ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧಾ

kailasamಡಾ|| ಎಂ.ಶಿವರಾಂ, ಅರ್ಥಾತ್ ರಾ.ಶಿ ಅವರ ಮನೆಗೆ ಅದೊಂದು ದಿನ ಕೈಲಾಸಂ ಬಂದರು. ಆಗ ಅಪರಾಹ್ನ. ಹನ್ನೆರಡರ ಹೊತ್ತು. ಊಟದ ಸಮಯ. ಕೈಲಾಸಂರನ್ನು ಕಾಣುತ್ತಿದ್ದಂತೆ ಆತ್ಮೀಯತೆಯಿಂದ ರಾ.ಶಿ ‘ಬನ್ನಿ ಸಾರ್, ಊಟದ ಹೊತ್ಗೇ ಬಂದಿದ್ದೀರಿ, ಬಹಳ ದಿನಗಳ ನಂತ್ರ, ತುಂಬ ಸಂತೋಷ, ಬನ್ನಿ, ಕೈಕಾಲ್ ತೊಳ್ಕೊಳ್ಳಿ, ಊಟಕ್ಕೇಳಿ’ ಎನ್ನಲು ಕೈಲಾಸಂ ‘ಆಯ್ತಾಯ್ತು, ಮಾಡ್ತೀನಿ, ಮಾಡ್ತೀನಿ.ಆದ್ರೆ ಇವತ್ತು for a change ಅನ್ನೋ ಹಾಗೆ ನೀವಿಬ್ರು ದಂಪತಿಗಳು ಮೊದ್ಲು ಊಟಕ್ಕೂತ್ಕೊಳ್ಳಿ. ನಾನು ಬಡಸ್ತೀನಿ. ಊಟ ಮಾಡಿ. ಸಂತೋಷದಿಂದ ತೃಪ್ತಿಯಾಗೋವರೆಗೂ ಊಟಮಾಡಿ. ನಿಮ್ದಾದ್ಮೇಲೆ ನಾನು ಕೂತ್ಕೋತೇನೆ. ನೀವು ಬಡ್ಸಿದ್ದನ್ನೆಲ್ಲಾ ಬಕಾಸುರನ ಹಾಗೆ ಭಕ್ಷಿಸ್ಬಿಡ್ತೇನೆ; ಓಕೇ’ ಎನ್ನಲು ಏನೊಂದು ಅರ್ಥವಾಗದ ರಾ.ಶಿ ‘ಅಲ್ಲಾ ಸಾರ್, ಏನ್ಸಾರ್ ಇದು ನೀವು ಹೇಳ್ತಿರೋದು? ಮನೇಗ್ಬಂದ ಅತಿಥೀನ್ನೇ ಬಡ್ಸೋ ಹಾಗ್ಮಾಡಿ ನಾವು ಊಟ ಮಾಡ್ಬಿಡೋದೆ?!ಏನ್ಸಾರ್ ಇದು ತಿರುವು ಮುರುವು? ಇದ್ಯಾವ ಕ್ರಮ? ಏಕೆ ಹೀಗೆ? ಎಂದು ಕೇಳಲು ನಕ್ಕ ಕೈಲಾಸಂ ‘ಏಕೆ ಏನು ಎತ್ತ ಅನ್ನೋದ್ನೆಲ್ಲಾ ಆಮೇಲಿಂದ ಹೇಳ್ತೀನಿ. ಈಗ ಮೊದ್ಲು ನಾನು ಹೇಳಿದಹಾಗೆ ಮಾಡಯ್ಯಾ ರಾಜಾ’ ಎನ್ನಲು ಮತ್ತೇನನ್ನೂ ಹೇಳಲಾಗದ ರಾ.ಶಿ ದಂಪತಿಗಳು ಹಾಗೆಯೇ ಮಾಡಿದರು.

ಅವರಿಬ್ಬರು ಕೂತದ್ದಾಯಿತು. ಇವರು ಬಡಿಸಿದ್ದಾಯಿತು. ಅವರು ಉಂಡದ್ದಾಯಿತು. ನಂತರ ಇವರು ಕೂತದ್ದಾಯಿತು. ಅವರು ಬಡಿಸಿದ್ದಾಯಿತು. ಇವರು ಉಂಡದ್ದಾಯಿತು. ಎಲ್ಲವೂ ಆಯಿತು. ಎಲ್ಲರ ಊಟವೂ ಮುಗಿಯಿತು. ಕೈಲಾಸಂ ಹೊರಗೆ ಬಂದರು. ಮನೆಯಾಚೆ ಕಾಂಪೌಂಡಿನೊಳಗಿದ್ದ ಕಲ್ಲು ಬೆಂಚೊಂದರ ಮೇಲೆ ಕೂತರು. ಸಿಗರೇಟು ಹಚ್ಚಿದರು. ಹೊಗೆಯನ್ನು ಆಕಾಶದತ್ತ ಉಫ್ ಎಂದು ಬಿಟ್ಟರು. ಪಕ್ಕದಲ್ಲೇ ಕೂತಿದ್ದರು ರಾ.ಶಿ. ಅವರ ಹಿಂದೆಯೇ ನಿಂತಿದ್ದರು ಮಡದಿ ನಾಗಮ್ಮ. ರಾ.ಶಿ ಯವರೇ ಮಾತೆತ್ತಿದರು. ‘ಏನ್ಸಾರ್ ಇದು ಅತಿರೇಕ? ಯಾಕೆ ಹೀಗೆ ಮಾಡಿದ್ರಿ? ವಿಚಾರವೇನೋ ಸಾರ್’ ಎಂದು ಕೇಳಲು ನಕ್ಕ ಕೈಲಾಸಂ ‘ಅಂಥಾದ್ದೇನೂ ಇಲ್ಲಾ ರಾಜಾ. ಇವತ್ತು ನನ್ನ ಅಮ್ಮನ ಪುಣ್ಯತಿಥಿ ಕಣೋ. ಅದು ನಿಮ್ಮನೇಗೆ ಬಂದಾಗ ನೆನಪಾಯ್ತು. ಹೇಗ್ಮಾಡೋದು? ನಾನಿರೋ ಈ ಅಸಹಾಯಕ ಅತಂತ್ರ ಪರಿಸ್ಥಿತೀಲಿ ಶಾಸ್ತ್ರೋಕ್ತವಾಗಿ ಕ್ರಮಬದ್ಧವಾಗಿ ಬ್ರಾಹ್ಮಣ್ರನ್ನ, ಮಡಿ ಅಡಿಗೆಯವರನ್ನ ಕರದ್ಕೋಂಡ್ಬಂದು ನನ್ನ ಅಮ್ಮನ ಶ್ರಾದ್ಧವನ್ನು ಮಾಡೋದು ಸುತಾರಾಂ ಸಾಧ್ಯವಿಲ್ಲ. ಆದ್ರೆ ಪೂರ್ವೀಕರ ಪುಣ್ಯ ತಿಥೀನ ಬಿಡ್ಲೂ ಕೂಡದು. ಮಾಡ್ಲೇಬೇಕು. ಹೇಗಾದ್ರೂ ಮಾಡು, ಚಿಂತಿಲ್ಲ. ಎಲ್ಲಕ್ಕೂ ಶಾಸ್ತ್ರದಲ್ಲಿ ಮಾರ್ಜಿನ್ನು ಮಾಫಿ ಇದ್ದೇ ಇದೆ. ಬಟ್ ಮಾಡೋಕ್ಕೆ ನಾವು ಮನಸ್ಸು ಮಾಡ್ಬೇಕು. ಶ್ರಾದ್ಧಾಂದ್ರೇನೂಂತೀ? ಶ್ರದ್ಧೆಯಿಂದ ಮಾಡೋದೇ ಶ್ರಾದ್ಧಾ. ಅಷ್ಟೇ. ಅಂದ್ಮೇಲೆ ಹೇಗ್ಮಾಡ್ಬೇಕು? ಯಾನ್ಡ್ರೆ ಹೀಗ್ಮಾಡ್ಬೇಕು. ಹೀಗಾದ್ರೂ ಮಾಡ್ಬೇಕು. ಇನ್ನೂ ಬ್ರಾಹ್ಮಣ್ರು? ನಿಮ್ಗಿಂತ ಒಳ್ಳೇ ಬ್ರಾಹ್ಮಣರನ್ನ ನಾನೆಲ್ಲಿಂದ ತರ್ಲಿ? ಅದಕ್ಕೆ ನಿರ್ಮಲ ಮನಸ್ಸಿನ ನಿಮ್ಮನ್ನೇ ಬ್ರಾಹ್ಮಣರೂಂತ ಭಾವ್ಸಿ, ಅವರ ಸ್ಥಾನದಲ್ಲಿ ನಿಮ್ಮನ್ನ ಕೂರಿಸಿ, ಭೋಜನ ಬಡ್ಸಿ, ಕೈಮುಗ್ದೆ. ಮುಗೀತು ನನ್ನಮ್ಮನ ಶ್ರಾದ್ಧ. Very simple. ಈ ಶ್ರಾದ್ಧದ ವಿಚಾರದಲ್ಲಿ ಒಂದು ತಿಳ್ಕೋ ಶಿವರಾಂ. ಸೆರ್ಮನೇಲಿದ್ರೂವೆ  ಸೇರ್ಮನೀನ ಬಿಡ್ಕೋಡ್ಡು. ಮಾಡ್ಲೇಬೇಕು. ಮರೀಬಾರ್ದು. ತಿಳೀತೆ’ ಎಂದವರಂದಾಗ ಅವರ ಸುಮಕೋಮಲ ಅಂತಃಕರಣದ ಅರಿವಾಗಿ ರಾ.ಶಿ ದಂಪತಿಗಳ ಕಣ್ಣಂಚಿನಲ್ಲಿ ನೀರಾಡಿತು.

ಕೃಪೆ: ಅಂತಃಕರಣ (ಬಿ.ಎಸ್.ಕೇಶವರಾವ್)

Advertisements