ನಾ ಡಿಸೋಜ

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ೧೯೩೭ರಲ್ಲಿ ಜನಿಸಿರುವ ಡಿಸೋಜಾರವರ ಹೆಸರು ನಾಬರ್ಟ್. ಅವರ ತಂದೆ ಡಿಸೋಜ ಪ್ರಾಥಮಿಕ ಶಾಲಾ ಮುಖೋಪಾಧ್ಯಾಯರಾಗಿದ್ದರು. ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪದ್ಯಗಳನ್ನು ಕಲಿಯುವುದರ ಮೂಲಕ ಇಅರ ಸಾಹಿತ್ಯಾಸಕ್ತಿ ಮೊಳೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು ಕತೆಗಳು ಇವರ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿದವು.

ಮಾಸ್ತಿ, ಕುವೆಂಪು, ಗೋಕಾಕ್, ಕಾರಂತ, ಗೋರೂರರ ಪುಸ್ತಕಗಳ ಜೊತೆ, ಡಿಕನ್ಸ್, ಸಾಮರ್ ಸೆಟ್, ಪರ್ಲ್ ಬಕ್ ಮುಂತಾದವರ ಪುಸ್ತಕಗಳನ್ನು ಓದುತ್ತಿದ್ದರು. ಮೊದಲು ಪ್ರಪಂಚ ಪತ್ರಿಕೆಗೆ ಕತೆಗಳನ್ನು ಬರೆಯತೊಡಗಿದರು. ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವೀತೀಯ ದರ್ಜೆ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ನಂತರ ಬಡ್ತಿ ಹೊಂದಿ ಶರಾವತಿ ಯೋಜನೆ, ಕಾರ್ಗಲ್, ಮಾಸ್ತಿಕಟ್ಟೆ ಮುಂತಾದೆಡೆಗಳಲ್ಲಿ ೩೭ ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾದರು.

೧೯೬೪ರಲ್ಲಿ ಇವರ ಮೊದಲ ಕಾದಂಬರಿ ಬಂಜೆ ಬೆಂಕಿ ಪ್ರಕಟವಾಯಿತು. ನಂತರ ಮಂಜಿನ ಕಾನು, ಈ ನೆಲ ಈ ಜಲ, ಕೆಂಪು ತ್ರಿಕೋನ, ನೆಲೆ, ಮಾನವ, ಕಾಡಿನ ಬೆಂಕಿ, ಹೀಗೆ ಸುಮಾರು ೪೦ ಕಾದಂಬರಿಗಲನ್ನು ಬರೆದಿದ್ದಾರೆ. ಇದಲ್ಲದೆ ಸಣ್ಣ ಕತೆಗಳನ್ನು, ನಾಟಕಗಳನ್ನು ಮತ್ತು ಮಕ್ಕಳ ಸಾಹಿತ್ಯವನ್ನೂ ರಚಿಸಿದ್ದಾರೆ. ಅವರ ಪ್ರಕಟಿತ ಗ್ರಂಥಗಳ ಸಂಖ್ಯೆ ಸುಮಾರು ೯೪ನ್ನು ದಾಟುತ್ತದೆ. ಇವರ ಮುಳುಗಡೆಯ ಊರಿಗೆ ಬಂದವರು ಎಂಬ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದಾರೆ.

ಮೂರು ದಶಕಗಳಿಂದ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವ ಇವರ ಕಾದಂಬರಿಗಳಲ್ಲಿ ಪರಿಸರ ನಾಶ, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹಾಗೂ ಕ್ರೈಸ್ತ ಜನಾಂಗದ ಬದುಕಿನ ದಟ್ಟ ಅನುಭವಗಳು ಓದುಗರ ಮನಸೂರೆಗೊಂಡಿವೆ. ಸುರೇಶ ಹೆಬ್ಳೀಕರ ನಿರ್ದೇಶನದಲ್ಲಿ ಕಾಡಿನ ಬೆಂಕಿ ಎಂಬ ಕೃತಿ ಸಿನಿಮಾ ಆಗಿ ರಾಷ್ಟ್ರ ಪ್ರಶಸ್ತಿ ಪಡೆಯಿತು. ದ್ವೀಪ ಎಂಬ ಕೃತ್ ಕೂಡ ಸಿನಿಮಾ ಆಗಿ ರಾಷ್ಟ್ರ ಪ್ರಶಸ್ತಿ ಪಡೆದಿದೆ. ೧೯೯೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ. ೨೦೧೮ರಲ್ಲಿ ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ