ಪ್ರೊ. ಲಿಂಗದೇವರು ಹಳೆಮನೆ

ಪ್ರೊ. ಲಿಂಗದೇವರು ಹಳೆಮನೆಯವರದು ಬಹುಮುಖ ವ್ಯಕ್ತಿತ್ವ. ಮೈಸೂರಿನ ರಂಗಾಯಣದ ನಿರ್ದೇಶಕರಾಗಿದ್ದ ಇವರು ಭಾಷಾಶಾಸ್ತ್ರಜ್ಞರು, ವಿಮರ್ಶಕರು, ಸಂಶೋಧಕರು, ಸಾಹಿತ್ಯ ಚಿಂತಕರು, ನಾಟಕಕಾರರಾಗಿದ್ದರು. ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಮೂರು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬಹಳ ಸರಳ ಸ್ವಭಾವದ ಸಜ್ಜನಿಕೆಯ ಗುಣ ಸಂಪನ್ನರು. ಹಿರಿದಪ್ಪ ರಾಜ್ಯವನಿತ್ತಡೊಲ್ಲೆ ಎನ್ನುವ ನಿಷ್ಠುರ ಜಂಗಮರಾಗಿದ್ದರು. ಸಿಟ್ಟಿದ್ದಲ್ಲಿ ರೊಟ್ಟಿ ಇರುವುದು ಎನ್ನುವ ಹಾಗೆ ನಯದೊಂದಿಗೆ ನಿಷ್ಠುರತೆಯು ಹಳೆಮನೆಯವರಲ್ಲಿತ್ತು. ವಿದ್ಯಾರ್ಥಿಗಳಿಗೆ ಒಂದು ತಾಸು ಪಾಠ ಮಾಡಬೇಕಾದರೆ ಅದರ ಹಿಂದೆ ಸತತ ಅಧ್ಯಯನ, ಕಠಿಣ ಪರಿಶ್ರಮ ಬೇಕು ಎನ್ನುತ್ತಿದ್ದರು. ಬದುಕನ್ನು ಜೀವನದಲ್ಲಿ ಕಾಣಬೇಕೆಂಬ ತವಕವಿದ್ದ ಸೃಜನಶೀಲ ವ್ಯಕ್ತಿಯಾಗಿದ್ದರು. ಆದ್ದರಿಂದ ಸಾಹಿತ್ಯೇತರ ಕ್ಷೇತ್ರ ಸಾಫ್ಟವೇರ್ ಡಿಸೈನ್ನಲ್ಲೂ ಸಾಧನೆ ಮಾಡಿದ್ದರು.

ಇವರು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ಹಾಲುಗೋಣ ಎಂಬ ಪುಟ್ಟ ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ೧೯೪೯ರಲ್ಲಿ ಜನಿಸಿದರು. ತಿಪಟೂರಿನಲ್ಲಿ ಬಿ.ಎ. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಣಾನ ಮತ್ತು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೋಧನಾ ಸಾಮಗ್ರಿಗಳ ತಯಾರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಭಾಷಾ ಮಂದಾಕಿನಿ ಯೋಜನೆಗಳ ಮುಖ್ಯಸ್ಥರಾಗಿ ಯಶಸ್ವಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರು. ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ಸೆಂಟರ್ ಎನ್ನುವ ತಾಣವೊಂದನ್ನು ಪ್ರಾರಂಭಿಸಿದರು. ಭಾರತ ಸಾಕ್ಷರತಾ ಮಿಷನ್ನಿನ ನಿರ್ದೇಶಕರೂ ಕೂಡ ಆಗಿದ್ದರು.

ಇವರು ವಿಶೇಷವಾಗಿ ರಂಗಭೂಮಿಗೆ ಹೆಚ್ಚಿನ ಒಲವನ್ನು ತೋರಿದಂತೆ ಕಾಣುವುದು. ಅವರು ಚಿಕ್ಕದೇವರ ಭೂಪ, ತಸ್ಕರ, ಹೈದರ್ ಹೀಗೆ ೭ ನಾಟಕಗಳನ್ನು ರಚಿಸಿದ್ದಾರೆ, ಬ್ರೇಕ್ಟ್ ನ ಹಲವಾರು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರೆ. ಭಾಷೆ ಎನ್ನುವ ಕೃತಿಯನ್ನು ನವಸಾಕ್ಷರರಿಗಾಗಿ ಹೊರ ತಂದಿದ್ದಾರೆ. ಈ ಕೃತಿಯು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿವಿಧ ಭಾಷೆಗಳ ಮೂಲಕ ಕನ್ನಡ ಕಲಿಯಲು ಮೂಲ ಪಠ್ಯವನ್ನು ರಚಿಸಿದ್ದಾರೆ. ಇವರು ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕಾಗಿ ನೀಡಿದ ವರದಿ ಮೌಲ್ಯಯುತವಾದುದು. ಭಷೆಯ ಪ್ರಾಚೀನತೆಯನ್ನು ಗುರುತಿಸುವಂತಹ ಮಾನದಂಡಗಳು, ಅದಕ್ಕೆ ತಕ್ಕಂತಹ ಪರಿಸರವನ್ನು, ಸಾಕ್ಷ್ಯಾಧಾರಗಳನ್ನು ನೀಡಿದ್ಧಾರೆ.

ಇವರು ಅಲ್ಲಮನ ಭಾಷಾ ವಿಜ್ಞಾನವನ್ನು ಪರಿಚಯಿಸಿದರು, ಕವಿರಾಜಮಾರ್ಗದ ಭಾಷಾಶಾಸ್ತ್ರವನ್ನು ಅರ್ಥೈಸಿದ್ದರು. ಅರಹು-ಕುರುಹು ಪತ್ರಿಕೆಯ ಸಂಪಾದಕರಾಗಿ ಉತ್ತಮ ಸಾಹಿತ್ಯವನ್ನು ಸಮಾಜಮುಖಿಯಾಗಿ ಜನಪರವಾಗಿ ಪ್ರಕಟಿಸಿದರು. ಇವರು ರಚಿಸಿದ್ದ ಪ್ರಸಿದ್ಧ ನಾಟಕ “ಗುಡಿಯಂಕ ಕುಡಿಮದ್ದು” ದೆಹಲಿಯಲ್ಲಿ ಪ್ರದರ್ಶನ ಗೊಂಡಿತು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ