ಡಾ| ಗಿರಡ್ಡಿ ಗೋವಿಂದರಾಜ

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಖ್ಯಾತ ವಿಮರ್ಶಕರಾಗಿ, ಕಥೆಗಾರಗಾಗಿ, ಜನಪ್ರಿಯರಾದ ಡಾ| ಗಿರಡ್ಡಿ ಗೋವಿಂದರಾಜರು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಸಾಧನೆ ಮಾಡುತ್ತಿದ್ದಾರೆ. ಕನ್ನಡ ನವ್ಯ ವಿಮರ್ಶೆಗೆ ಭದ್ರವಾದ ನೆಲೆ ಒದಗಿಸಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ೧೯೩೯ರಲ್ಲಿ ಇವರ ಜನನವಾಯಿತು. ನರೇಗಲ್ಲ, ರೋಣಗಳಲ್ಲಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಮುಗಿಸಿ, ಧಾರವಾಡದ ಕರ್ನಾಟಕ ಕಾಲೇಜು ಸೇರಿದ್ದು ಇವರ ಜೀವನದ ಮಹತ್ವದ ಮೈಲಿಗಲ್ಲು. ಧಾರವಾಡದ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣದಿಂದ ಪ್ರಭಾವಿತರಾದ ಗಿರಡ್ಡಿರವರು ಅಲ್ಲಿದ್ದ ಪ್ರಮುಖ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಬಿ.ಎ, ಎಂ.ಎ ಪದವಿ ಪಡೆದು, ಹನುಮನಮಟ್ಟಿಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿ, ಮತ್ತೆ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾದರು. ಇವರು ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ ಮೂವರು ಸೇರಿ ಸಂಕ್ರಮಣ ಪತ್ರಿಕೆ ಆರಂಭಿಸಿದ್ದು ಸಂಕ್ರಮಣದಲ್ಲಿ ಗಿರಡ್ಡಿಯವರು ವಿಮರ್ಶಾ ಲೇಖನ ಪ್ರಕಟಿಸಿದ್ದು, ಪತ್ರಿಕೆಯ ಉತ್ಕರ್ಷಕ್ಕೆ ದುಡಿದದ್ದು ಈಗ ಇತಿಹಾಸ.
ಇವರು ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲೀಷ್ ವಿಭಾಗದಲ್ಲಿ ೧೪ ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಣಾನ ಅಧ್ಯಯನವನ್ನು ಒಂದು ವರ್ಷ ಪೂರೈಸಿದರು. ಅವರು ಭಾಷಾವಿಜ್ಞಾನದಲ್ಲಿ ಮಹಾಪ್ರಬಂಧ ರೈಸಿ ಪಿ.ಎಚ್.ಡಿ. ಪದವಿ ಪಡೆದರು.
ವೃತ್ತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದರೂ ಡಾ| ಗಿರಡ್ಡಿ ಗೋವಿಂದರಾಜರ ಪ್ರಧಾನ ಆಸಕ್ತಿ ಕನ್ನಡ ಸಾಹಿತ್ಯದಲ್ಲಿ. ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯದ ಅಭಿರುಚಿ, ಆಸ್ಥೆ ಹೊಂದಿದ ಗಿರಡ್ಡಿಯವರು ಶಾರದಾ ಲಹರಿ ಕವಿತಾ ಸಂಕಲನ ಹೊರತಂದರು. ಅವರ ಕವನಗಳಲ್ಲಿ ಸಹಜ ಲಲಿತವಾದ ಓಟವಿದೆ, ಛಂದೋಗತಿಗೆ ಕುಂದಿಲ್ಲ, ಅವರ ಬರವಣಿಗೆಯಲ್ಲಿ ಒಂದು ನಿರರ್ಗಳತೆಯಿದೆ ಎಂದು ಗೋಕಾಕರು ಅಭಿಪ್ರಾಯಪಟ್ಟಿದ್ದರು.
ಗಿರಡ್ಡಿ ಗೋವಿಂದರಾಜರಿಗೆ ಕನ್ನಡ ಸಣ್ಣಕಥೆಯ ಬೆಳವಣಿಗೆಯಲ್ಲಿ ಅಪಾರವಾದ ಆಸ್ಥೆ. ತಮ್ಮ ಸೃಜನಶೀಲತೆಯನ್ನು ಸಣ್ಣಕಥೆಯ ವ್ಯ್ವಸಾಯದಲ್ಲಿ ಪ್ರಕಟಿಸಿದ ಗಿರಡ್ಡಿಯವರು ಮಹತ್ವದ ಕಥೆಯ್ಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಆ ಮುಖಾ ಈ ಮುಖಾ,ಹಂಗು ಮತ್ತು ಇತರ ಕಥೆಯ್ಗಳು, ಬಂದು ಬೇವಿನ ಮರದ ಕಥೆಯ ಮೊದಲಾದ ಸತ್ವಯುತವಾದ ಕಥೆಯ್ಗಳನ್ನು ರಚಿಸಿದ್ದಾರೆ. ಅವರ ಮರೆಯಲಾರದ ಹಳೆಯ ಕಥೆಗಳು, ಮರೆಯಲಾರದ ಕಥೆಗಾರರ ಕಥೆಗಳ ಸಂಪುಟವನ್ನು ಗಿರಡ್ಡಿಯವರು ಸಿದ್ಧಪಡಿಸಿ ಅವರ ಕಥೆಗಳ ಕುರಿತಾದ ವಿಮರ್ಶೆಯನ್ನೂ ಮೊದಲ ಬಾರಿಗೆ ನೀಡಿದಾರೆ.
ಗಿರಡ್ಡಿಯವರು ವಿಮರ್ಶೆಗೆ ನೀಡಿರುವ ಕೊಡುಗೆ ಅಮೂಲ್ಯವಾದುದು. ಅವರು ನವ್ಯ ವಿಮರ್ಶೆ ಯ ಸ್ವರೂಪವನ್ನು ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ. ಜಾನಪದ ಕಾವ್ಯದ ವಿಮರ್ಶೆಯನ್ನು ಹೊಸ ಆಯಾಮಕ್ಕೆ ಗಿರಡಿಯವರ ಜನಪದ ಕಾವ್ಯದಲ್ಲಿ ಮೌಲ್ಯಪ್ರಜ್ಞೆ ಮಹತ್ವದ ಆಶಯವನ್ನು ಪ್ರಕಟಿಸುತ್ತದೆ. ಇವರ ಸಾತತ್ಯ ಮಹತ್ವದ ಆಶಯದ ೧೪ ವಿಮರ್ಶಾ ಲೇಖನಗಳ ಸಂಪುತಾವಾಗಿದೆ. ಇವರ ಕನ್ನಡ ಡೈಗ್ಲಾಸಿಯಾ ಗಮನಾರ್ಹವಾದ ಪುಸ್ತಕವಾಗಿದೆ. ಗಿರಡ್ಡಿಯವರು ಸಂಪಾದಿಸಿದ ಸಣ್ಣಕಥೆ, ಕನ್ನಡ ಕಥಾ ಸಂಕಲನ, ಸಂಕ್ರಮಣ, ಕಾವ್ಯ, ಹವ್ಯಾಸಿ ರಂಗಭೂಮಿಯ ಸಮಸೆಯ್ಗಳು ಹೀಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ.
ಇವರ ನವ್ಯವಿಮರ್ಶೆ ಗ್ರಂಥಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಸಾತತ್ಯ ಕೃತಿಗೆ ಸ ಸ ಮಾಳವಾಡ ಪ್ರಶಸ್ತಿ ಸಂದಿವೆ. ಇವರು ಕನ್ನಡದ ಹೊಸ ಸಂವೇದನೆಯ ನಾಟಕಗಳು ರಂಗಭೂಮಿಯಲ್ಲಿ ಪ್ರಯೋಗವಾಗುವಂತೆ ಶ್ರಮಿಸಿದ್ದಾರೆ.
ಇವರ ಲಲಿತ ಪ್ರಬಂಧಗಳ ಸಂಕಲನ ಹಿಡಿಯದ ಹಾದಿ ಅವರ ಪ್ರಬುದ್ಧವಾದ ಚಿಂತನಶೀಲತೆ, ರಸಿಕತೆಯ ಪ್ರತೀಕವಾಗಿದೆ. ಹೊರನೋಟದಲಿ ಗಂಭೀರವಾಗಿ ಕಾಣುವ ಗಿರಡ್ಡಿಯವರಲ್ಲಿ ಹಾಸ್ಯ ಹಾಸು ಹೊಕ್ಕಾಗಿದೆ. ಇವರು ಸಾಹಿತ್ಯ ಸಂಪಾದನೆಯಲ್ಲಿ ಶ್ರಮಿಸಿದವರು. ಸಾಹಿತ್ಯ ಅಕಾಡೆಮಿಯ ಪಾರಿಭಾಷಿಕ ಮಾಲೆಯ ಸಂಪಾದಕರಾಗಿ ೨೪ ಕೃತಿಗಳನ್ನೂ ಶತಮಾನದ ಸಾಹಿತ್ಯದ ಆರು ಸಂಪುಟಗಳನ್ನು ಸಂಪಾದಿಸಿದ್ದಾರೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ