ಕನ್ನಡ ಸಾಹಿತ್ಯಲೋಕಕ್ಕೆ ಹಂಪನಾ ಎಂದೇ ಚಿರಪರಿಚಿತರಾಗಿರುವ ಹಂಪ ನಾಗರಾಜಯ್ಯ ವರು ಕೋಲಾರ ಜೆಲ್ಲೆ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ೧೯೩೬, ಅಕ್ಟೋಬರ್ ೭ ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದು ೫೯ ರಿಂದ ೯೬ ರವರೆಗೆ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಶ್ರೇಷ್ಠ ಪ್ರಾಧ್ಯಾಪಕರೆಂದು ಹೆಸರು ಗಳಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದವರು.
ಅಪಾರ ಪ್ರಮಾಣದ ಸಂಶೋಧನ ಅನುಭವ ಹೊಂದಿರುವ ಹಂಪನಾ ಅವರು ಅನೇಕ ಪಿ.ಎಚ್.ಡಿ ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ೮೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಲ್ಲದೇ ೧೦೦ಕ್ಕೂ ಅಧಿಕ ಸಂಶೋಧನ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಂತರಾಷ್ಟ್ರೀಯ ಖ್ಯಾತಿಯ ಇವರು ವಿದೇಶದ ಹಲವಾರು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಪ್ರಬಂಧ ಮಂಡಿಸಿ ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿ ನಾಡಿನ ಸಂಸ್ಕೃತಿಯನ್ನು ಪ್ರಚಾರ ಮಾಡಿದ ಶ್ರೇಯಸ್ಸಿಗೆ ಭಾಜನರಾಗಿದ್ದಾರೆ.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಕಾರ್ಯ ನಿರ್ವಹಿಸಿ, ಸಾಹಿತ್ಯ ಪರಿಷತ್ತಿನ ಕಾರ್ಯವೈಕಹ್ರಿಯನ್ನು ಗ್ರಾಮೀಣ ಮಟ್ಟಕ್ಕೂ ಪಸರಸಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದ್ದಾರೆ. ಕುವೆಂಪು ಸಾಹಿತ್ಯದ ಸಂಸ್ಥಾಪಕ ಸದಸ್ಯ ಮತ್ತು ಅಧ್ಯಕ್ಷರಾಗಿ ಕುವೆಂಪು ಸಾಹಿತ್ಯವನ್ನು ಜನತೆಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ. ಬೆಂಗಳೂರು ಜೈನ ಸಂಶೋಧನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಹೀಗೆ ಹಲವಾರು ವಿಭಾಗಗಳಲ್ಲಿ ಪ್ರಾಮಾಣಿಕತೆಯಿಂದ ದುಡಿದಿದ್ದಾರೆ.
ಜೀವನ ಮಾಸಪತ್ರಿಕೆ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಾಧನೆ, ಜಿನಮಂಜರಿ ಮೊದಲಾದ ಪತ್ರಿಕೆಗಳ ಸಂಪಾಕದಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಬೇರೆ ಬೇರೆ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಸಮ್ಮೇಳನಗಳಿಗೆ ಸೂಕ್ತ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಬೆಳ್ಳಿ ಬಿಟ್ಟ ಬಳ್ಳಿ ಮಾಲೆಯ ಮುಖಾಂತರ ೧೦೧ ಹಾಗೂ ಮಕ್ಕಳ ಪುಸ್ತಕ ಮಾಲೆಯ ೨೦೦ ಪುಸ್ತಕಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಭಾಷಾವಿಜ್ಞಾನ, ಗ್ರಂಥಸಂಪಾದನೆ, ಕಾದಂಬರಿ, ಪ್ರಬಂಧ ಸಂಕಲನ, ಜೀವನ ಚರಿತ್ರೆ, ವಿಮರ್ಶೆ, ಸಂಶೋಧನೆ, ಜಾನಪದ, ಪ್ರಚಾರೋಪನ್ಯಾಸಮಾಲೆ, ಅನುವಾದ, ಶಿಶುಸಾಹಿತ್ಯ, ಸಾಹಿತ್ಯಚರಿತ್ರೆ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಂಪನಾ ಅವರು ಹದಿನೈದಕ್ಕೂ ಹೆಚ್ಚು ಕೃತಿಗಳನ್ನು ಇಂಗ್ಲೀಷಿನಲ್ಲಿ ರಚಿಸಿ ಪ್ರಕಟಿಸಿದ್ದಾರೆ. ಪಚ್ಚೆ ತೆನೆ, ಸಂಕೃತಿ, ಸಂರಕ್ಷಣ, ಬರಹ ಬಾಗಿನ, ಹಂಗ್ರಂಥಾವಳಿ ಇವು ಅಭಿಮಾನಿಗಳಿಂದ ಹಂಪನಾ ಅವರಿಗೆ ಅರ್ಪಿಸಿದ ಸಂಭಾವನ ಕೃತಿಗಳು.
ಹಂಪಿ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, ಚುಂಚುಶ್ರೀ, ಪಂಡಿತರತ್ನ, ಶಂ.ಬಾ. ಜೋಶಿ ಪ್ರಶಸ್ತಿ, ಮಧ್ಯಪ್ರದೇಶದ ಆಆರ್ಯ ಸುಮತಿಸಾಗರಜಿ ಪುರಸ್ಕಾರ ಹೀಗೆ ಹಲವಾರು ಪುರಸ್ಕಾರಗಳು ಇವರ ಮುಡಿಯನ್ನು ಅಲಂಕರಿಸಿವೆ.
ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ