ಕುಂ. ವೀರಭದ್ರಪ್ಪ

ಕನ್ನಡದ ಮುಖ್ಯ ಲೇಖಕರಲ್ಲಿ ಒಬ್ಬರಾಗಿ ವೈವಿಧ್ಯಮಯವಾದ ಮತ್ತು ಹೊಸತಾದ ಸಾಹಿತ್ಯಲೋಕವನ್ನು ತೆರೆದಿಟ್ಟವರು ಕುಂವೀ. ಕನ್ನಡ ಸಾಹಿತ್ಯವು ನವ್ಯದ ಅಂತರ್ಮುಖತೆಯಿಂದ ಹೊರಬಂದು ಬಂಡಾಯದ ಕೆಚ್ಚನ್ನು ಪಡೆದುಕೊಳ್ಳುತ್ತಿದ್ದಾಗ ತುಳಿತಕ್ಕೋಳಗಾದವರ ಮತ್ತು ನತದೃಷ್ಟರ ಬದುಕನ್ನು ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ಚಿತ್ರಣ ಮಾಡುವುದರೊಂದಿಗೆ ಇಡೀ ಸಾರಸ್ವತ ಲೋಕದ ಗಮನ ಸೆಳೆದರು. ರಾಯಲಸೀಮೆಯ ಜಮೀನ್ದಾರಿ ವ್ಯವಸ್ಥೆಯ ಕ್ರೂರತೆಯನ್ನು ಅವರಂತೆ ಅನಾವರಣ ಮಾಡಿದವರು ವಿರಳ.

ಇವರು ಶ್ರಮಿಸಿದ ಹಾದಿ ಮಾತ್ರ ತುಂಬ ದುರ್ಗಮ. ಆಂಧ್ರದ ಹಳ್ಳಿಯಲ್ಲಿ ಕನ್ನಡ ಶಾಲೆಯ ಮಾಸ್ತರನಾಗಿ ಆ ಪ್ರದೇಶದಲ್ಲಿ ಮನೆ ಮಾಡಿದ್ದ ಕ್ರೂರ ಊಳಿಗಮಾನ್ಯ ವ್ಯವಸ್ಥೆಯನ್ನು ಅಕ್ಷರಗಳ ಮೂಲಕ ಅವರು ಬೆಳಕಿಗೆ ಹಿಡಿದರು. ಗ್ರಾಮೀಣ ಬಡತನ, ಅಸಮಾನ ಬೆಳವಣಿಗೆ ಮತ್ತು ಕಗ್ಗತ್ತಲಲ್ಲಿ ಇರುವ ನಾಗರಿಕತೆಗಳನ್ನು ಸಮಾಜಕ್ಕೆ ಮುಖಾಮುಖಿಯಾಗಿಸಿದರು. ಇನ್ನಾದರೂ ಸಾಯಬೇಕು ಎನ್ನುತ್ತಿದ್ದ ಜನತೆಯಲ್ಲಿ ಬದುಕಿನ ಚೈತನ್ಯ ಮೂಡಿಸುವಲ್ಲಿ ಆ ಕತ್ತಲ ಜಗತ್ತನ್ನು ಬೆಳಕಿಗೆ ಸರಿಸುವಲ್ಲಿ ಕುಂವೀ ಸಾಹಿತ್ಯ ನಿರ್ವಹಿಸಿದ ಪಾತ್ರವು ಮಹತ್ತರವಾದುದಾಗಿದೆ.

ತಾವು ಕಂಡುಂದ ಬೇಗ ಬವಣೆಗಳನ್ನು ಚಿತ್ರಿಸಲು ಸಮರ್ಥವಾಗಿ ಸಾಹಿತ್ಯವನ್ನು ಉಪಯೋಗಿಸಿಕೊಂಡ ಕುಂವೀ ಪುಂಖಾನುಪುಂಖವಾಗಿ ಕತೆಗಳನ್ನು ಬರೆದರು. ಅವು ವಿಶಿಷ್ಟ್ರವೂ ಪ್ರಯೋಗಶೀಲವೂ ಆಗಿದ್ದುದರಿಂದ ಬಹುಬೇಗನೆ ಅವರು ಅಪಾರ ಓದುವ ವರ್ಗವನ್ನು ಕಂಡುಕೊಂಡರು. ಈವರೆಗೆ ಇವರು ಹದಿನಾಲ್ಕು ಕಥಾ ಸಂಕಲನಗಳನ್ನು, ಹದಿನೇಳು ಕಾದಂಬರಿಗಳನ್ನು ಗಾಂಧಿ ಕ್ಲಾಸು ಎನ್ನುವ ಆತ್ಮಕಥೆಯನ್ನು, ನಾಲ್ಕು ಅನುವಾದ ಕೃತಿಗಳನ್ನು ನಾಲ್ಕು ಜೀವನ ಚರಿತ್ರೆಗಳನ್ನು ಒಂದು ವಿಮರ್ಶಾ ಕೃತಿಯನ್ನು ಹಾಗೂ ದಿವಿ ಸೀಮೆಯ ಹಾಡು ಎನ್ನುವ ಕವನ ಸಂಕಲವನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ ಲೇಖಕನೆಂದು ಗುರುತಿಸಲ್ಪಟ್ಟಿದ್ದಾರೆ.

ಇವರ ಮೊದಲ ಕಾದಂಬರಿ ಕಪ್ಪು, ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನವನ್ನು ದೊರಕಿಸಿಕೊಟ್ಟಿತು. ಅವರ ಮಹತ್ವಾಂಕಾಂಕ್ಷಿ ಕಾದಂಬರಿ ಅರಮನೆಗೆ ೨೦೦೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿತು. ಅವರ ಶಾಮಣ್ಣ ಕಾದಂಬರಿ ಮೇಲ್ಜಾತಿ ವ್ಯಕ್ತಿಯೊಬ್ಬನ ಬದುಕಿನ ಸಂದಿಗ್ಧತೆ ಮತ್ತು ದುರಂತಗಳನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ. ವ್ಯಕ್ತಿತ್ವಶೋಧ ಮಹತ್ವದ್ದಾಗುತ್ತದೆ. ಅವರ ಮತ್ತೊಂದು ಮಹತ್ವದ ಕಾದಂಬರಿ ಕೂರ್ಮಾವತಾರದಲ್ಲಿ ಕುಬ್ಜನಾಗಿದ್ದ ವ್ಯಕ್ತಿ ಮಹಾತ್ಮಾ ಗಾಮ್ಧಿಯ ಪಾತ್ರ ನಿರ್ವಹಿಸುತ್ತ ಮಹಾತ್ಮನ ಅಂಶಗಳನ್ನು ಪಡೆದುಕೊಳ್ಳುವುದು ಕಾದಂಬರಿಯ ಎದ್ದು ಕಾಣುವ ಅಂಶವಾಗಿದೆ. ಅವರ ಇತ್ತೀಚಿನ ಹೇಮರೆಡ್ಡಿ ಮಲ್ಲಮ್ಮನ ಕಥೆಯು ಕಾದಂಬರಿಯಲ್ಲಿ ಸಾಂಪ್ರದಾಯಿಕ ಹೇಮರೆಡ್ಡಿ ಮತ್ತು ಮಲ್ಲಮ್ಮನಿರದೆ ಆ ನಾಟಕದ ಪ್ರಸ್ತಾಪದೊಂದಿಗೆ ಜೀವನ ನಾಟಕದ ಅಂಕಗಳನ್ನು ಓದುಗರ ಮುಂದೆ ತರುತ್ತಾರೆ.

ಹಸಿವನ್ನು ಮೆಟ್ಟಿ ನಿಂತು, ನಾಡು ಸುತ್ತಿ, ವಿವಿಧ ಅನುಭವಗಳನ್ನು ಅರಗಿಸಿಕೊಂಡು ಲೇಕಹಿನ್ಯನ್ನು ಸದಾ ಹರಿತ ಖಡ್ಗವಾಗಿಸಿಕೊಂಡ ಕುಂವೀ ತಮ್ಮ ಅಪಾರ ಸಾಹಿತ್ಯ ಸಾಧನೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಹುಮಾನ ಪುರಸ್ಕಾರಗಳನ್ನು ಪಡೆದಿದ್ದಾರೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ