಾದಂಬರಿ ತಂತ್ರಕ್ಕಾಗಿ ಸಾಹಿತ್ಯ ಪ್ರಕಾರಗಳ ಮತ್ತು ಹೊಸ ಹೊಸ ತಂತ್ರಗಳ ಅಭ್ಯಾಸ ಮಾಡಿದುದರ ಫಲವಾಗಿ ಲೇಖನ ಕಲೆ ಎಂಬ ಕೃತಿ ಹೊರಬಂದುದನ್ನು ಇಲ್ಲಿ ನೆನೆಯಬಹುದು. ಶಿಕ್ಶಣ ತರಬೇತಿಯಲ್ಲಿ ಹೊಸ ಹೊಸ ಶಿಕ್ಷಣ ಯೋಜನೆಗಳನ್ನು ಅಭ್ಯಾಸ ಮಾಡಿದ ಫಲವಾಗಿ ಶಿಕ್ಷಣದ ಮೌಲ್ಯಮಾಪನ ಎಂಬ ಗ್ರಂಥ ಪ್ರಕಟವಾಯಿತು. ಭಾರತೀಯ ಸಂಸ್ಕೃತಿಯ ಹೃದಯ ಎಂಬ ಮಹಾಪ್ರಬಂಧವನ್ನು ಸಿದ್ಧಪಡಿಸಿದರು.
ಜ್ಞಾನ ಹಾಗೂ ವಿವೇಕ ಪ್ರಧಾನವಾದ ಜೈನ ಧರ್ಮದ ಸಮಗ್ರ ವಿಚಾರಗಳನ್ನು ಒಂದೆಡೆಯಲ್ಲಿ ಸಂಗ್ರಹಿಸಿ ಕೊಟ್ಟ ಮಿರ್ಜಿಯವರದು ಸ್ತುತ್ಯರ್ಹವಾದ ಕಾರ್ಯ. ಅವರು ಜೈನಧರ್ಮ ಅಭ್ಯಾಸಿಗಳಿಗೆ ಒಂದು ಕಲ್ಪವೃಕ್ಷ, ಜೈನ ಧರ್ಮದ ನಾನಾ ಮುಖಗಳ ಸಮಗ್ರ ಧರ್ಮ, ಸಂಸ್ಕೃತಿ, ಜೈನ ಸಾಹಿತ್ಯ, ಶಿಲ್ಪ ಈ ನಾಲ್ಮೊಗವನ್ನು ಒಟ್ಟಿಗೆ ಒಂದೆಡೆ ಪುಟಗಳ ಸುದೀರ್ಘ ವಿಮರ್ಶೆ ಅನೇಕ ಪಂಡಿತರ ಪ್ರಶಂಸೆಯನ್ನು ಗಳಿಸಿಕೊಂಡಿವೆ. ಸಮಂತ ಭದ್ರಾಚಾರ್ಯರ ಉತ್ಕೃಷ್ಟ ಕೃತಿ ರತ್ನಕರಂಡಕ, ಶ್ರಾವಕಾಚಾರ ಹಾಗೂ ಹೀರಾಲಾಲ್ ಜೈನರ ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ ಮುಂತಾದವುಗಳ ಅನುವಾದ ಉತ್ತಮ ಆಕರ ಗ್ರಂಥಗಳಾಗಿದ್ದು ಮಿರ್ಜಿಯವರಿಗೆ ಕೀರ್ತಿ ಗೌರವಗಳನ್ನು ತಂದು ಕೊಟ್ಟಿವೆ.
ಅಣ್ಣಾರಾಯರು ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ತಮ್ಮದೇ ಆದ ಶಾಂತಿ ಸೇವಾ ಸದನ ಎಂಬ ಸಂಸ್ಥೆಯನ್ನು ನಿರ್ವಹಿಸಿಕೊಂಡು ಹೋಗುವುದಕ್ಕಾಗಿ ವಿನಿಯೋಗಿಸಿದರು. ಜನವಿಜಯ ಎಂಬ ಪತ್ರಿಕೆಯನ್ನು ಹೊರಡಿಸಿದರು. ಸನ್ಮತಿ ವಿದ್ಯಾಲಯದ ಸ್ಥಾಪನೆಗಾಗಿ ಅಭಿವೃದ್ಧಿಗಾಗಿ ಪ್ರಯತ್ನಪಟ್ಟರು. ಅವರ ಶಾಂತಿ ಸೇವಾ ಸದನದ ಮೂಲಕ ಸುಮಾರು ೪೫ ಹೊಸ ಲೇಖಕರನ್ನು ಬೆಳಕಿಗೆ ತಂದರು.
ಶ್ರದ್ಧೆ, ಪ್ರಯತ್ನ ಸತತಾಭ್ಯಾಸಗಳಿಂದ ಒಬ್ಬ ಬಡ ಕನ್ನಡ ಶಾಲೆಯ ಮಾಸ್ತರ ಏನು ಮಾಡಬಲ್ಲ ಎಂಥ ಎತ್ತರಕ್ಕೆ ಏರಬಲ್ಲ ಎಂಬುಅನ್ನು ಮಿರ್ಜಿಯವರು ತೋರಿಸಿ ಕೊಟ್ಟಿದ್ದಾರೆ ಸದ್ದುಗದ್ದಲವಿಲ್ಲದೆ, ಕೀರ್ತಿ ಲಲಾಸೆಯಿಲ್ಲದೆ ಕೆಲಸ ಮಾಡುವ ವಾಜ್ಞಯ ತಪಸ್ವಿಗಳಲ್ಲಿ ಅಣ್ಣಾರಾಯರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.
ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ