ತ್ರಿವೇಣಿ

ಮಹಿಳಾ ಅಭಿವ್ಯಕ್ತಿಯ ಪರಂಪರೆಯಲ್ಲಿ ಎರಡನೆಯ ತಲ್ಮಾರಿಗೆ ಸೇರಿದ ಮುಖ್ಯ ಲೇಖಕಿ ತ್ರಿವೇಣಿ. ಸಣ್ಣಕಥೆ ಮತ್ತು ಕಾದಂಬರಿ ಪ್ರಕಾರಗಳನ್ನು ಪ್ರಮುಖವಾಗಿ ಆಯ್ದುಕೊಂಡ ತ್ರಿವೇಣಿ ತಮಗೆ ಲಭಿಸಿದ ನಿರ್ದಿಷ್ಟ ಜೀವನಾನುಭವ ಮತ್ತು ಮನಃಶಾಸ್ತ್ರದ ಓದಿನ ಜ್ಞಾನದೊಂದಿಗೆ ಕೆಲವು ಮಹತ್ವದ ಕೃತಿಗಳನ್ನು ನೀಡಿದ್ದಾರೆ.

ಕನ್ನಡದ ಕಣ್ವ ಬಿ.ಎಂ.ಶ್ರೀ ರವರ ತಮ್ಮ ಬಿ.ಎಂ. ಕೃಷ್ಣಸ್ವಾಮಿಯವರ ಎರಡನೆಯ ಮಗಳು ತ್ರಿವೇಣಿ. ಹುಟ್ಟಿದ್ದು ಮೈಸೂರಿನಲ್ಲಿ, ಹುಟ್ಟಿದಾಗ ಇವರ ಹೆಸರು ಭಾರೀರಥಿ, ಶಾಲೆಗೆ ಸೇರುವಾಗ ಅನುಸೂಯ ಎಂದು ದಾಖಲಿಸಲಾಯಿತು, ವಿದ್ಯಾಭ್ಯಾಸ ಮಂಡ್ಯ ಮತ್ತು ಮೈಸೂರಿನಲ್ಲಿ ನಡೆಯಿತು ೧೯೪೭ರಲ್ಲಿ ಬಂಗಾರದ ಪದಕದೊಂದಿಗೆ ಬಿ.ಎ. ಪದವಿಯನ್ನು ಮನಃಶಾಸ್ತ್ರದ ವಿಷಯದಲ್ಲಿ ಪಡೆದರು. ೧೯೫೧ರಲ್ಲಿ ವಿವಾಹವಾಗಿ ಅನುಸೂಯ ಶಂಕರ್ ಆದರು. ಇವರ ಸಮಕಾಲಿನವರಾದ ಎಂ.ಕೆ. ಇಂದಿರಾ ಇವರ ಉದ್ದ ಕೇಶರಾಶಿಯನ್ನು ಕಂಡು ಬೆರಗಾಗಿ ‘ಅನುಸೂಯಾ ನೀವು ತ್ರಿವೇಣಿಯಾಗಬಹುದು’ಎಂದು ಚೇಷ್ಟೆ ಮಾಡಿದ್ದರಂತೆ, ಆ ಹೆಸರು ತುಂಬಾ ಇಷ್ಟವಾಇದ್ದರಿಂದ ತ್ರಿವೇಣಿ ಎಂದೇ ತಮ್ಮ ಕಾವ್ಯನಾಮವನ್ನು ಇಟ್ಟುಕೊಂಡರು.

ಇವರ ಒಟ್ಟು ಬರವಣಿಗೆಯ ಅವಧಿಯೇ ೧೯೫೩ ರಿಂದ ೧೯೬೩. ಸುಮಾರು ಒಂದು ದಶಕ ಮಾತ್ರ. ಈ ಅವಧಿಯಲ್ಲಿ ೩ ಕಥಾಸಂಕಲನ್, ೨೦ ಕಾದಂಬರಿ ಮತ್ತು ಒಂದು ಅಪೂರ್ವ ಕಾದಂಬರಿಯನ್ನು ರಚಿಸಿದ್ದಾರೆ.

ಹೆಂಡತಿಯ ಹೆಸರು, ಎರಡು ಮನಸ್ಸು, ಸಮಸ್ಯೆಯ ಮಗು – ಇವು ತ್ರಿವೇಣಿಯವರ ಕಥಾಸಂಕಲನಗಳಾದರೆ, ಹೂವು ಹಣ್ಣು, ಅಪಸ್ವರ-ಅಪಜಯ, ಸೋತು ಗೆದ್ದವಳು, ಕೀಲುಗೊಂಬೆ, ಮೊದಲ ಹೆಜ್ಜೆ, ಹೃದಯಗೀತೆ ಮುಂತಾದವು ಇವರ ಕಾದಂಬರಿಗಳು. ಸಣ್ಣಕಥೆಯ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದರಾದರೂ ಕಾದಂಬರಿ ಪ್ರಕಾರವೇ ಅವರ ಜಾಯಮಾನಕ್ಕೆ ಹೆಚ್ಚು ಒಗ್ಗಿಕೊಂಡಂತೆ ಕಾಣುತ್ತದೆ.

ಮೇಲ್ನೋಟಕ್ಕೆ ಜನಪ್ರಿಯ ಬರಹಗಳಂತೆ ತೋರುವ ಕಾದಂಬರಿಗಳು ತ್ರಿವೇಣಿಯವರ ಅಧ್ಯಯನದ ಫಲಿತಗಳಾಗಿದ್ದವು. ತ್ರಿವೇಣಿ ಮನಃಶಾಸ್ತ್ರದ ಪದವೀಧರರು. ಅಲ್ಲಿ ಗಳಿಸಿದ ಜ್ಞಾನವನ್ನು ಸಾಹಿತ್ಯ ಶೋಧನ್ಗೆ ಮಾಧ್ಯಮವಾಗಿಸಿಕೊಂಡರು. ಇವರ ಕಥನಗಳು ಅಪಾರ ಓದುಗ ವರ್ಗವನ್ನು ಪಡೆದು ಜನಪ್ರೀತಿ ಗಳಿಸಲು, ಸಿನಿಮಾಗಳಾಗಿ ಮನ್ನಣೆ ಗಳಿಸಲು ಅವರು ಅನುಸರಿಸಿದ ಮಧ್ಯಮ ಪಥವೇ ಕಾರಣವಾಗಿದೆ. ಇವರು ೧೯೬೩ರಲ್ಲಿ ಇಹಲೋಕವನ್ನು ತ್ಯಜಿಸಿದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ