ಕೀರ್ತಿನಾಥ ಕುರ್ತಕೋಟಿ

ಕನ್ನಡ ಸಾಹಿತ್ಯ ಲೋಕದ ಮೇರು ವಿದ್ವಾಂಸರು, ಮಿಮರ್ಶಕರ ಸಾಲಿನಲ್ಲಿ ಕುರ್ತಕೋಟಿ ಅಗ್ರಗಣ್ಯರು. ಕಾವ್ಯ, ಹರಟೆ, ನಾಟಕ, ಕಾದಂಬರಿ, ಅನುವಾದ, ವಿಮರ್ಶೆ ಮುಂತಾದ ಹಲವು ಪ್ರಕಾರದ ಕನ್ನಡ ಸಾಹಿತ್ಯವನ್ನು ರಚನೆ ಮಾಡಿದವರು. ಇವರನ್ನು ಬಹಳ ಕಾಡಿದ ಕವಿಗಳೆಂದರೆ ಕುಮಾರವ್ಯಾಸ ಮತ್ತು ಬೇಂದ್ರೆ. ಈ ಕವಿಗಳ ಸಾಹಿತ್ಯ ಸಾಕುಬೇಕಾದಷ್ಟು ಓದಿ, ಸಾಹಿತ್ಯ ಸಮಯವನ್ನು ಒರೆಗೆ ಹಚ್ಚಿದವರು ಕುರ್ತಕೋಟಿ. ಸಾಹಿತ್ಯ ಸಂಗಾತಿ ವಿಮರ್ಶಾ ಕೃತಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದವರು.

ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಕುರ್ತಕೋಟಿಯವರ ನೆಚ್ಚಿನ ವಿಷಯಗಳಾಗಿದ್ದವು. ಕನ್ನಡ ಸಾಹಿತ್ಯಕ್ಕೆ ಸ್ಪಷ್ಟ ದಾರಿಯನ್ನು ತೋರಿಸಿದ ಕೀರ್ತಿನಾಥರು ಕನ್ನಡ ವಿಮರ್ಶೆಗೆ ಗಟ್ಟಿ ತಳಪಾಯ ಹಾಕಿದರು. ಕವಿಯ ಕಾವ್ಯ ಯಾವ ರೀತಿ ಓದಬೇಕು, ಅದನ್ನು ಹೇಗೆ ಗ್ರಹಿಸಬೇಕು, ಅದರ ಶೈಲಿ, ಪದಗಳ ಬಳಕೆ ಮುಂತಾದವುದನ್ನು ಅವರ ವಿಮರ್ಶೆ ಸಾಕ್ಷತ್ಕರಿಸುತ್ತದೆ.

ಕುರ್ತಕೋಟಿಯವರು ಗದಗ ಸಮೀಪದ ಕುರ್ತಕೋಟಿ ಎಂಬ ಗ್ರಾಮದಲ್ಲಿ ೧೯೨೮ರ ಅಕ್ಟೋಬರ್ ೧೩ ರಂದು ಜನಿಸಿದರು. ಇವರದು ವಿದ್ವತ್ ಪರಂಪರೆಯುಳ್ಳ ಸುಸಂಸ್ಕೃತ ಮನೆತನ. ಅಜ್ಜನ ಹೆಸರನ್ನು ಇವರಿಗೆ ಇಟ್ಟ ಕಾರಣ ಇವರ ಪೂರ್ಣ ಹೆಸರು ಕೀರ್ತಿನಾಥ ದತ್ತಪ್ಪಗೌಡ ಕುರ್ತಕೋಟಿ. ಪ್ರಾಥಮಿಕ ಪ್ರೌಢ ಶಿಕ್ಷಣ ಗದುಗಿನಲ್ಲಾದರೆ, ಧಾರವಾಡದಲ್ಲಿ ಪದವಿಯನ್ನು ಪಡೆದರು. ಗದುಗಿನ ವಿದ್ಯಾದಾನ ಸಮಿತಿಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಅಚ್ಚುಮೆಚ್ಚಿನ ಮಾಸ್ತರರಾಗಿ ಕೀರ್ತಿ ಮಾಸ್ತರೆಂದೇ ಪ್ರಸಿದ್ಧಿ ಪಡೆದರು. ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಪುಣೆಯ ಸರ್.ಪರಶುರಾಮ ಭಾವು ಕಾಲೇಜಿನಲ್ಲಿ ಕೆಲ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಇವರ ವಿದ್ವತ್ ಪೂರ್ಣತೆಯನ್ನು ಗುರುತಿಸಿ ಗುಜರಾತಿಅನ ಆನಂದದಲ್ಲಿರುವ ವಲ್ಲಭ ವಿದ್ಯಾನಗರ ಕಾಲೇಜಿನ ಪ್ರಾಂಶುಪಾಲರು ತಮ್ಮ ಸಂಸ್ಥೆಗೆ ಉಪನ್ಯಾಸಕರಾಗಿ ಕರೆಸಿಕೊಂಡರು. ೩೨ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಚೈತನ್ಯದ ಚಿಲುಮೆಯಾಗಿ ೧೯೮೯ರಲ್ಲಿ ನಿವೃತ್ತರಾದರು.

ಇವರು ಬಿ.ಎ. ವ್ಯಾಸಂಗ ಮಾದುತ್ತಿದ್ದಾಗಲೇ ಮಿತ್ರರಾದ ಪುಣೇಕರರೊಡಗೂಡಿ ಹೊರತಂದ ಕವನ ಸಂಕಲನ ಗಾನಕೇಳಿ, ನಂತರ ನಾಟಕ, ವಿಮರ್ಶೆ ಬರೆಯಲು ಪ್ರಾರಂಭಿಸಿದರು. ಉರಿಯ ನಾಲಿಗೆ, ಕುಮಾರವ್ಯಾಸ, ನೂರು ಮರ ನೂರ ಸ್ವರ, ಬಾರೋ ಸಾಧನಕೇರಿಗೆ, ಬಯಲು ಆಲಯ, ಹೊಸಗನ್ನಡದಲ್ಲಿ ಮಹಾಕಾವ್ಯ, ಇವು ಅವರ ವಿಮರ್ಶಾ ಕೃತಿಗಳು. ಕನ್ನಡವಷ್ಟೇ ಅಲ್ಲದೆ ಆಂಗ್ಲಭಾಷೆಯಲ್ಲೂ ಇವರ ಕೃತಿಗಳನ್ನು ಕಾಣಬಹುದು. ಹಲವಾರು ಸಂಸ್ಥೆಗಳಲ್ಲಿ ಇವರು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಮರಾಠಿ ಸಂಸ್ಕೃತಿ ಕೆಲವು ಸಮಸ್ಯೆಗಳು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉರಿಯ ನಾಲಿಗೆ ಅಂಕಣ ಬರಕ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಗೌರವಗಳು ಇವರನ್ನು ಹುಡುಕಿಬಂದಿವೆ.

೨೦೦೩ ರಲ್ಲಿ ಇವರು ಇಹಲೋಕದ ಯಾತ್ರೆಯನ್ನು ಮುಗಿಸಿದರು. ಧಾರವಾಡದಲ್ಲಿ ಕುರ್ತಕೋಟಿಯವರ ನೆನಪಿಗಾಗಿ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಸ್ಥಾಪಿಸಿ ಅವರಿಗೆ ನಮನ ಸಲ್ಲಿಸಲಾಗಿದೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ