ಡಾ ಎಸ್. ಆರ. ಗುಂಜಾಳ

ತನ್ನ ಜ್ಞಾನಕ್ರಿಯೆಗೆ ಕಾಣದ ಮಾರ್ಗದಿಂದ ಹಾವೇರಿಗೆ ಹಾರಿದರು. ಟಿಕೆಟ್ ರಹಿತ ರೈಲು ಪ್ರಯಾಣದ ನಂತರ ಅತ್ತಿತ್ತ ಅಲೆದು, ಹಸಿವು ನೀರಡಿಕೆಯಿಂದ ಬಳಲಿದ್ದ ಜೀವಕ್ಕೆ ನಿದ್ರೆ ಆವರಿಸಿದ್ದೇ ತಿಳಿಯದಾಗಿತ್ತು. ಮರುದಿನ ಎಚ್ಚರಾಗಿ ನೋಡಿದರೆ ಅದೊಂದು ಸ್ಮಶಾನವಾಗಿತ್ತು. ಹಾವೇರಿಯ ಬೋರ್ಡಿಂಗ್ ಅವಕಾಶ, ಆದರೆ, ಅಲ್ಲಿ ಕಾಯಕ ಎನ್ನುವದನ್ನರಿತು ಕೊಳ್ಳುವುದೂ ಶಿಕ್ಷಣ ಜೊತೆಗೇ ಶುರುವಾಯಿತು. ನಂತರ ಮಠಗಳ ಆಶ್ರಯ, ಆಧ್ಯಾತ್ಮಿಕದ ಅರಿವಿನ ಆಳ, ಆಚಾರ, ವಿಚಾರಗಳನ್ನು ಅರಿತುಕೊಂಡು ನಡೆಯುವ ಮಾರ್ಗವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಪ್ರಯತ್ನ ಮೂಕವೇದನೆಗಳಲ್ಲಿ ಮೀಯುತ್ತ ಸ್ನಾತಕ್ಕೋತ್ತರ ಪದವಿ ಪಡೆದು ಧಾರವಾಡದ ಆರ್. ಎಲ್. ಎಸ್ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ನಂತರ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಟ್ಯೂಟರಿ ಹುದ್ದೆಯನ್ನು ಅಲಂಕರಿಸಿದರು.
ಡಾ| ಎಸ್. ಆರ್. ಗುಂಜಾಳರು ಹೇಗೆ ಸ್ವಯಂ ಪ್ರತಿಭೆಯಿಂದ ನಿರಂತರ ಹೋರಾಟದ ಜೀವನ ನಡೆಸಿ ತಮ್ಮ ಬದುಕಿನುದ್ದಕ್ಕೂ ನಂಬಿಕೊಂಡು ನಡೆದ ಜೀವನ ಮೌಲ್ಯಗಳನ್ನು ಮುಗ್ಗುಲಿಗಿಟ್ಟುಕೊಂಡು ಗಟ್ಟಿಯಾಗಿ ಹಿಡಿದು ಸಾಗಿದ ಜೀವನ ರೋಮಾಂಅನ ಮತ್ತು ಮೌಲಿಕವಾದದ್ದು. ಮುಂದೆ ಇವರು ದೆಹಲಿಯ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪಗ್ರಂಥಪಾಲಕರಾಗಿ ಪ್ರಾರಂಭವಾದ ಯಾತ್ರೆ ಗ್ರಂಥಗಳ ರಚನೆಗೂ ಮುಂದಾದರು. ಸತತವಾಗಿ ತಮ್ಮನ್ನು ಪರಿಶ್ರಮಕ್ಕೊಳಪಡಿಸಿಕೊಂಡಿದ್ದರ ಪರಿಣಾಮದಿಂದ ಅಥವ ಅಪಾರ ಜ್ಞಾನ ಸಂಪಾದಿಸಿದ್ದರಿಂದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸಿದರು.

ಬಸವಣ್ಣನವರ್ನ್ನೊಳಗೊಂಡು ಹಲವು ಮಹಾನ್ ವ್ಯಕ್ತಿಗಳ ಪರಿಚಯವನ್ನು ಕನ್ನಡಿಗರಿಗೆ ಪರಿಚಯಿಸಿದರು. ಇದು ಇಂಗ್ಲೀಷ್ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದ ವಾಗಿರುವುದು ವಿಶೇಷ. ಶರಣರ ವಚನಗಳನ್ನು ಅಭ್ಯಸಿಸಿ, ಆಳಕ್ಕಿಳಿದು, ಅವುಗಳ ಕುರಿತು ಹಲಬಗೆಯ ಕೃತಿಗಳನ್ನು ರಚಿಸಿದರು. ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ವಿವಿಧ ಜ್ಞಾನಗಳನ್ನು ಸಂಪಾದಿಸಬಲ್ಲ, ವಿಷಯಗಳನ್ನು ಅರಿಯಲು ಅನುಕೂಲವಾಗುವಂಥ ಸುಮಾರು ೧೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಬಗೆಯ ಗ್ರಂಥಗಳನ್ನು ರಚಿಸಿದವರು ಇವರೊಬ್ಬರೇ ಇರಬಹುದು. ಅಮೇರಿಕ, ಕೆನಡಾ ದೇಶಗಳಿಗೆ ಭೇಟಿ ನೀಡಿ ಪಾಶ್ಚಾತ್ಯ ಮತ್ತು ಪೌರಾತ್ಯ ಗ್ರಂಥಾಲಯಗಳ ತೌಲನಿಕ ಅಧ್ಯಯನ ಮಾಡಿ ಆ ವ್ಯವಸ್ಥೆಯನ್ನು ನಮ್ಮಲ್ಲೂ ತರುವ ಪ್ರಯತ್ನ ಮಾಡಿದರು. ಡಾ ಶ್ರೀ ಶೈಲ ಪಾಟಿಲ ಎನ್ನುವವರು Life and Works of Dr. S. R. Gunjal- A study ಎಂಬ ವಿಷಯ್ ಕುರಿತು ಪಿ.ಎಚ್.ಡಿ ಮಾಡಿದ್ದಾರೆ. ಒಬ್ಬ ಗ್ರಂಥಾಲಯ ವಿಜ್ಞಾನಿಯನ್ನು ಕುರಿತಾಗಿ ಪಿ.ಎಚ್.ಡಿ ಯಾಗಿದ್ದೂ ಇದೇ ಮೊದಲಿನದಾಗಿರಬಹುದು.
ಇವರನ್ನು ಕುರಿತು ಪಾಟೀಲ ಪುಟ್ಟಪ್ಪನವರು ‘ಇವರಿಗೆ ನೀವು ಎಷ್ಟೇ ಕೆಲಸ ಕೊಡಿ, ಕೆಲಸ ಸೋಲುತ್ತಿದೆಯೇ ವಿನಃ ಅವರೆಂದೂ ಸೋಲುವುದಿಲ್ಲ ಅವರೆಂದೂ ದಣಿಯುವುದಿಲ್ಲ”ಎಂದು ಹೇಳಿದ್ದಾರೆ. ಹೆಜ್ಜೆ ಹೆಜ್ಜೆಗೂ ಶರಣರ ನುಡಿ ಪಾಲಿಸುವದರೊಂದಿಗೆ ವಚನಗಳ ಕುರಿತು ಮತ್ತು ಶರಣರ ಕುರಿತು ಹಲವು ಮುಖದಿಂದ ಅಭ್ಯಸಿಸಿ, ಸಂಶೋಧನೆ ಮಾಡಿ, ಹೊಸ ಆಯಾಮ ನೀಡಿದ್ದು ಶ್ಲಾಘನೀಯ. ಕನ್ನಡ ಸಾಹಿತ್ಯದಲ್ಲೇ ಪ್ರಥಮ ಹಾಗು ಅಪರೂಪದ ಗ್ರಂಥ, ಬಸವಣ್ಣನವರ ವಚನ ಪದಪ್ರಯೋಗ ಎಂಬ ಬೃಹತ್ತಾಕಾರದ ಗ್ರಂಥ ಹೊರಬರಲು ಇವರ ಸತತ ೧೨ ವರ್ಷಗಳ ಪರಿಶ್ರಮದ ಫಲವೇ ಕಾರಣ. ಇದಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ದೇವರಾಜ ಬಹದ್ದೂರ ಪ್ರಶಸ್ತಿಗಳು ಬಂದಿವೆ.

ಸದಾ ನಯ-ವಿನಯದ ನಡೆ, ನುಡಿ. ಎಂದೂ ಎತ್ತರದ ಧ್ವನಿಯಲ್ಲಿ ಮಾತಾಡಿದವರಲ್ಲ. ಸದಾ ಓದು ಬರಹದಲ್ಲಿ ತಲ್ಲೀನ. ತುಂಬಿದ ಕೊಡದಂಥ ವ್ಯಕ್ತಿತ್ವ ಅವರದು. ಇವರು ಕೈಗೊಂಡ ಕಾರ್ಯ, ರಚಿಸಿದ ಗ್ರಂಥ, ವ್ಯಕ್ತಿತ್ವವನ್ನು ಗುರುತಿಸಿ ಹಲವಾರು ಪ್ರಮುಖ ಪ್ರಶಸ್ತಿಗಳು ಬಂದಿವೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ