ಪದ್ಯ ೩೩, ೩೪: ದುರ್ಯೋಧನನ ಕರ್ಣನ ಬಗ್ಗೆ ಹೇಗೆ ದುಃಖಿಸಿದನು?

ಅನೃತಂ ಲೋಭಂ ಭಯಮೆಂ
ಬಿನಿತುಂ ನೀನರ್ದ ನಾಡೊಳಿರ್ಕುಮೆ ರವಿನಂ
ದನ ನನ್ನಿ ಚಗಮಣ್ಮೆಂ
ಬಿನಿತರ್ಕಂ ನೀನೆ ಮೊತ್ತಮೊದಲಿಗನಾದಯ್ (ದುರ್ಯೋಧನ ವಿಲಾಪಂ, ೩೩ ಪದ್ಯ)

ಆನರೆವೆಂ ಪೃಥೆಯರೆವಳ್
ದಾನವರಿಪುವರೆವನರ್ಕನರೆವಂ ದಿವ್ಯ
ಜ್ಞಾನಿ ಸಹದೇವನರಿವಂ
ನೀನಾರ್ಗೆಂದಾರುಮರೆಯರಂಗಾಧಿಪತೀ (ದುರ್ಯೋಧನ ವಿಲಾಪಂ, ೩೪ ಪದ್ಯ)

ತಾತ್ಪರ್ಯ:
ನೀನಿರುವ ನಾಡಿನಲ್ಲಿ ಸುಳ್ಳು, ಅತಿಯಾಸೆ, ಭಯವಿರುವುದಕ್ಕೆ ಸಾಧ್ಯವೇ ಕರ್ಣಾ! ಸತ್ಯ, ತ್ಯಾಗ ಪರಾಕ್ರಮಕ್ಕೆ ನೀನೆ ಸೂರ್ಯ ಹೀಗಿರುವಾಗ ಮರಣಹೊಂದಲು ನೀನೆ ನನಗಿಂತ ಮೊದಲಿಗನಾದೆಯಾ!

ನಾನು, ತಾಯಿಯಾದ ಕುಂತಿ, ತಂದೆಯಾದ ಸೂರ್ಯ, ಲೋಕಾಂತರ್ಯಾಮಿಯಾದ ಕೃಷ್ಣ, ದಿವ್ಯಜ್ಞಾನಿಯಾದ ಸಹದೇವ ಎಲ್ಲರಿಗೂ ನೀನು ಯಾರಿಗೆ ಜನಿಸಿದವನೆಂದು ಗೊತ್ತಿದೆ ಕರ್ಣಾ!

ಅರ್ಥ:
ಅನೃತ: ಸುಳ್ಳು; ಲೋಭ:ದುರಾಸೆ ಭಯ: ಅಂಜಿಕೆ; ನಾಡು: ರಾಜ್ಯ; ಇರ್ಕುಮೆ: ಇರುತ್ತೇನೆಯೆ; ನಂದನ:ಮಗ; ನನ್ನಿ: ನಿಜ, ದಿಟ; ಚಾಗ: ತ್ಯಾಗ; ಅಣ್ಮು: ಪರಾಕ್ರಮ; ಅರ್ಕ: ಸೂರ್ಯ, ಮೊದಲು: ಪ್ರಥಮ;

ಪೃಥೆ: ಕುಂತಿ; ಅರ್ಕ: ಸೂರ್ಯ; ದಾನವರಿಪು: ರಾಕ್ಷಸರ ವೈರಿ (ಕೃಷ್ಣ);ದಿವ್ಯ: ಶ್ರೇಷ್ಠ; ಜ್ಞಾನಿ: ತಿಳಿದವ;

ಪದವಿಂಗಡಣೆ:
ಅನೃತಂ +ಲೋಭಂ +ಭಯಮೆಂಬ್
ಇನಿತುಂ +ನೀನರ್ದ +ನಾಡೊಳ್+ಇರ್ಕುಮೆ+ ರವಿ+ನಂ
ದನ+ ನನ್ನಿ+ ಚಗಮ್+ಅಣ್ಮೆಂಬ್
ಇನಿತ್+ಅರ್ಕಂ +ನೀನೆ +ಮೊತ್ತಮೊದಲಿಗನಾದಯ್

ಆನ್+ಅರೆವೆಂ +ಪೃಥೆ +ಅರೆವಳ್
ದಾನವರಿಪುವ್+ಅರೆವನ್+ಅರ್ಕನ್+ಅರೆವಂ +ದಿವ್ಯ
ಜ್ಞಾನಿ +ಸಹದೇವನ್+ಅರಿವಂ
ನೀನಾರ್ಗೆಂದ್+ಆರುಮ್+ಅರೆಯರ್+ಅಂಗಾಧಿಪತೀ

ಅಚ್ಚರಿ:
(೧) ಕರ್ಣನು ಸೂತಪುತ್ರನಲ್ಲ ಅವನು ಉತ್ತಮಕುಲದವನೆಂದು ತಿಳಿಸುವ ಪದ್ಯ, ಎಲ್ಲರಿಗೂ ತಿಳಿದೂ ನಿನಗೆ ಅನ್ಯಾಯವಯಿತಲ್ಲಾ ಎಂದು ಕೊರಗುತ್ತಿರುವ ದೃಶ್ಯ
(೨) ಕರ್ಣನು ದಾನ ಶೂರ ಎಂದು ಹೇಳುವ ಪದ್ಯದಿಂದ ಆತನ ಗುಣಗಾನ ಮಾಡುತ್ತಿರುವುದು.

ಪದ್ಯ ೨೯, ೩೨: ಕರ್ಣನ ವಿಯೋಗದಿಂದ ದುರ್ಯೋಧನನು ಹೇಗೆ ಶೋಕ ಪಟ್ಟನು?

ಆನು ದುಶ್ಯಾಸನನುಂ
ನೀನುಂ ಮೂವರೆ ದಲಾತನುಂ ಕಳಿದ ಬಳಿ
ಕ್ಕಾನುಂ ನೀನೆ ದಲೀಗಳ್
ನೀನುಮಗಲ್ದೆತ್ತವೋದೆಯಂಗಾಧಿಪತೀ (ದುರ್ಯೋಧನ ವಿಲಾಪ, ೨೯ ಪದ್ಯ)

ನಿನ್ನ ಕೆಳೆಯಂ ಸುಯೋಧನ
ನಂ ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ
ನೆನ್ನದೆ ಜೀಯೆನ್ನದೆ ದೇ
ವೆನ್ನದೆ ಯೇಕುಸಿರದಿರ್ದೆಯಂಗಾಧಿಪತೀ (ದುರ್ಯೋಧನ ವಿಲಾಪ, ೩೨ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಪ್ರಿಯ ಮಿತ್ರ ಕರ್ಣನ ದೇಹವನ್ನು ನೋಡಿ ದುಃಖವನ್ನು ಸಹಿಸಲಾಗದೆ ತನ್ನ ಶೋಕದ ನುಡಿಯನ್ನು ಹೇಳತೊಡಗಿದ. ನಾನು ದುಶ್ಯಾಸನ ಮತ್ತು ನೀನು, ನಾವು ಮೂವರು ಒಂದು ಗುಂಪಾಗಿದ್ದೆವು. ದುಶ್ಯಾಸನನು ಸತ್ತ ಮೇಲೆ, ನಾನು ಮತ್ತು ನೀನು ಇಬ್ಬರೆ ದಳವಾಗಿದ್ದೆವು, ಇನ್ನೂ ಈಗ ನೀನು ಮರಣವನ್ನು ಹೊಂದಿದ ಮೇಲೆ ನಾನು ಎಲ್ಲಿಗೆ ಹೋಗಲಿ ಕರ್ಣಾ!!

ನಿನ್ನ ಗೆಳೆಯನಾದ ದುರ್ಯೋಧನನನ್ನು ನೋಡದೆ, ಮಾತನಾಡಿಸದೆ, ಅಪ್ಪಿಕೊಳ್ಳದೆ, ನನಗೇನು ಕಾರ್ಯವೆಂದು ಕೇಳದೆ, ಒಡೆಯಾ, ದೇವ ಎನ್ನದೆ, ನಿನ್ನ ಉಸಿರನ್ನು ನಿಲ್ಲಿಸಿಬಿಟ್ಟೆಯಲ್ಲಾ ಕರ್ಣಾ ಎಂದು ದುರ್ಯೋಧನನು ತನ್ನ ಶೋಕವನ್ನು ವ್ಯಕ್ತಪಡಿಸಿದನು.

ಅರ್ಥ:
ಆನು: ನಾನು; ದಳ: ತಂಡ; ಕಳಿದ: ತೀರಿಹೋದ; ಬಳಿ: ನಂತರ; ಅಗಲು: ದೂರಹೋಗು, ಸಾವು; ಎತ್ತ: ಎಲ್ಲಿಗೆ; ಹೋದೆ: ತೆರಳಿದೆ; ಅಧಿಪತಿ: ರಾಜ; ಬೆಸ: ಕೆಲಸ, ಕಾರ್ಯ; ಜೀಯ: ಒಡೆಯ; ದೇವ: ಸ್ವಾಮಿ; ಉಸಿರು: ಜೀವ; ಅದಿರು: ನಡುಕ;

ಕೆಳೆ: ಸ್ನೇಹಿತ; ನೋಡು: ವೀಕ್ಷಿಸು; ನುಡಿ: ಮಾತು; ಅಪ್ಪಿಕೊ: ತಬ್ಬಿಕೊ;

ಪದವಿಂಗಡಣೆ:
ಆನು +ದುಶ್ಯಾಸನನುಂ
ನೀನುಂ+ ಮೂವರೆ +ದಲ+ಆತನುಂ +ಕಳಿದ +ಬಳಿಕ್
ಆನುಂ+ ನೀನೆ +ದಲ+ಈಗಳ್
ನೀನುಂ+ಅಗಲ್ದ್+ಎತ್ತ+ವೋದೆ+ಅಂಗಾಧಿಪತೀ

ನಿನ್ನ +ಕೆಳೆಯಂ +ಸುಯೋಧನ
ನಂ +ನೋಡದೆ +ನುಡಿಯದ್+ಅಪ್ಪಿಕೊಳ್ಳದೆ +ಬೆಸನೇನ್
ಎನ್ನದೆ +ಜೀಯ+ಎನ್ನದೆ +ದೇವ
ಎನ್ನದೆ +ಯೇಕ್+ಉಸಿರದಿರ್ದೆ+ಯಂಗಾಧಿಪತೀ

ಅಚ್ಚರಿ:
(೧) ದುರ್ಯೋಧನನ ಶೋಕವನ್ನು ಮನಕಟ್ಟುವಂತೆ ಚಿತ್ರಿಸಿರುವುದು

ಪದ್ಯ ೨೫: ದುರ್ಯೋಧನನು ದುಶ್ಯಾಸನ ಶವವನ್ನು ಕಂಡು ಹೇಗೆ ದುಃಖಿಸಿದನು?

ಜನನೀಸ್ತನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯಭೋ
ಜನಮೆಂಬಿಂತಿವನುಂಡೆನಾಂ ಬಳಿಕೆ ನೀಂ ಬಾಲತ್ವದಿಂದೆಲ್ಲಿಯುಂ
ವಿನಯೋಲ್ಲಂಘನಮಾದುದಿಲ್ಲ ಮರಣಕ್ಕೆನ್ನಿಂದೆ ನೀಂ ಮುಂಚಿದಯ್
ಮೊನೆಯೊಳ್ ಸೂಳ್ ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನ (ದುರ್ಯೋಧನವಿಲಾಪ, ಪದ್ಯ ೨೫)

ಎಂದು ತನ್ನ ತಮ್ಮನ ಕಳೇಬರಮಂ ನೋಡಲಾರದೆ ಅಲ್ಲಿಂ ತಳರ್ದು ದಿನಕರತನೂಜನಂ ರಾಜರಾಜಂ ನೋಡಿ ಬಾಷ್ಪವಾರಿ ಧಾರಾಪೂರಿತ ಲೋಚನನುಂ ಮನ್ಯೂದ್ಗತಕಂಠನುಂ ಅಸಹ್ಯಶೋಕಾನಲದಹ್ಯಮಾನಾಂತಃಕರಣನುಮಾಗಿ

ತಾತ್ಪರ್ಯ:
ತಾಯಿಯ ಹಾಲನ್ನು ಮೊದಲು ನಾನು ಕುಡಿದ ಮೇಲೆ ನೀನು ಕುಡಿಯುತ್ತಿದ್ದೆ. ಯಾಗದಲ್ಲಿ ಪ್ರಾಶನ ಮಾಡುವ ಎಡೆಯಾಗಲಿ, ದಿವ್ಯಭೋಜನವಾಗಲಿ ಮೊದಲು ನನಗೆ ಬಿಟ್ಟು ನಂತರ ನೀನು ಊಟಮಾಡುತ್ತಿದ್ದೆ. ನಮ್ಮ ಚಿಕ್ಕವಯಸ್ಸಿನಿಂದಲೂ ಈ ಸೌಜನ್ಯವನ್ನು ಪ್ರದರ್ಶಿಸಿದ ನೀನು, ಈಗ ಇದನ್ನು ಮರೆತೆಯಲ್ಲಾ! ಮರಣವನ್ನು ನೀನು ಮೊದಲು ಸ್ವೀಕರಿಸಿ ನಾನು ಮೊದಲುಂಡುವ ವಿನಯಕ್ಕೆ ಭಂಗತಂದೆಯೆಲ್ಲಾ! ನಾನು ಮೊದಲು ಎಂಬ ಸರದಿಯನ್ನು ಮೀರಿ ನೀನು ಮರಣದ ಸರದಿಯಲ್ಲಿ ಮೊದಲಿಗನಾದೆಯೆಲ್ಲಾ ಮಗು ದುಶ್ಯಾಸನ ಎಂದು ಅತೀವ ದುಃಖತಪ್ತನಾಗಿ, ತನ್ನ ತಮ್ಮನ ಕಳೆಬರವನ್ನು ನೋಡಲಾರದೆ..

ಮುಂದೆ ನಡೆದುಬಂದಾಗ ಆತನ ಕಣ್ಣಿಗೆ ಬಿದ್ದದ್ದು ತನ್ನ ಪ್ರಿಯ ಮಿತ್ರ, ಸೂರ್ಯನ ಮಗ, ರಾಜಾಧಿರಾಜ ಕರ್ಣನ ಹೆಣವನ್ನು. ಅವನ ಶವವನ್ನು ನೋಡಿ ಕಣ್ಣುಗಳು ತುಂಬಿಬಂದು, ಕಣ್ಣೀರಿನ ಹಬೆಯಲ್ಲಿ ಕಣ್ಣಿನಿಂದ ಬಿಸಿನೀರು ಧಾರಾಕಾರವಾಗಿ ಸುರಿಯಲಾರಂಭಿಸಿತು, ಕಂಠವು ಗದ್ಗದಿತವಾಯಿತು. ಸಹಿಸಲಾಗದ ದುಃಖದ ಬೆಂಕಿಯು ತನ್ನ ಅಂತಃಕರಣವನ್ನು ಸುಡಲು…

ಅರ್ಥ:
ಜನನಿ: ತಾಯಿ; ಸ್ತನ: ಮೊಲೆ; ಉಂಡು: ತಿಂದು, ಕುಡಿ; ಬಳಿಕ: ನಂತರ; ಸೋಮ: ಚಂದ್ರ; ಅಮೃತ: ಸುಧೆ; ದಿವ್ಯ: ಶ್ರೇಷ್ಠ; ಭೋಜನ: ಊಟ; ಬಾಲತ್ವ: ಚಿಕ್ಕವಯಸ್ಸಿನಲ್ಲಿ; ಉಲ್ಲಂಘನೆ: ಅಪ್ಪಣೆಮೀರು, ದಾಟು; ಮರಣ: ಸಾವು; ಮುಂಚೆ: ಮುಂದೆ, ಮೊದಲು; ವಿನಯ: ಒಳ್ಳೆಯತನ, ಸೌಜನ್ಯ ; ಮೊನೆ: ಅಗ್ರಭಾಗ; ಸೂಳ್: ಸರದಿ; ತಡ: ನಿಧಾನ; ವತ್ಸ: ಮಗು;

ಕಳೇಬರ: ಶವ, ಹೆಣ; ತಳರ್ದು: ತೆರಳಿ; ದಿನಕರ: ಸೂರ್ಯ; ಅನುಜ: ಪುತ್ರ; ರಾಜರಾಜಂ: ರಾಜಾಧಿರಾಜ; ಬಾಷ್ಪ: ಕಣ್ಣೀರು, ಹಬೆ; ವಾರಿ: ನೀರು; ಧಾರಾಪೂರಿತ: ಧಾರಾಕಾರವಾಗಿ, ಒಂದೇಸಮನೆ; ಲೋಚನ: ಕಣ್ಣು; ಗದ್ಗಧಿಸು: ಕಂಠಬಿಗಿದುಬರು; ಕಂಠ: ಕೊರಳು; ಅಸಹ್ಯ:ಜುಗುಪ್ಸೆ, ಸಹಿಸಲಾಗದ; ಶೋಕ: ದುಃಖ; ಅನಲ: ಬೆಂಕಿ; ದಹಿಸು: ಸುಡು; ಅಂತಃಕರಣ: ಮನಸ್ಸು, ದಯೆ;

ಪದವಿಂಗಡಣೆ:
ಜನನೀ+ಸ್ತನ್ಯಮನ್+ಉಂಡೆ+ನಾಂ +ಬಳಿಕೆ+ ನೀಂ +ಸೋಮಾಮೃತಂ +ದಿವ್ಯ+ಭೋ
ಜನಂ+ಎಂಬ್+ಇಂತ್+ಇವನ್+ಉಂಡೆ+ನಾಂ +ಬಳಿಕೆ +ನೀಂ +ಬಾಲತ್ವದಿಂದ್+ಎಲ್ಲಿಯುಂ
ವಿನಯ+ಉಲ್ಲಂಘನ+ಮಾದುದಿಲ್ಲ+ ಮರಣಕ್+ಎನ್ನಿಂದೆ +ನೀಂ +ಮುಂಚಿದಯ್
ಮೊನೆಯೊಳ್+ ಸೂಳ್+ ತಡಮಾಯ್ತ್+ಇದೊಂದ್+ಎಡೆಯೊಳಂ +ಹಾ +ವತ್ಸ+ ದುಶ್ಯಾಸನ

ಎಂದು+ ತನ್ನ +ತಮ್ಮನ +ಕಳೇಬರಮಂ +ನೋಡಲಾರದೆ +ಅಲ್ಲಿಂ +ತಳರ್ದು +ದಿನಕರ+ತನೂಜನಂ +ರಾಜರಾಜಂ +ನೋಡಿ +ಬಾಷ್ಪ+ವಾರಿ +ಧಾರಾಪೂರಿತ+ ಲೋಚನನುಂ ಮನ್ಯೂದ್ಗತ+ಕಂಠನುಂ +ಅಸಹ್ಯ+ಶೋಕ+ಅನಲ+ದಹ್ಯಮಾನ್+ಅಂತಃಕರಣನುಮಾಗಿ

ಅಚ್ಚರಿ:
(೧) ಭ್ರಾತೃ ಪ್ರೇಮವನ್ನು ಹೇಳುವ ಪರಿ:
ಜನನೀಸ್ತನ್ಯಮನುಂಡೆನಾಂ ಬಳಿಕೆ ನೀಂ
ಸೋಮಾಮೃತಂ ದಿವ್ಯಭೋಜನಮೆಂಬಿಂತಿವನುಂಡೆನಾಂ ಬಳಿಕೆ ನೀಂ
(೨) ದುಃಖದ ತೀವ್ರತೆಯನ್ನು ವಿವರಿಸುವ ಬಗೆ:
ಬಾಷ್ಪವಾರಿ ಧಾರಾಪೂರಿತ ಲೋಚನನುಂ
ಮನ್ಯೂದ್ಗತಕಂಠನುಂ
ಅಸಹ್ಯಶೋಕಾನಲದಹ್ಯಮಾನಾಂತಃಕರಣನುಮಾಗಿ

ಬಸವರಾಜ ಕಟ್ಟೀಮನಿ

“ಐವತ್ತು ವರ್ಷಗಳ ಆಯುಷದಲ್ಲಿ ನಲವತ್ತರಷ್ಟು ಹೋರಾಟದಲ್ಲಿಯೇ ಕಳೆದಿದೆ. ಬದುಕಲು ಹೋರಾಟ, ಬೆಳೆಯಲು ಹೋರಾಟ, ಅನ್ಯಾಯಗಳನ್ನು ಕಷ್ಟ ಸಂಕಟಗಳನ್ನು ಬಡತನವನ್ನು ಅನಾರೋಗ್ಯವನ್ನು ದ್ವೇಷವನ್ನು ಎದುರಿಸಿ ಈ ಸ್ಥಿಗೆ ಬಂದಿದ್ದೇನೆ. ಇನ್ನೂ ಹತ್ತಿಪ್ಪತ್ತು ಉತ್ತಮ ಕಾದಂಬರಿಗಳನ್ನು ರಚಿಸುವ ಹಂಬಲವಿದೆ. ಮೈಯಲ್ಲಿ ರಕ್ತವಿರುವವರೆಗೆ, ಕೈಯಲ್ಲಿ ಶಕ್ತಿ ಇರುವವರೆಗೆ ಬರೆದೇ ಬರೆಯುತ್ತೇನೆ, ಬರವಣಿಗೆ ನಿಂತಾಗ ಉಸಿರು ನಿಲ್ಲುತ್ತದೆ” ಇದು ಕನ್ನಡದ ಖ್ಯಾತ ಕಾದಂಬರಿಕಾರರಾದ ಬಸವರಾಜ ಕಟ್ಟೀಮನಿಯವರ ಐವತ್ತನೇ ವರ್ಷಕ್ಕೆ ಮೈಸೂರಿನಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ತಮ್ಮ ಬದುಕು ಬರಹವನ್ನು ಕುರಿತು ಆತ್ಮನಿರೀಕ್ಷಣೆ ಮಾಡಿ ನುಡಿದ ಮಾತು.

ಬೆಳಗಾವಿಯ ಗೋಕಾಕ್ ತಾಲೂಕಿನ ಮಲಾಮರಡಿ ಹಳ್ಳಿಯಲ್ಲಿ ಅಪ್ಪಯ್ಯಣ್ಣ ಮತ್ತು ಬಾಲವ್ವ ದಂಪತಿಗಳಿಗೆ ಎರಡನೇ ಮಗನಾಗಿ ಜನಿಸಿದರು. ಬೈಲಹೊಂಗಲ, ಕಿತ್ತೂರು, ಬೆಳಗಾವಿ ಶಾಲೆಗಳಲ್ಲಿ ವಿದ್ಯಾಭ್ಯಾಸ. ಬಳಿಕ ಬೆಳಗಾವಿಯಲ್ಲಿ ಶಿಕ್ಷಣಕ್ಕಾಗಿ ನೆಲೆ ನಿಂತಾಗ ಗಳಗನಾಥ, ಕೆರೂರ ವಾಸುದೇವಾಚಾರ್ಯ, ಮಾಸ್ತಿ ಮುಂತಾದವರ ಸಾಹಿತ್ಯದ ಓದು ಎಳೆವಯಸ್ಸಿನ ಬಾಲಕ ಬಸವನಲ್ಲಿ ಸಾಹಿತ್ಯದ ಗೀಳು ಹೆಚ್ಚಿತು. ಬಂಕಿಮಚಂದ್ರ, ಶರಶ್ಚಂದ್ರ ಕಾದಂಬರಿಗಳನ್ನು ತಾಯಿಗೆ ಮಧ್ಯರಾತ್ರಿಯವರೆಗೂ ಓದಿ ಹೇಳುತ್ತಿದ್ದ. ಮಗನಿಗಾಗಿ ವಾಚನಾಲಯಕ್ಕೆ ನಾಲ್ಕಾಣೆ ವಂತಿಗೆ ಕೊಟ್ಟು ತನ್ನ ಮಗನೂ ಒಂದಿಲ್ಲೊಂದು ದಿನ ಕಾದಂಬರಿಕಾರನಾಗಬೇಕೆಂದು ಕನಸು ಕಂಡಿದ್ದಳು ತಾಯಿ.

ಬೆಳಗಾವಿಯ ಪ್ರೌಢಶಾಲೆಯಲ್ಲಿರುವಾಗಲೇ ಸಂಯುಕ್ತ ಕರ್ನಾಟಕಕ್ಕೆ ತಮ್ಮ ಬರಹಗಳನ್ನು ಕೊಡುತ್ತಿದ್ದರು. ಇದನ್ನು ಗಮನಿಸಿದ ತಂದೆಯು ಸಾಹಿತ್ಯದ ಗೀಳಿನಿಂದ ಮಗನು ತನ್ನ ಬಾಳನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆಂದು ಮೈಹುಳಿ ಹೊಡೆದರು. ಈ ನೋವು ಅವರನ್ನು ಒಬ್ಬ ಲೇಖಕನಾಗಬೇಕೆಂಬ ಛಲ ಮತ್ತು ತನ್ನ ಬರಹದಿಂದಲೇ ಜೀವಿಸಬೇಕೆಂಬ ದೃಢನಿರ್ಧಾರದಿಂದ ಮನೆಯಿಂದ ಹೊರಡುವಂತೆ ಮಾಡಿತು.

ಮೆಟ್ರಿಕ್ಕಿನ ನಂತರ ಬಡತನದ ಕಾರಣಕ್ಕಾಗಿ ಮತ್ತು ತಮ್ಮ ಶ್ರವಣಬಂಧ ಅಭಾವದಿಂದಾಗಿ ಶಿಕ್ಷಣವನ್ನು ಮುಂದುವರಿಸದೆ ಹಲವಾರು ಪತ್ರಿಕೆಗಳಲ್ಲಿ ದುಡಿದರು. ಕಟ್ಟೀಮನಿ ಸಾಹಿತ್ಯವನ್ನು ಎಷ್ಟು ಪ್ರೀತಿಸುತ್ತಿದ್ದರೋ ಅದಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯ ಹೋರಾಟವನ್ನು ಪ್ರೀತಿಸುತ್ತಿದ್ದರು. ಹಿಂದಲಗಾ ಜೈಲಿನಲ್ಲಿ ಕೈದಿಗಳಾಗಿ ಕೆಲ ಸಮಯ ಕಳೆಯುವಾಗಳು ಇವರ ಬರವಣಿಗೆ ಗಾಢವಾಗಿ ಮುಂದುವರೆಯಿತು. ಸಮಾಜದ ಹಲವು ಸಮಸ್ಯೆಗಳನ್ನು ಆಮೂಲಾಗ್ರವಾಗಿ ಶೋಧಿಸಿ ಇವುಗಳಿಗೆ ಕಾರಣರಾದವರನ್ನು ಬಯಲಿಗೆ ಎಳೆಯಲೆಂದೇ ಕಾದಂಬರಿಗಳನ್ನು ರಚಿಸಿದರು.

೧೯೪೪ರ ಸುಮಾರಿಗೆ ಪ್ರಥಮ ಕಥಾಸಂಗ್ರಹ ಕಾರವಾನ್ ಪ್ರಕಟವಾಯಿತು. ದಾವಣಗೇರಿಯ ಕಾರ್ಮಿಕರ ಪರವಾಗಿ ತಮ್ಮ ಸ್ವತಂತ್ರ ಪತ್ರಿಕೆಯಲ್ಲಿ ಉಗ್ರ ಲೇಖನ ಬರೆದರು. ಇದೇ ಸಂದರ್ಭಕ್ಕಾಗಿ ಜ್ವಾಲಾಮುಖಿಯ ಮೇಲೆ ಕಾದಂಬರಿ ಪ್ರಕಟಗೊಂಡು ಮುಂದೆ ನೆಹರು ಸೋವಿಯತ್ ಲ್ಯಾಂಡಿನ ಪ್ರಶಸ್ತಿ ಪಡೆಯುವಂತಾಯಿತು. ಐವತ್ತು ವರ್ಷಗಳ ಅವಧಿಯಲ್ಲಿ ನಲ್ವತ್ತು ಕಾದಂಬರಿಗಳನ್ನು ಬರೆದ ದೈತ್ಯಶಕ್ತಿಯ ಬರಹಗಾರರಿವರು. ಮೋಹದ ಬಲೆಯಲ್ಲಿ, ಸಾಕ್ಷಾತ್ಕಾರ, ಆಶ್ರಮವಾಸಿ, ಬೀದಿಯಲ್ಲಿ ಬಿದ್ದವಳು, ಖಾನಾವಳಿ ನೀಲಾ ಮುಂತಾದವು ಇವರ ಕಾದಂಬರಿಗಳು.

ಇವರು ಸ್ವಾತಂತ್ರ್ಯದೆಡೆಗೆ ಮತ್ತು ಮಾಡಿ ಮಡಿದವರು ಎಂಬ ಎರದು ಸ್ವಾತಂತ್ರ್ಯ ಹೋರಾಟದ ಕತೆಗಳನ್ನು ಚಿತ್ರಿಸಿದ ಕಾದಂಬರಿಗಳು. ಇವರು ತಮ್ಮ ಜೀವನದ ಕೆಲವು ಮಹತ್ವದ ವರ್ಷಗಳನ್ನು ರೈತ ಕೂಲಿಕಾರನಾಗಿ, ಪಕ್ಷ ಕಟ್ಟುವುದರಲ್ಲಿ ಕಳೆದರು. ೧೯೬೮ರಲ್ಲಿ ವಿಧಾನಸಭೆಗೆ ಶಾಸಕರೆಂದು ನಾಮಕರಣಗೊಂಡು ೬ ವರ್ಷ ರಾಜಕೀಯ ಜೀವನದಲ್ಲಿ ಕಳೆದರು. ಆಗ ರಾಜಕೀಯ ಜೀವನದ ಬಗ್ಗೆ ಮಾಜಿ ಮಂತ್ರಿ, ಚಕ್ರವ್ಯೂಹ, ಶಿರೋನಾಮೆಯ ಕಾದಂಬರಿಗಳನ್ನು ರಚಿಸಿದರು. ಹತ್ತು ಕಥಾ ಸಂಗ್ರಹವನ್ನು ಪ್ರಕಟಿಸಿದ ಬಸವರಾಜ ಕಟ್ಟಿಮನಿಯವರು ಶ್ರೇಷ್ಠ ಕತೆಗಾರರೆಂದು ಹೆಸರು ಗಳಿಸಿದ್ದು ಸೆರೆಮನೆಯಿಂದ ಹೊರಗೆ, ಗುಲಾಬಿ ಮತ್ತು ಇತರ ಕತೆಗಳು, ಸುಂಟರಗಾಳಿ ಎಂಬು ಕಥಾಸಂಗ್ರಹಗಳಿಂದ.

ಅನಕೃ, ತರಾಸು, ನಿರಂಜನ, ಚದುರಂಗ ಕಾದಂಬರಿಗಳ ಜೊತೆ ಕಟ್ಟಿಮನಿಯವರ ಕಾದಂಬರಿಗಳು ಹೆಚ್ಚು ಜೀವಂತಿಕೆಯಿಂದ ತುಂಬಿಕೊಂಡಂತೆನ್ನಿಸುತ್ತವೆ. ಇವರಿಗೆ ಆಧ್ಯಾತ್ಮದ, ಧಾರ್ಮಿಕತೆಯ ಬಗ್ಗೆ ನಂತು ಇರಲಿಲ್ಲ. ಶೋಷಣ ಮುಕ್ತ ಸಮಾನ ಹಕ್ಕು ಅವಕಾಶಗಳ ಸಮಾಜ ಕಟ್ಟಬೇಕೆಂಬ ಏಕಮೇವ ಉದ್ದೇಶದ ಹೊಂಗನಸನ್ನು ಕಂಡ ಹುಟ್ಟು ಬಂಡಾಯಗಾರ ಕಟ್ಟೀಮನಿಯವರು ತಮ್ಮ ಬಾಳಿನ ಎಪ್ಪತ್ತೊಂದನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಪದ್ಯ ೨೪: ದುರ್ಯೋಧನನ ಭ್ರಾತೃ ಪ್ರೇಮ ಹೇಗಿತ್ತು?

ಎಂದು ಪಶ್ಚಾತ್ತಾಪಂಗೆಯ್ಯೆ ಸಂಜಯಂ ಸಂತೈಸಿ ಮುಂದೊಯ್ಯೆ ಭೀಮಸೇನನ ಗದಾಪರಿಘಪ್ರಹರಣದಿಂ ರುಧಿರಪ್ರವಾಹವಶಗತನಾಗಿರ್ದ ಯುವ ರಾಜನಿರ್ದೆಡೆಯಂ ಕುರುರಾಜನೆಯ್ದೆ ವಂದಾಗಳ್

ನಿನ್ನ ಕೊಂದಂ ಗಡಮೊಳ
ನಿನ್ನುಂ ಕೊಂದವನ ನಿಕ್ಕಿ ಕೊಲ್ಲದೆ ಮಾಣ್ದಾ
ನಿನ್ನುಮೊಳೆಂ ಗಡ ಸಾಲದೆ
ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ (ದುರ್ಯೋಧನ ವಿಲಾಪಂ, ೨೪ ಪದ್ಯ)

ತಾತ್ಪರ್ಯ:
ದುರ್ಯೋಧನನು ಪಶ್ಚಾತ್ತಾಪ ಪಡುತ್ತಾ ಮುನ್ನಡೆಯಲು ಸಂಜಯನನು ಇವನನ್ನು ಸಂತೈಸಿ ಮುಂದೆಬರಲು, ಭೀಮನ ಗದಾಪ್ರಹಾರ ದಿಂದ ರಕ್ತದ ಪ್ರವಾಹದಲ್ಲಿ ಮುಳುಗಿದ್ದ ತನ್ನ ತಮ್ಮನಾದ ದುಶ್ಯಾಸನ ಬಳಿ ಬಂದು

ನಿನ್ನನ್ನು ಕೊಂದನೇ ಆ ವೈರಿ, ನಿನ್ನ ಕೊಂದವನನ್ನು ನಾನು ಕೊಲ್ಲದೆ ಸುಮ್ಮನಿರುವೆನೆ, ಅವನೂ ಇನ್ನೂ ಬದುಕಿದ್ದಾನೆ, ನಾನು ಇನ್ನು ಬದುಕಿದ್ದೇನೆ, ನನ್ನ ಕರ್ತವ್ಯವನ್ನು ನಾನು ನಿರ್ವಹಿಸಿದ್ದರೆ ಈ ವೇಳೆಯೊಳಗೆ ನಮ್ಮಿಬ್ಬರಲ್ಲಿ ಒಬ್ಬನು ಹತನಾಗಲೇ ಬೇಕಾಗಿತ್ತು, ನೀನು ನನ್ನಲ್ಲಿಟ್ಟಿದ್ದ ಪ್ರೀತಿಗೂ ನಾನು ನಿನಗೆ ತೋರಿಸಬೇಕಾದ ಸೋದರ ಪ್ರೀತಿಗೂ ಇದು ಎಷ್ಟು ಚಿನ್ನಾಗಿ ಹೊಂದಿಕೊಳ್ಳುತ್ತದೆ. ನಾನು ಹೇಗೆ ಸುಮ್ಮನಿರುವುದು ಅತ್ಯಂತ ಅನುಚಿತವೆಂದು ತಿಳಿದು ಸೋದರ ಪೀತಿಯನ್ನು ದುರ್ಯೋಧನನು ನೆನೆದನು.

ಅರ್ಥ:
ಪಶ್ಚಾತ್ತಾಪ: ತಪ್ಪುಕೆಲಸ ಮಾಡಿದುದಕ್ಕಾಗಿ ನಂತರ ಮರುಗುವಿಕೆ; ಸಂತೈಸು: ಸಾಂತ್ವನಗೊಳಿಸು;
ಮುಂದೊಯ್ಯೆ: ಮುನ್ನಡೆದು; ಗದೆ: ಒಂದು ಬಗೆಯ ಆಯುಧ, ಮುದ್ಗರ; ಪರಿಘ: ಹೊಡೆತ, ಪೆಟ್ಟು; ಪ್ರಹರಣ: ಹೊಡೆತ, ಏಟು; ರುಧಿರ: ರಕ್ತ; ಪ್ರವಾಹ: ಜೋರಾದ ಹರಿವು; ವಶ: ಅಧೀನ; ಗತ: ಸಾವು; ಯುವರಾಜ: ರಾಜನ ಉತ್ತರಾಧಿಕಾರಿ; ಕುರುರಾಜ: ದುರ್ಯೋಧನ

ಕೊಂದಂ: ಕೊಂದವ,ಸಾಯಿಸಿದ; ಗಡ: ಆಶ್ಚರ್ಯ ಮುಂತಾದುವನ್ನು ಸೂಚಿಸುವ ಶಬ್ದ; ಮೊಳ: ಮೊಳಕೈಯಿಂದ ಹಸ್ತದ ತುದಿಯವರೆಗಿನ ಅಳತೆ; ಇಕ್ಕು: ಬಲವಾಗಿ ಗುದ್ದು; ಮಾಣ್: ಬಿಡು; ಸಾಲದೆ: ಸಾಕು; ಕೂರ್ಮೆ: ಪ್ರೀತಿ, ನಲ್ಮೆ; ಸೌಧರ್ಮಿಕೆ: ಸೋದರ ಪ್ರೀತಿ;

ಪದವಿಂಗಡಣೆ:
ಎಂದು +ಪಶ್ಚಾತ್ತಾಪಂಗೆಯ್ಯೆ +ಸಂಜಯಂ +ಸಂತೈಸಿ +ಮುಂದೊಯ್ಯೆ +ಭೀಮಸೇನನ ಗದಾ+ಪರಿಘ+ಪ್ರಹರಣದಿಂ +ರುಧಿರ+ಪ್ರವಾಹ+ವಶ+ಗತ+ನಾಗಿರ್ದ +ಯುವ +ರಾಜನಿರ್ದೆಡೆಯಂ ಕುರುರಾಜನೆಯ್ದೆ +ವಂದಾಗಳ್

ನಿನ್ನ+ ಕೊಂದಂ +ಗಡ+ಮೊಳ
ನಿನ್ನುಂ +ಕೊಂದವನನ್ +ಇಕ್ಕಿ+ ಕೊಲ್ಲದೆ +ಮಾಣ್ದಾ
ನಿನ್ನು+ಮೊಳೆಂ +ಗಡ +ಸಾಲದೆ
ನಿನ್ನಯ +ಕೂರ್ಮೆಗ್+ಅಮದೆನ್ನ+ ಸೌಧರ್ಮಿಕೆಗಂ

ಅಚ್ಚರಿ:
(೧) ದುರ್ಯೋಧನನ ಸೋದರ ಪ್ರೀತಿಯ ವರ್ಣನೆ – ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ

ಪದ್ಯ ೧೯: ದುರ್ಯೋಧನನು ಮಗನ ಶವವನ್ನು ನೋಡಿ ಹೇಗೆ ದುಃಖಿಸಿದನು?

ಎಂದಾತ್ಮಗತದೊಳೆ ಬಗೆದು ಅಭಿಮನ್ಯುಗೆ ಕಯ್ಗಳಂ ಮುಗಿದು ಬರುತ್ತುಂ ತನ್ನ ಮಗನಪ್ಪ ಲಕ್ಷಣಕುಮಾರನಂ ನೆನೆದು ಮನ್ಯೂದ್ಗತಕಂಠನಾಗಿ ತದಾ ಸನ್ನಪ್ರದೇಶದೊಳ್ ಕಂಡು

ಅಂತು ಪುತ್ರಸ್ನೇಹ ಕಾತರ ಹೃದಯನಾಗಿ ಗಾಂಧಾರೀನಂದನಂ ಭಾನುಮತೀನಂದನನ ವದನಾರವಿಂದಮಂ ನೋಡಿ

ಜನಕಂಗೆ ಜಲಾಂಜಲಿಯಂ
ತನೂಭವಂ ಕುಡುವುದುಚಿತಮದುಗೆಟ್ಟೀಗಳ್
ನಿನಗಾಂ ಕುಡುವಂತಾದುದೆ
ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ (ದುರ್ಯೋಧನ ವಿಲಾಪಂ, ೧೯ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮನದೊಳಗೆ ಅಭಿಮನ್ಯುವಿನ ಸಾಹಸವನ್ನು ಮೆಚ್ಚಿ ಆತನ ಶವಕ್ಕೆ ನಮಸ್ಕರಿಸಿ ಮುಂದೆ ಬರುತ್ತಾ ತನ್ನ ಮಗನಾದ ಲಕ್ಷಣಕುಮಾರನನ್ನು ನೆನೆದು ದುಃಖದಿಂದ ತನ್ನ ಕಂಠವು ಗದ್ಗದಿತವಾಗಿ ಅಲ್ಲಿಯೇ ಹತ್ತಿರದಲ್ಲಿ ನೋಡುತ್ತಾ, ಕಾತುರದಿಂದ ಪುತ್ರಸ್ನೇಹಿಯಾದ ಗಾಂಧಾರೀನಂದನನು (ದುರ್ಯೋಧನನು), ಭಾನುಮತೀನಂದನನಾದ (ತನ್ನ ಮಗನಾದ) ಲಕ್ಷಣಕುಮಾರನ ಸತ್ತ ಮುಖಾಕಮಲವನ್ನು ನೋಡಿ, ಅತೀವ ದುಃಖತಪ್ತನಾಗಿ

ಅಯ್ಯೋ ಮಗನೆ, ತಂದೆ ಸತ್ತಾಗ ತಂದೆಗೆ ಮಗನು ಬೊಗಸೆ ನೀರನ್ನು ತರ್ಪಣೋದಕವನ್ನು ನೀಡುವುದು ಕ್ರಮ, ಆದರೆ ಇಲ್ಲಿ ಅದು ವಿರುದ್ಧವಾಗಿದೆ, ಈಗ ನಿನಗೆ ತರ್ಪಣವನ್ನು ನಾನು ಕೊಡುವಂತಾಗಿದೆ ಮಗನೇ, ಈ ಕ್ರಮವ್ಯತ್ಯಾಸ ಮಾಡಿರುವುದು ನ್ಯಾಯವೇ ಎಂದು ಮಗನ ಶವದ ಮುಖವನ್ನು ನೋಡಿ ದುಃಖಿಸಿದನು.

ಅರ್ಥ:
ಎಂದು: ಹೀಗೆ ಹೇಳುತ್ತಾ; ಆತ್ಮ:ಮನಸ್ಸು, ತಾನು; ಆತ್ಮಗತ: ತನಗೆ ತಾನೇ ಹೇಳಿಕೊಳ್ಳುವುದು; ಬಗೆದು: ತಿಳಿ; ಕಯ್ಗಳು: ಹಸ್ತ; ಮುಗಿ: ನಮಸ್ಕರಿಸು; ಬರುತ್ತಂ: ಮುಂದೆಹೋಗುತ್ತಾ; ಮಗ: ಪುತ್ರ; ನೆನೆ: ಜ್ಞಾಪಿಸಿಕೊಳ್ಳು; ಗತ: ಗತಿಸಿದ; ಕಂಠ: ಕೊರಳು; ತದಾ: ಆಗ; ಸನ್ನ: ಹತ್ತಿರ; ಪ್ರದೇಶ: ಜಾಗ; ಕಂಡು: ನೋಡಿ;

ಪುತ್ರ: ಮಗ; ಸ್ನೇಹ: ಗೆಳೆತನ, ಸಖ್ಯ; ಕಾತರ: ಕಳವಳ; ಹೃದಯ: ವಕ್ಷ; ನಂದನ: ಮಗ; ವದನಾರವಿಂದ: ಮುಖಕಮಲ; ನೋಡಿ: ವೀಕ್ಷಿಸಿ

ಜನಕ: ತಂದೆ; ಜಲಾಂಜಲಿ: ಬೊಗಸೆ ನೀರು, ತರ್ಪಣೋದಕ; ತನೂಭವ: ಮಗ; ಕುಡುವುದು: ನೀಡುವುದು; ಉಚಿತ: ಸರಿಯಾದ ರೀತಿ; ತನೂಜ: ಮಗ; ಕ್ರಮ: ರೀತಿ; ವಿಪರ್ಯ: ವ್ಯತ್ಯಾಸ;

ಪದವಿಂಗಡಣೆ:
ಎಂದ್+ಆತ್ಮಗತದೊಳೆ +ಬಗೆದು+ ಅಭಿಮನ್ಯುಗೆ +ಕಯ್ಗಳಂ +ಮುಗಿದು +ಬರುತ್ತುಂ +ತನ್ನ ಮಗನಪ್ಪ+ ಲಕ್ಷಣಕುಮಾರನಂ +ನೆನೆದು +ಮನ್ಯೂದ್ಗತ+ಕಂಠನಾಗಿ+ ತದಾ +ಸನ್ನಪ್ರದೇಶದೊಳ್ +ಕಂಡು

ಅಂತು +ಪುತ್ರಸ್ನೇಹ+ ಕಾತರ+ ಹೃದಯನಾಗಿ+ ಗಾಂಧಾರೀನಂದನಂ +ಭಾನುಮತೀನಂದನನ +ವದನಾರವಿಂದಮಂ+ ನೋಡಿ

ಜನಕಂಗೆ +ಜಲಾಂಜಲಿಯಂ
ತನೂಭವಂ +ಕುಡುವುದ್+ಉಚಿತಮ್+ಅದುಗೆಟ್+ಈಗಳ್
ನಿನಗಾಂ +ಕುಡುವಂತ್+ಆದುದೆ
ತನೂಜ+ ನೀಂ +ಕ್ರಮ+ವಿಪರ್ಯಯಂ +ಮಾಡುವುದೇ (ದುರ್ಯೋಧನ ವಿಲಾಪಂ, ೧೯ ಪದ್ಯ)

ಅಚ್ಚರಿ:
(೧) ತನೂಭವಂ, ತನೂಜ, ನಂದನ, ಮಗ – ಸಮನಾರ್ಥಕ ಪದಗಳು
(೨) ಜನಕಂಗೆ ಜಲಾಂಜಲಿ – ಜ ಕಾರದ ಪದಗಳ ಜೋಡಣೆ
(೩) ದುರ್ಯೋಧನನ ದುಃಖವನ್ನು ಚಿತ್ರಿಸುವ ಸನ್ನಿವೇಶದ ಚಿತ್ರಣ – ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ

ಪದ್ಯ ೧೫, ೧೭: ಅಭಿಮನ್ಯುವಿನ ದೇಹವನ್ನು ನೋಡಿ ದುರ್ಯೋಧನನು ಏನು ಬೇಡಿದನು?

ಅಂತಾತನನಹಿಕೇತನಂ ನೋಡಿ

ಗುರು ಪಣ್ಣಿದ ಚಕ್ರವ್ಯೂ
ಹರಚನೆ ಪೆರರ್ಗರಿದು ಪುಗಲದಂ ಪೊಕ್ಕು ರಣಾ
ಜಿರದೊಳರಿನೃಪರನಿಕ್ಕಿದ
ನರಸುತ ನಿನ್ನೊರೆಗೆ ದೊರೆಗೆ ಗಂಡರುಮೊಳರೇ (ದುರ್ಯೋಧನ ವಿಲಾಪಂ, ಪದ್ಯ ೧೫)

ಅಸಮಬಲ ಭವದ್ವಿಕ್ರಮ
ಮಸಂಭವಂ ಪೆರರ್ಗೆ ನಿನ್ನನಾನಿತಂ ಪ್ರಾ
ರ್ಥಿಸುವೆನಭಿಮನ್ಯು ನಿಜಸಾ
ಹಸೈಕದೇಶಾನುಮರಣಮೆಮಗಕ್ಕೆ ಗಡಾ (ದುರ್ಯೋಧನ ವಿಲಾಪಂ, ಪದ್ಯ ೧೭)

ತಾತ್ಪರ್ಯ:
ರಣರಂಗದಲ್ಲಿ ವೀರಮರಣ ಹೊಂದಿದ್ದ ಅಭಿಮನ್ಯುವಿನ ಶವವನ್ನು ನೋಡಿದ ದುರ್ಯೋಧನನು

ಗುರು ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸಲು ಅರ್ಜುನ ಮತ್ತು ನಿನ್ನನ್ನು ಬಿಟ್ಟು ಬೇರೆಯವರಿಗೆ ತಿಳಿಯದು. ಹೀಗೆ ಚಕ್ರವ್ಯೂಹವನ್ನು ಭೇದಿಸಿ ರಣರಂಗದಲ್ಲಿ ಶತ್ರುರಾಜರನ್ನು ಸದೆಬಡಿದ ಅರ್ಜುನನ ಪುತ್ರ ಅಭಿಮನ್ಯುವೇ ನಿನ್ನ ಸರಿಸಮಕ್ಕೆ ಬರುವ ಇನ್ನೊಬ್ಬ ವೀರನಿಲ್ಲ.

ಮಹಾಬಲಶಾಲಿ, ಜಗತ್ತಿನಲ್ಲಿ ಅತಿ ಪರಾಕ್ರಮಿ ನೀನು, ನಿನ್ನ ಪರಾಕ್ರಮ, ಸಾಹಸದಲ್ಲಿ ಒಂದು ಅಂಶಕ್ಕೆ ಅನುರೂಪವಾಗುವ ಮರಣ ನನಗೆ ಒದಗಲಿ. ನಿನ್ನ ಶೌರ್ಯ ಯಾರಿಗೂ ಇಲ್ಲ, ನನಗೂ ಸಹ ನೀನು ತೊರಿದ ಸಾಹಸದಲ್ಲಿ ಒಂದು ಭಾಗ ಮಾತ್ರವನ್ನೂ ನಾನು ತೋರಿಸಲು ಸಾಧ್ಯವಾಗಿ, ಅದಕ್ಕೆ ತಕ್ಕ ವೀರಮರಣ ನನಗೆ ದೊರೆತರೆ ಸಾಕು ಎಂದು ದುರ್ಯೋಧನನು ವಿನಯದಿಂದ ಅಭಿಮನ್ಯುವಿನ ದೇಹವನ್ನು ಕಂಡು ಪ್ರಾರ್ಥಿಸುತ್ತಾನೆ.

ಅರ್ಥ:
ಅಹಿ: ಹಾವು; ಕೇತನ: ಬಾವುಟ; ನೋಡಿ: ವೀಕ್ಷಿಸಿ

ಗುರು: ಆಚಾರ್ಯ; ಪಣ್ಣಿದ: ರಚಿಸಿದ; ಚಕ್ರವ್ಯೂಹ: ಒಂದು ಬಗೆಯ ಸೇನಾ ರಚನೆ; ರಚನೆ: ನಿರ್ಮಾಣ, ಸೃಷ್ಟಿ ; ಪೆರರ್ಗೆ: ಬೇರೆಯವರು; ಅರಿ: ತಿಳಿ; ಪೊಕ್ಕು: ಒಳಹೋಗಿ; ರಣ: ಯುದ್ಧ;
ಅಜಿರ: ಅಂಗಳ; ರಣಾಜಿರ: ಯುದ್ಧರಂಗ; ಅರಿ: ವೈರಿ; ನೃಪ: ರಾಜ; ಇಕ್ಕು: ಬಲವಾಗಿ ಗುದ್ದು, ಹೊಡಿ; ನರ: ಅರ್ಜುನ; ಸುತ: ಪುತ್ರ; ಒರೆ: ಚಿನ್ನವನ್ನು ಪರೀಕ್ಷೆಸುವ ಕಲ್ಲು, ಗುಣ, ದೋಷ ಪರೀಕ್ಷೆಮಾಡು, ಶೋಧಿಸಿ ನೋಡು; ಒರೆಗೆ ದೊರೆಗೆ: ಸರಿಸಮಕ್ಕೆ; ಗಂಡರು: ವೀರರು;

ಅಸಮಬಲ: ಅಸಾಮಾನ್ಯವಾದ ಶೌರ್ಯ; ಭವ: ಇರುವಿಕೆ, ಅಸ್ತಿತ್ವ; ವಿಕ್ರಮ: ಪರಾಕ್ರಮಿ; ಅಸಂಭವ: ಘಟಿಸಲಾರದ; ಪೆರರ್ಗೆ: ಬೇರೆಯವರಿಗೆ; ಪ್ರಾರ್ಥಿಸು: ಆರಾಧಿಸು; ನಿಜ: ದಿಟ; ಸಾಹಸ: ಪರಾಕ್ರಮ; ಮರಣ: ಸಾವು; ಎಮಗೆ: ನನಗೆ;ಗಡ: ಅಲ್ಲವೆ, ಆಶ್ಚರ್ಯವನ್ನು ಸೂಚಿಸುವ ಶಬ್ದ;

ಪದವಿಂಗಡಣೆ:
ಅಂತ್+ಆತನನ್+ಅಹಿ+ಕೇತನಂ +ನೋಡಿ

ಗುರು+ ಪಣ್ಣಿದ +ಚಕ್ರವ್ಯೂಹ
ರಚನೆ +ಪೆರರ್ಗ್+ಅರಿದು +ಪುಗಲದಂ+ ಪೊಕ್ಕು +ರಣಾ
ಜಿರದೊಳ್+ಅರಿ+ನೃಪರನ್+ಇಕ್ಕಿದ
ನರಸುತ +ನಿನ್ನೊರೆಗೆ+ ದೊರೆಗೆ+ ಗಂಡರುಂ+ಉಳರೇ

ಅಸಮಬಲ +ಭವದ್ವಿಕ್ರಮಮ್
ಅಸಂಭವಂ +ಪೆರರ್ಗೆ +ನಿನ್ನನ್+ಅನಿತಂ +ಪ್ರಾ
ರ್ಥಿಸುವೆನ್+ಅಭಿಮನ್ಯು +ನಿಜ+ಸಾ
ಹಸೈಕದ್+ಏಶಾನು+ಮರಣಂ+ಎಮಗಕ್ಕೆ+ ಗಡಾ

ಅಚ್ಚರಿ:
(೧) ದುರ್ಯೋಧನನನ್ನು ಅಹಿಕೇತನ ಎಂದು ಕರೆದಿರುವುದು – ಹಾವಿನ ಬಾವುಟವುಳ್ಳವನು
(೨) ಅಭಿಮನ್ಯುವನ್ನು ಹೊಗಳುವ ಪರಿ
– ನಿನ್ನೊರೆಗೆ ದೊರೆಗೆ ಗಂಡರುಮೊಳರೇ
– ಅಸಮಬಲ, ಭವದ್ವಿಕ್ರಮ, ಅಸಂಭವ
(೩) ಸಾಹಸನಾದ ದುರ್ಯೋಧನನೇ ಅಭಿಮನ್ಯುವಿನಂತ ವೀರಮರಣವು ಬರಲಿ ಎಂದು ಪ್ರಾರ್ಥಿಸುವ ಬಗೆ (ಇದರಿಂದಲೇ ಅಭಿಮನ್ಯುವಿನ ವೀರತ್ವ ತಿಳಿಯುತ್ತದೆ) – ಏಶಾನುಮರಣಮೆಮಗಕ್ಕೆ ಗಡಾ

ಪದ್ಯ ೧೪: ದುರ್ಯೋಧನನು ಮುಂದೆ ಯಾರ ದೇಹವನ್ನು ಕಂಡನು?

ಎಂದು ದುಃಖಂಗೆಯ್ದು ಕುಂಭಸಂಭವನಂ ತ್ರಿಃಪ್ರದಕ್ಷಿಣಂಗೆಯ್ದು ಬರುತ್ತಂ ಆ ದಿಶಾ ಭಾಗದೊಳ್

ಅರೆಮುರಿದಿರ್ದ ಕಣ್ಮಲರ್ದ ಮೊಗಂ ಕಡಿವೋದ ಕಯ್ಯುಮಾ
ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ
ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ
ಕುರುಪತಿ ನೋಡಿ ಕಂಡನಭಿಮನ್ಯು ಕುಮಾರನಾಜಿವೀರನಂ (ದುರ್ಯೋಧನ ವಿಲಾಪಂ, ೧೪ ಪದ್ಯ)

ತಾತ್ಪರ್ಯ:
ದ್ರೋಣರ ಛಿದ್ರವಾದ ದೇಹವನ್ನು ಕಂಡು ಅತೀವ ದುಃಖಿತನಾಗಿ ಅವರ ದೇಹಕ್ಕೆ ಮೂರು ಪ್ರದಕ್ಷಿಣೆಗಳನ್ನು ಹಾಕಿ ತನ್ನ ಗೌರವವನ್ನು ಸಲ್ಲಿಸಿ ರಣರಂಗದಲ್ಲಿ ಬಿದ್ದಿದ್ದ ದೇಹಗಳ ಮಧ್ಯೆ ಮುನ್ನಡೆದನು.

ಮುಂದೆ ಬರುತ್ತಾ ದುರ್ಯೋಧನನು ಅಭಿಮನ್ಯುವಿನ ದೇಹವನ್ನು ನೋಡುತ್ತಾನೆ. ಅರ್ಧ ಮುದುಡಿದ ಅವನ ಕಣ್ಣುಗಳು, ಅರಳಿದ ಮುಖ, ದೇಹದಿಂದ ಕಡಿದು ಬಿದ್ದಿದ್ದ ಕೈಯನ್ನು, (ಏಕಾಂಗಿಯಾದ ಅಭಿಮನ್ಯುವನ್ನು ಅನೇಕ ವೀರರು ಸುತ್ತುವರೆದು ಕಾದಾಡುವಾಗ ಅವನ ಕೈಗಳನ್ನು ಕರ್ಣನು ಕತ್ತರಿಸಿದನು, ಆದರೂ ಅಭಿಮನ್ಯು ಮೊಂಡಕೈಗಳಿಂದಲೇ ಯುದ್ಧ ಮಾಡಿದನು) ಭಯಂಕರವಾಗಿ ಪರಾಕ್ರಮದಿಂದ ಯುದ್ಧಮಾಡುತ್ತಾ ಹಲ್ಲಿನಿಂದ ಕಚ್ಚಿದ ಕೆಳ ದವಡೆಯಿಂದ ಕೂಡಿದ, ಎದುರು ಸೈನ್ಯದವರು ಬಿಟ್ಟ ಹಲವಾರು ಬಾಣಗಳಿಂದ ಛಿದ್ರವಾದ ದೇಹದಿಂದ ಆಗತಾನೆ ತನ್ನ ದೇಹದಿಂದ ಹರಿದ ರಕ್ತದ ಸಮುದ್ರದಲ್ಲಿ ಮುಳುಗಿ ಬಿದ್ದಿದ್ದ ಯುದ್ಧದಲ್ಲಿ ಪರಾಕ್ರಮವನ್ನು ತೊರಿದ ವೀರ ಕುಮಾರನಾದ ಅಭಿಮನ್ಯುವನ್ನು ದುರ್ಯೋಧನನು ಕಂಡನು.

ಅರ್ಥ:
ದುಃಖ: ದುಗುಡ, ಚಿಂತೆ; ಕುಂಭ: ಕಳಶ; ಕುಂಭಸಂಭವ: ಕಳಶದಿಂದ ಹುಟ್ಟಿದ (ದ್ರೋಣ); ತ್ರಿ: ಮೂರು; ಪ್ರದಕ್ಷಿಣೆ: ಸುತ್ತುವರಿ; ಬರುತ್ತ: ಮುನ್ನಡೆಯುತ್ತಾ; ದಿಶ: ದಿಕ್ಕು;

ಅರೆ: ಅರ್ಧಭಾಗ; ಮುರಿ: ಸೀಳು; ಕಣ್ಣು: ನಯನ; ಮಲರ್: ಹೂವು; ಅಲರ್ದ: ಅರಳಿದ; ಮೊಗ: ಮುಖ; ಕಡಿ: ಕತ್ತರಿಸಿದ, ತುಂಡಾದ; ಕಯ್ಯುಂ: ಕೈ, ಕರ; ಅಸುರತರ: ಅತಿ ಭಯಂಕರನಾಗಿ; ಕರ್ಚು: ಹಲ್ಲಿನಿಂದ ಕಡಿ; ಕರ್ಚಿ: ಉತ್ತಮವಲ್ಲದ್ದು, ಕರಿಬಣ್ಣದ; ಅವುಡಂ ಬೆರಸು: ಕೆಳದವಡೆಯಿಂದ ಕೂಡಿ; ಅನ್ಯ: ಬೇರೆ; ಶರ: ಬಾಣ; ಪ್ರಹಾರ: ಹೊಡೆತ, ಪೆಟ್ಟು; ಜರ್ಜರಿತ: ಚೂರು ಚೂರಾಗಿ; ಶರೀರ: ದೇಹ; ನವ: ಹೊಸ; ಲೋಹಿತ: ರಕ್ತ, ನೆತ್ತರು; ವಾರ್ಧಿ: ವಾರಿಧಿ, ಸಮುದ್ರ; ಅಳ್ದು: ಮುಳುಗಿ; ಬಿಳ್ದನಂ: ಬಿದ್ದು; ಕುರುಪತಿ: ದುರ್ಯೋಧನ್; ನೋಡು: ವೀಕ್ಷಿಸು; ಕಂಡು: ಗೋಚರಿಸು; ಆಜಿ: ಯುದ್ಧ; ವೀರ: ಪರಾಕ್ರಮಿ;

ಪದವಿಂಗಡಣೆ:
ಅರೆ+ಮುರಿದಿರ್ದ +ಕಣ್+ಮಲರ್ದ +ಮೊಗಂ +ಕಡಿವೋದ+ ಕಯ್ಯುಮ್
ಅಸುರತರಮಾಗೆ+ ಕರ್ಚಿದ್+ಅವುಡುಂ ಬೆರಸ್+ಅನ್ಯ+ಶರ+ಪ್ರಹಾರ+ ಜ
ರ್ಜರಿತ+ಶರೀರನಾಗಿ+ ನವ+ಲೋಹಿತ+ವಾರ್ಧಿಯೊಳ್+ಅಳ್ದು+ ಬಿಳ್ದನಂ
ಕುರುಪತಿ+ ನೋಡಿ +ಕಂಡನ್+ಅಭಿಮನ್ಯು +ಕುಮಾರನ್+ಆಜಿ+ವೀರನಂ

ಅಚ್ಚರಿ:
(೧) ಅಭಿಮನ್ಯುವಿನ ಸತ್ತ ದೇಹದ ವರ್ಣನೆ – ಅರೆಮುರಿದಿರ್ದ ಕಣ್ಮಲರ್ದ ಮೊಗಂ ಕಡಿವೋದ ಕಯ್ಯು
(೨) ರಕ್ತದಲ್ಲಿ ಮುಳುಗಿದ್ದ ಎಂದು ವರ್ಣಿಸಲು – ವಲೋಹಿತವಾರ್ಧಿಯೊಳಳ್ದು ಬಿಳ್ದನಂ
(೩) ಅಭಿಮನ್ಯುವಿನ ಗುಣಗಾನ – ಕುಮಾರನಾಜಿವೀರನಂ

ಪದ್ಯ ೧೨: ದ್ರೋಣರ ದೇಹವನ್ನು ನೋಡಿ ದುರ್ಯೋಧನನು ಏನೆಂದು ಚಿಂತಿಸಿದನು?

ಅಂತು ನಿಸರ್ಗದುಷ್ಟದೃಷ್ಟದ್ಯುಮ್ನ ಕರವಿಲುಳಿತಮೌಳಿಯಾಗಿರ್ದ ಭಾರದ್ವಾಜ ನಿರವಂ ರಾಜರಾಜಂ ನೋಡಿ

ಅರೆಯೆಮೆ ಬಿಲ್ಲ ಬಿನ್ನಣಕೆ ಗಾಂಡಿವಿಯಲ್ತು ಪಿನಾಕಪಾಣೀಯುಂ
ನೆರೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕದು ನಿಮ್ಮುಪೇಕ್ಷೆಯೆಂ
ದರಿಯೆನಿದೆನ್ನ ಕರ್ಮವಶಮೆಂದರೆಯೆಂನಿಮಗೆಂತು ಸಾವು ಮೀ
ತೆರದಿನಕಾರಣಂ ನೆರೆಯೆ ಸಂಭವಿಸಿರ್ದುದೊ ಕುಂಭಸಂಭವಾ (ದುರ್ಯೋಧನ ವಿಲಾಪಂ, ೧೨ ಪದ್ಯ)

ತಾತ್ಪರ್ಯ:
ಹೀಗೆ ರಣರಂಗದ ಹೆಣಗಳನ್ನು ನೋಡುತ್ತಾ ಬರುತ್ತಿದ್ದ ದುರ್ಯೋಧನನು ಸ್ವಭಾವತಃ ದುಷ್ಟನಾದ ದೃಷ್ಟದ್ಯುಮ್ನನು ತನ್ನ ಕೈಯಿಂದ ದ್ರೋಣನ ಶವದ ಕೂದಲನ್ನು ಹಿಡಿದುಕೊಂಡು ತಿರುಚಿ ತಲೆಯನ್ನು ಕತ್ತರಿಸಿ ಅಪಮಾನಮಾಡಿದ ದೃಶ್ಯವನ್ನು ದುರ್ಯೋಧನನು ನೋಡಿದನು

ಇದನ್ನು ನಾವು ಅರಿಯೆವೆ? ಬಿಲ್ಲ ಬಾಣಗಳ ಕೈಚಳಕದಲ್ಲಿ ಪ್ರವೀಣರಾದ ನೀವು ಗಾಂಡೀವಿಧರನಾದ ಅರ್ಜುನನಿರಲಿ, ಪಿನಾಕವೆಂಬ ಧನಸ್ಸನ್ನು ಹಿಡಿದ ಶಿವನೂ ಕೂಡ ನಿಮ್ಮೆದುರು ನಿಂತು ಯುದ್ಧಮಾಡಲು ಸಮರ್ಥನಾಗುದುವಿಲ್ಲ. ಶಿವನೇ ನಿಮ್ಮನ್ನು ಸೋಲಿಸಲಾರ ನೆಂದಾದರೆ ಅರ್ಜುನನು ನಿಮಗೆ ಯಾವ ಲೆಕ್ಕ? ಹೀಗಿರುವಾಗ ಅದು ಹೇಗೆ ನೀವು ಯುದ್ಧದಲ್ಲಿ ನೀವು ಅಸುನೀಗಿದಿರಿ? ಇದು ನಿಮ್ಮ ಉಪೇಕ್ಷೆಯ ಫಲವೋ ಅಥವ ನನ್ನ ಕರ್ಮದ ಫಲವೋ ಎಂದು ನಾನರಿಯೆ ಎಂದು ದ್ರೋಣರ ಮೃತದೇಹವನ್ನು ನೋಡಿ ದುರ್ಯೋಧನನು ಚಿಂತಿಸಿದನು.

ಅರ್ಥ:
ನಿಸರ್ಗದುಷ್ಟ: ಸ್ವಭಾವತಃ ಕೆಟ್ಟವನಾದ; ಕರ: ಕೈ; ವಿಲುಳಿತ; ತಿರುಚಲ್ಪಟ್ಟ; ಮೌಳಿ: ಶಿರ; ಭಾರದ್ವಾಜ: ದ್ರೋಣ;

ಅರೆ: ತಿಳಿ; ಎಮೆ: ನಾವು; ಬಿಲ್ಲು: ಧನಸ್ಸು; ಬಿನ್ನಾಣ:ಕೌಶಲ್ಯ, ನೈಪುಣ್ಯ; ಗಾಂಡೀವಿ: ಅರ್ಜುನ; ಪಿನಾಕ: ತ್ರಿಶೂಲ, ಶಿವನ ಧನಸ್ಸು; ಪಿನಾಕಪಾಣಿ: ಶಿವ; ನೆರೆಯನ್: ಸಮರ್ಥನಾಗುವುದಿಲ್ಲ; ಕಾದು: ಯುದ್ಧ ಮಾಡು; ಗೆಲಲ್: ಗೆಲ್ಲು, ಜಯ; ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ಅರಿ: ತಿಳಿ; ಕರ್ಮ: ಕಾರ್ಯದ ಫಲ; ಧರ್ಮ; ವಶ: ಅಧೀನ, ಅಂಕೆ, ಹತೋಟಿ; ಸಾವು: ಮರಣ; ಸಂಭವಿಸು: ಉಂಟಾಗು, ಒದಗಿಬರು, ಸಾಧ್ಯವಾಗು; ಕುಂಭ: ಕಳಶ; ಸಂಭವ: ಹುಟ್ಟಿದ; ಕುಂಭಸಂಭವ: ದ್ರೋಣ (ಕಳಶದಿಂದ ಹುಟ್ಟಿದ);

ಪದವಿಂಗಡಣೆ:
ಅಂತು +ನಿಸರ್ಗದುಷ್ಟ+ದೃಷ್ಟದ್ಯುಮ್ನ +ಕರ+ ವಿಲುಳಿತ+ಮೌಳಿಯಾಗಿರ್ದ+ ಭಾರದ್ವಾಜ+ ನಿರವಂ ರಾಜರಾಜಂ +ನೋಡಿ

ಅರೆ+ಎಮೆ +ಬಿಲ್ಲ +ಬಿನ್ನಣಕೆ +ಗಾಂಡಿವಿಯಲ್ತು+ ಪಿನಾಕಪಾಣೀಯುಂ
ನೆರೆಯನ್+ಇದಿರ್ಚಿ +ನಿಮ್ಮೊಡನೆ +ಕಾದಿ +ಗೆಲಲ್ಕ್+ಅದು +ನಿಮ್ಮ್+ಉಪೇಕ್ಷೆಯೆಂದ್
ಅರಿಯೆನ್+ಇದೆನ್ನ +ಕರ್ಮವಶಮ್+ಎಂದರೆಯೆಂ+ನಿಮಗೆಂತು+ ಸಾವು+ ಮೀ
ತೆರದಿನಕಾರಣಂ +ನೆರೆಯೆ+ ಸಂಭವಿಸಿರ್ದುದೊ +ಕುಂಭಸಂಭವಾ

ಅಚ್ಚರಿ:
(೧) ಸ್ವಭಾವತಃ ಎಂದು ಹೇಳಲು – ನಿಸರ್ಗ ಪದದ ಬಳಕೆ
(೨) ದ್ರೋಣರನ್ನು ಭಾರದ್ವಾಜ, ಕುಂಭಸಂಭವ ಎಂದು ಕರೆದಿರುವುದು
(೩) ದುರ್ಯೋಧನನ ಆಶ್ಚರ್ಯದ ನುಡಿಗಳು – ನಿಮಗೆಂತು ಸಾವು ಮೀತೆರದಿನಕಾರಣಂ ನೆರೆಯೆ ಸಂಭವಿಸಿರ್ದುದೊ ಕುಂಭಸಂಭವಾ
(೪) ದುರ್ಯೋಧನನ ಬೇಸರದ ನುಡಿಗಳು – ನಿಮ್ಮುಪೇಕ್ಷೆಯೆಂ ದರಿಯೆನಿದೆನ್ನ ಕರ್ಮವಶಮೆಂದರೆಯೆಂ
(೫) ದ್ರೋಣರ ಮಹಿಮೆ: ಬಿಲ್ಲ ಬಿನ್ನಣಕೆ ಗಾಂಡಿವಿಯಲ್ತು ಪಿನಾಕಪಾಣೀಯುಂ
ನೆರೆಯನಿದಿರ್ಚಿ

ಪದ್ಯ ೧೧: ದುರ್ಯೋಧನನು ರಣರಂಗದಲ್ಲಿ ದ್ರೋಣರನ್ನು ಯಾವ ಸ್ಥಿತಿಯಲ್ಲಿ ಕಂಡನು?

ಇಭಶೈಲಂಗಳನೇರಿಯೇರಿ ರುಧಿರಸ್ರೋತಂಗಳಂ ದಾಂಟಿ ದಾಂ
ಟಿಭದೋರ್ನೀಲ ಲತಾನ ವಿಪಿನವ್ರಾತಂಗಳೊಳ್ ಸಿಲ್ಕಿ ಸಿ
ಲ್ಕಿ ಭರಂಗೆಯ್ದುರದೆಯ್ದಿ ಸಂಜಯಶಿರಃ ಸ್ಕಂಧಾವಲಂಬಂ ಕುರು
ಪ್ರಭು ಕಂಡಂ ಶರಜಾಲಜರ್ಜರಿತಗಾತ್ರತ್ರಾಣನಂ ದ್ರೋಣನಂ (ದುರ್ಯೋಧನ ವಿಲಾಪಂ, ಪದ್ಯ ೧೧)

ತಾತ್ಪರ್ಯ:
ಸತ್ತ ಆನೆಗಳ ದೇಹವು ಬೆಟ್ಟದಂತಿದ್ದವು, ಸತ್ತ ಸೈನಿಕರು, ಮಹಾರಥರ ದೇಹದಿಂದ ಹೊರಹೊಮ್ಮಿದ ರಕ್ತವು ನದಿಯಾಗಿ ಹರಿಯುತ್ತಿತ್ತು, ಸತ್ತ ಆನೆಯ ಸೊಂಡಿಲು ಬಳ್ಳಿಯಂತೆ ಎಲ್ಲಾಕಡೆಯು ಹರಡಿದ್ದವು. ಇಂತಹ ಘೋರ ಮೃತ್ಯುವಿನ ನರ್ತನದ ರಣರಂಗದಲ್ಲಿ ದುರ್ಯೋಧನನು ಬರುತ್ತಿದ್ದಾನೆ. ಬೆಟ್ಟದಂತ್ತಿದ್ದ ಆನೆಗಳ ದೇಹವನ್ನು ಏರುತ್ತಾ, ಕಣಿವೆಯಲ್ಲಿ ನದಿಯನ್ನು ಹೋಲುವ ಮಹಾರಥರ ರಕ್ತದ ಹರಿವನ್ನು ದಾಟುತ್ತಾ, ಅರಣ್ಯ ಸಮೂಹಗಳಲ್ಲಿ ಆನೆಸೊಂಡಿಲುಗಳೆಂಬ ಕಪ್ಪು ಬಳ್ಳಿಯ ಪೊದರುಗಳಲ್ಲಿ ಸಿಲುಕಿ ಸಿಲುಕಿ ಭಾರವಾದ ತನ್ನ ಹೃದಯ ಮನಸ್ಸನ್ನು ಲಕ್ಷ್ಯಮಾಡದೆ ಸಂಜಯನ ಶಿರಸ್ಸು ಮತ್ತು ಭುಜಗಳನ್ನು ಆಸರೆಯಾಗಿ ಪಡೆದು ದುರ್ಯೋಧನನು ರಣರಂಗದಲ್ಲಿ ಬಾಣಗಳ ಬಲೆಯಲ್ಲಿ ಛಿದ್ರಛಿದ್ರವಾಗಿದ್ದ ಪ್ರಾಣಶಕ್ತಿ ಹೀನವಾಗಿದ್ದ ದ್ರೋಣರ ದೇಹವನ್ನು ಕಂಡನು.

ಅರ್ಥ:
ಇಭ: ಆನೆ; ಶೈಲ: ಬೆಟ್ಟ; ಏರು: ಮೇಲೆ ಹತ್ತು; ರುಧಿರ:ರಕ್ತ; ಸ್ರೋತ:ರಭಸವುಳ್ಳ ಪ್ರವಾಹ; ದಾಂಟಿ: ದಾಟು, ಹಾಯ್ದುಹೋಗು; ನೀಲ: ಕಪ್ಪು; ಇಭದೋ: ಆನೆಯ ಸೊಂಡಿಲು; ವಿಪಿನ: ಕಾಡು, ಅಡವಿ, ಕಾನನ; ವ್ರಾತ: ಗುಂಪು; ಸಿಲ್ಕಿ: ಸಿಕ್ಕುಹಾಕಿ, ಬಂಧನಕ್ಕೊಳಗಾದುದು; ಭರ: ಹೊರೆ, ಭಾರ; ಉರದೆ: ಲಕ್ಷ್ಯಮಾಡದೆ; ಶಿರ: ತಲೆ; ಸ್ಕಂಧ:ಹೆಗಲು, ಭುಜಾಗ್ರ, ಮರದ ಕಾಂಡ; ಅವಲಂಬ: ಆಸರೆ, ಆಶ್ರಯ; ಪ್ರಭು: ರಾಜ; ಕಂಡಂ: ನೋಡಿದ; ಶರ: ಬಾಣ; ಜಾಲ:ಬಲೆ; ಜರ್ಜರಿತ: ಛಿದ್ರವಾದ; ಗಾತ್ರ: ಒಡಲು, ದೇಹ; ತ್ರಾಣ: ಶಕ್ತಿ, ಬಲ; ಗಾತ್ರತ್ರಾಣ: ಮೈಜೋಡನ್ನುಳ್ಳ;

ಪದವಿಂಗಡಣೆ:
ಇಭ+ಶೈಲಂಗಳನ್+ಏರಿಯೇರಿ +ರುಧಿರ+ಸ್ರೋತಂಗಳಂ +ದಾಂಟಿ +ದಾಂಟ್
ಇಭದೋರ್+ ನೀಲ+ ಲತಾನ+ ವಿಪಿನ+ವ್ರಾತಂಗಳೊಳ್ +ಸಿಲ್ಕಿ+ ಸಿ
ಲ್ಕಿ +ಭರಂಗೆಯ್ದ್+ಉರದೆಯ್ದಿ +ಸಂಜಯ+ಶಿರಃ +ಸ್ಕಂಧ+ಅವಲಂಬಂ +ಕುರು
ಪ್ರಭು +ಕಂಡಂ +ಶರಜಾಲ+ಜರ್ಜರಿತ+ಗಾತ್ರತ್ರಾಣನಂ +ದ್ರೋಣನಂ

ಅಚ್ಚರಿ:
(೧) ರಣರಂಗದ ಚಿತ್ರಣವನ್ನು ಬೆಟ್ಟ, ನದಿ, ಬಳ್ಳಿ, ಕಾಡಿಗೆ ಹೋಲಿಸಿರುವುದು
(೨) ಸತ್ತ ಆನೆಯನ್ನು ಬೆಟ್ಟಗಳಿಗೆ, ಸತ್ತ ಆನೆಯ ಸೊಂಡಿಲನ್ನು ಬಳ್ಳಿಗೆ (ಕಪ್ಪು ಬಳ್ಳಿ), ರಕ್ತವನ್ನು ನದಿಗಳಿಗೆ
(೩) ಘೋರತರವಾದ ರಣರಂಗದಲ್ಲೂ ಕಾಡಿನ (ಪ್ರಕೃತಿಯ) ಸೊಬಗನ್ನು ಕಾಣುವ ಕಲ್ಪನೆ
(೪) ಏರಿ ಏರಿ, ದಾಟಿ ದಾಟಿ, ಸಿಲ್ಕಿ ಸಿಲ್ಕಿ – ಪದಗಳ ಪ್ರಯೋಗ, ಹಲವಾರು ಬಾರಿ ಎಂದು ಸೂಚಿಸಲು ಎರಡು ಬಾರಿ ಕಾವ್ಯದಲ್ಲಿ ಪ್ರಯೋಗ