ಡಾ| ಸ.ಜ. ನಾಗಲೋತಿಮಠ

ಡಾ| ಸ.ಜ. ನಾಗಲೋತಿಮಠ ಸಜ್ಜನ, ನಿರಾಡಂಬರದ ವ್ಯಕ್ತಿತ್ವವುಳ್ಳ ಶ್ರೇಷ್ಠ ವೈದ್ಯರಾಗಿದ್ದರು. ಹಣದ ಆಮಿಷಕ್ಕೆ ಒಳಗಾಗದೇ ತಮ್ಮ ವೃತ್ತಿಗೆ ಘನತೆ ತಂದುಕೊಟ್ಟ ವಿರಳರಲ್ಲಿ ವಿರಳರು. ಸರಸ್ರಾರು ವೈದ್ಯರನ್ನು ನಿರ್ಮಿಸಿದ ಖ್ಯಾತಿ ಈ ಹಿರಿಯ ಚೇತನಕ್ಕೆ ಸಲ್ಲುತ್ತದೆ.

ಡಾ| ಸದಾಶಿವಯ್ಯ ಜಂಬಯ್ಯ ನಾಗಲೋತಿಮಠ ನಡೆದು ಬಂದ ದಾರಿ ಹೂವಿನ ಹಾದಿಯಾಗಿರಲಿಲ್ಲ. ಅವರು ತಮ್ಮ ಸ್ತತ ಪರಿಶ್ರಮದಿಂದ ವೈದ್ಯಕೀಯ ಅಭ್ಯಾಸ ಮಾಡಿ ನಿಷ್ಠಾವಂತ ವೈದ್ಯರಾದರು. ಸಾಧನೆಯ ಹಿಂದಿರುವ ಪರಿಶ್ರಮ ಏಕೋಭಾವದಿಂದ ಸಾಧಿಸಬೇಕೆಂಬ ಛಲವಿದ್ದವರಿಗೆ ಮಾತ್ರ ಇದು ಸಾಧ್ಯವಾಗುತ್ತದೆ. ಜುಲೈ ೩೦,, ೧೯೪೦ರಲ್ಲಿ ಗದುಗಿನಲ್ಲಿ ನಾಗಲೋತಿಮಠ ಜನಿಸಿದರು. ಕಿತ್ತು ತಿನ್ನುವ ಬಡತನದಲ್ಲಿ ಇವರ ತಾಯಿ ಹಂಪವ್ವ ಮಗನನ್ನು ಸಾಕಿ ಬೆಳಸಿದರು. ನಂತರ ೧೯೬೫ರಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಸುವರ್ಣ ಪದಕದೊಂದಿಗೆ ಪಡೆದುಕೊಂಡರು. ೧೯೭೦ರಲ್ಲಿ ಪೆಥಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಳಗಾವಿ ಜೆ.ಎನ್.ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಪೆಥೋಲಾಜಿ ವಿಭಾಗಗಳ ಮುಖ್ಯಸ್ಥರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವದರ ಜೊತೆಗೆ ಪೆಥೋಲಾಜಿ ಮ್ಯೂಜಿಯಂ ಸ್ಥಾಪಿಸಿದರು. ಇದರ ಪ್ರಭಾವ ಅವರಿವೆ ಡಾ ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.
ಇವರು ೧೯೮೦ರಲ್ಲಿ ಪೆಥೋಲಜಿ ಸಮ್ಮೇಳನವನ್ನು ನಭೂತೋ ನಭವಿಷ್ಯತಿ ಎಂಬಂತೆ ಏರ್ಪಡಿಸಿ ತಮ್ಮ ಕಾರ್ಯ ಸಾಮರ್ಥ್ಯವನ್ನು ತೋರ್ಪಡಿಸಿದರು. ಇಂಡಿಯನ್ ಜರ್ನಲ್ ಒಫ್ ಪೆಥೋಲಾಜಿ ಅಂಡ್ ಮೈಕ್ರೋಲಜಿ ಎಂಬ ಪತ್ರಿಕೆಯ ಸಂಪಾದಕರಾಗಿ ಉತ್ತಮವಾಗಿ ಕಾರ್ತ್ಯನಿರ್ವಹಿಸಿದರು. ಇವರ ಪರಿಣಿತಿ ಗಮನಿಸಿ ಇವರಿಗೆ ಮೆಡಿಕಲ್ ಕೌನ್ಸಿಲ್ಗೆ ಸದಸ್ಯರಾಗಲು ಅನುಮತಿ ದೊರೆಯಿತು.
ಅನ್ನ ಮಾರ್ಗದಲ್ಲಿ ಅಪಘಾತಗಳು ಎಂಬ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯಕ ಅಕಾಡೆಮಿ ಪ್ರಶಸ್ತಿ ಬಂದಿತು. ಬೆಳಗಾವಿಯಲ್ಲಿ ವಿಜ್ಞಾನ ಕೇಂದ್ರ ಆರಂಭಿಸಿದ ವರ್ಷವೇ ಹರಿ ಓಂ ಆಶ್ರಮ ರಿಸರ್ಚ ರಾಷ್ಟ್ರೀಯ ಪ್ರಶಸ್ತಿ ದೊರೆಯಿತು. ೧೯೯೧ರಲ್ಲಿ ಬಿಜಾಪುರ ಕಾಲೇಜಿಗೆ ಪ್ರಿನ್ಸಿಪಾಲರಾಗಿ ನೇಮಕಗೊಂಡು ಅಲ್ಲಿ ಹೊಸತನ ತರುವಲ್ಲಿ ಯಶಸ್ವಿಯಾದರು. ಅಲ್ಲಿ ಅವರು ಸ್ಥಾಪಿಸಿದ ದೇಹದ ಹರಳು ಮ್ಯೂಸಿಯಂ ಈಗಳು ಜನರನ್ನು ಆಕರ್ಷಿಸುತ್ತದೆ. ೯೩-೯೮ರವರೆಗೆ ಕರ್ನಾಟಕ ವಿಜ್ಞಾನ ಪರಿಷತ್ನ ಅಧ್ಯಕ್ಷರಾಗಿ ಮಾದಿದ ಕಾರ್ಯ ನಿಜಕ್ಕೂ ಶ್ಲಾಘನೀಯವಗಿದೆ. ೧೯೯೪ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು. ೯೬ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಸಂಸ್ಥೆಯ ಮೊದಲ ಡೈರಕ್ಟರ್ ಆಗಿ ಕಾರ್ಯನಿರ್ವಹಿಸಿ ಹೆಸರು ಗಳಿಸಿದರು. ಜೀವನಾಡಿ ಎಂಬ ಆರೋಗ್ಯ ಮಾಸಿಕವನ್ನು ಪ್ರಾರಂಭಿಸಿ ಜನಸಾಮಾನ್ಯರಿಗೆ ಆರೋಗ್ಯಯುತ ಜೀವನ ಸಾಗಿಸಲು ತಿಳುವಳಿಕೆ ನೀಡತೊಡಗಿದರು.
ತಮ್ಮ ಜ್ಞಾನಧಾರೆಯನ್ನು ೧೪ ಆಂಗ್ಲ ಪುಸ್ತಕಗಳು, ೫೦ ಕನ್ನಡ ಪುಸ್ತಕಗಳು ಹಾಗೂ ೧೩೫ ಪ್ರಬಂಧಗಳನ್ನು ಬರೆಯುವ ಮೂಲಕ ನಾಡಿನ ಮನೆಮಾತಾದರು. ಕುವೆಂಪು ವೈದ್ಯ ವಿಜ್ಞಾನ ಪ್ರಶಸ್ತಿ ಪಡೆದರು. ಇವರಿಗೆ ಸಂದ ಕೀರ್ತಿಯಿಂದ ಇವರು ಹಿಗ್ಗದೆ, ಅದಕ್ಕೆ ಪ್ರತಿಯಾಗಿ ಸಮಾಜಕ್ಕೆ ಇನ್ನಷ್ಟೂ ತಮ್ಮ ಸೇವೆ ಸಲ್ಲಿಸಬೇಕೆಂಬ ತವಕ ಇವರದಾಗಿತ್ತು.
ಇವರು ೨೦೦೬ರಲ್ಲಿ ಇಹಲೋಕದ ಪ್ರಯಾಣ ಮುಗಿಸಿದರು. ಇವರ ಬಿಚ್ಚಿದ ಜೋಳಿಗೆ ಅತ್ಯಂತ ಮೌಲಿಕ ಆತ್ಮಚರಿತ್ರೆಯಾಗಿದೆ. ಅವರಿಗೆ ನೊಸಲಿನ ವಿಭೂತಿ ಶರಣ ಜೀವನದ ಸಂಕೇತವಿತ್ತು. ಶರಣರ ಜೀವನವನ್ನು ನಿಜ ಅರ್ಥದಲ್ಲಿ ಬದುಕಿದ ನಾಗಲೋತಿಮಠ ಇಂದು ಕಳೆದು ಹೋಗುತ್ತಿರುವ ಮೌಲ್ಯಗಳನ್ನು ಮತ್ತೆ ಮರುಪ್ರತಿಷ್ಠಾಪಿಸಬೇಕೆಂಬ ಸಂದೇಶ ನೀಡುವ ಚೇತನವಾಗಿದ್ದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ