ಪದ್ಯ ೩೬ ೩೭: ದುರ್ಯೋಧನನು ತನ್ನ ದುಃಖವನ್ನು ಹೇಗೆ ತೋಡಿಕೊಂಡನು?

ನೀನೊಳ್ಳೊಡುಂಟು ರಾಜ್ಯಂ
ನೀನುಳ್ಳೊಡೆ ಪಟ್ಟಮುಂಟು ಬೆಳ್ಗೊಡೆಯುಂಟುಯ್
ನೀನುಳ್ಳೊಡುಂಟು ಪೀಳಿಗೆ
ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತೀ (ದುರ್ಯೊಧನ ವಿಲಾಪಂ, ಪದ್ಯ ೩೬)

ಹರಿ ಬೇಡೆ ಕವಚಮಂ ನೀ
ನರಿದಿತ್ತಯ್ ಕೊಂತಿ ಬೇಡೇ ಬೆಗಡೆದೆ ಕೊಟ್ಟಯ್
ಪುರಿಗಣೆಯಂ ನಿನಗೆಣೆ ಕಸ
ವರಗಲಿ ಮೆಯ್ಗಲಿಯುಮಾವನಂಗಾಧಿಪತೀ (ದುರ್ಯೊಧನ ವಿಲಾಪಂ, ಪದ್ಯ ೩೭)

ತಾತ್ಪರ್ಯ:
ದುರ್ಯೋಧನನು ತನ್ನ ದುಃಖವನ್ನು ತೋಡಿಕೊಳ್ಳುತ್ತಾ, ಎಲೈ ಕರ್ಣ, ನೀನಿದ್ದರೆ ನನಗೂ ರಾಜ್ಯ, ಪದವಿ, ಪಟ್ಟ, ಶ್ವೇತಛತ್ರಿ, ಚಾಮರ, ಸಿಂಹಾಸನ ಎಲ್ಲವೂ ಇರುತ್ತದೆ. ನೀನೆ ಇಲ್ಲದ ಮೇಲೆ ಇವೆಲ್ಲವಿದ್ದರೂ ಯಾವ ಪ್ರಯೋಜನಕ್ಕಾಗಿ, ಈ ವೈಭವ ಸಂಪತ್ತುಗಳಿಂದ ನನಗಾವ ಸುಖವೂ ಸಿಗುವುದಿಲ್ಲ.

ಎಲೈ ಕರ್ಣ ನೀನೆಂತಹ ದಾನಶೂರ, ಇಂದ್ರನು ತನ್ನ ಮಗನ ಒಳಿತಿಗಾಗಿ ವಟುವೇಷದಲ್ಲಿ ಬಂದು
ನಿನ್ನ ಸಹಜವಾದ ಕವಚ ಕುಂಡಲವನ್ನು ಬೇಡಿದಾಗ, ನೀನು ಸ್ವಲ್ಪವೂ ಹಿಂಜರಿಯದೆ ಅವನ್ನು ನಿನ್ನ ಮೈಯಿಂದ ಕತ್ತರಿಸಿ ಕೊಟ್ಟೆಯೆಲ್ಲಾ, ಕುಂತಿಯು ತನ್ನ ಮಗನ ಒಳಿತಿಗಾಗಿ ನಿನ್ನ ಬಳಿ ದಿವ್ಯಾಸ್ತ್ರವಾದ ಪುರಗಣೆ (ಸುಡುವ ಬಾಣ)ಯನ್ನು ಪ್ರಯೋಗಿಸಬಾರದೆಂದು ಕೇಳಿದಾಗ ಅವಳಿಗೂ ನೀನು ಮಾತುಕೊಟ್ಟೆಯೆಲ್ಲಾ, ಚಿನ್ನವನ್ನು ಕೊಡುವುದರಲ್ಲಿ ದಾನ ಶೂರನಾಗಿ ಪರಾಕ್ರಮಿಯಾಗಿ ಮೆರೆದೆಯೆಲ್ಲಾ, ಇದರಲ್ಲಿ ನಿನಗೆ ಸರಿಸಮಾನನಾದವರು ಯಾರು ಕರ್ಣಾ! ಎಂದು ತನ್ನ ದುಃಖವನ್ನು ತೋಡಿಕೊಂಡನು.

ಅರ್ಥ:
ರಾಜ್ಯ: ರಾಷ್ಟ್ರ; ಪಟ್ಟ: ಪದವಿ; ಬೆಳ್ಗೊಡೆ: ಶ್ವೇತಚ್ಛತ್ರ; ಪೀಳಿಗೆ: ಸಿಂಹಾಸನ; ಅಧಿಪತಿ: ರಾಜ, ಒಡೆಯ

ಹರಿ: ಕೃಷ್ಣ, ಇಂದ್ರ; ಅರಿದು: ಕತ್ತರಿಸಿ; ಅರಿ: ತಿಳಿ; ಮೆಯ್ಗಲಿ- ಪರಾಕ್ರಮಿ; ಬೇಡು: ಕೇಳು; ಅರಿ: ಕತ್ತರಿಸು;ಇತ್ತೆ: ನೀಡಿದೆ; ಬೆಗಡೆ: ಬೆಚ್ಚದೆ; ಕೊಟ್ಟಯ್: ನೀಡಿದೆ; ಪುರಿಗಣೆ: ಸುಡುವ ಬಾಣ; ಕಸವರಗಲಿ: ಚಿನ್ನವನ್ನು ದಾನಮಾಡುವುದರಲಿ;

ಪದವಿಂಗಡಣೆ:
ನೀನೊಳ್ಳೊಡ್+ಉಂಟು +ರಾಜ್ಯಂ
ನೀನುಳ್ಳೊಡೆ+ ಪಟ್ಟಮ್+ಉಂಟು +ಬೆಳ್ಗೊಡೆಯ್+ಉಂಟುಯ್
ನೀನುಳ್ಳೊಡ್+ಉಂಟು +ಪೀಳಿಗೆ
ನೀನಿಲ್ಲದ್+ಇವೆಲ್ಲಮೊಳವೆ +ಅಂಗಾಧಿಪತೀ

ಹರಿ +ಬೇಡೆ +ಕವಚಮಂ +ನೀನ್
ಅರಿದಿತ್ತಯ್ +ಕೊಂತಿ +ಬೇಡೇ +ಬೆಗಡೆದೆ+ ಕೊಟ್ಟಯ್
ಪುರಿಗಣೆಯಂ +ನಿನಗೆಣೆ+ ಕಸ
ವರಗಲಿ+ ಮೆಯ್ಗಲಿಯುಮ್+ಆವನ್+ಅಂಗಾಧಿಪತೀ

ಅಚ್ಚರಿ:
(೧) ಕರ್ಣನು ತನ್ನ ಬಾಳಿಗೆ ಹೇಗೆ ಭಾಗಿಯಾಗಿದ್ದ ಎಂದು ಸೂಚಿಸುತ್ತ ಶೋಕಿಸುವ ಪದ್ಯ
(೨) ಕರ್ಣನ ಗುಣಗಾನ ಮಾಡಿ ತನ್ನ ಶೋಕವನ್ನು ವ್ಯಕ್ತಪಡಿಸುವ ಪದ್ಯ