ಡಾ| ಸರೋಜಿನಿ ಮಹಿಷಿ

ಭಾರತದ ರಾಜಕೀಯ ಇತಿಹಾಸದಲ್ಲಿ, ಕನ್ನಡ ವಿದ್ವತ್ ಪ್ರಪಂಚದಲ್ಲಿ ಡಾ ಸರೋಜಿನಿ ಮಹಿಷಿಯವರಿಗೆ ಮಹತ್ವದ ಸ್ಥಾನವಿದೆ. ನಿರಂತರ ಪರಿಶ್ರಮ, ಛಲದಿಂದ ಉನ್ನತ ಶಿಕ್ಷಣ ಪಡೆದು ರಾಜಕೀಯ ಕ್ಷೇತ್ರದ ಮೆಟ್ಟಿಲುಗಳನ್ನೇರಿ ದಕ್ಷ ಆಡಳಿತ, ಪ್ರಾಮಾಣಿಕ ಸೇವೆಯಿಂದ ಯಶಸ್ಸನ್ನು ಸಾಧಿಸಿದವರು.

ಮಹಿಷಿ ಮನೆತನದ ಬಿಂದೂರಾವ್ ಹಾಗು ಕಮಲಾಬಾಯಿಯವರ ದ್ವಿತೀಯ ಪುತ್ರಿಯಾಗಿ ಸರೋಜಿನಿ ೧೯೨೭ರಲ್ಲಿ ಜನಿಸಿದರು. ಇವರ ಪೂರ್ವಜರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದವರಾಗಿದ್ದರು. ಸರೋಜಿನಿಯವರು ಧಾರವಾಡದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ೫ನೇ ತರಗತಿಯವರೆಗೆ ಕಲಿತು, ಕರ್ನಾಟಕ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಯವರೆಗೆ ಶಿಷ್ಯವೇತನದೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತ ಬಂದರು. ವಿಲ್ಲಿಂಗ್ಟನ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ೧೯೪೭ರಲ್ಲಿ ಪೂರೈಸಿ ಪ್ರಥಮ ಸ್ಥಾನವನ್ನು ಪಡೆದರು. ಅದೇ ಕಾಲೇಜಿನ ಸ್ತಾನಕೋತ್ತರ ಪದವಿಯನ್ನು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದರು. ನಂತರ ೨ ವರ್ಷ ಈ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಧಾರವಾಡದ ಗರ್ಲ್ಸ್ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ತಂದೆಯ ಕಡೆಯಿಂದ ಬಂದ ಸಂಸ್ಕಾರ ಅವರನ್ನು ಕಾನೂನು ಅಭ್ಯಾಸದ ಕಡೆಗೆ ಸೆಳೆಯಿತು. ೧೯೫೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ರಾಂಕ್ ಪಡೆದು ಮನೆತನಕ್ಕೆ ಕೀರ್ತಿ ತಂದರು. ೫೮-೫೯ರವರೆಗೆ ಭಾರತೀಯ ಸಂವಿಧಾನದ ಶಾಸನಗಳು ಎಂಬ ವಿಷಯದ ಬೋಧಕರಾಗಿ ಸೇವೆ ಸಲ್ಲಿಸುತ್ತ ಕಾನೂನು ಕಲಿಸಿದ ಪ್ರಥಮ ಮಹಿಳೆಯೆನಿಸಿದರು.

ಇಷ್ಟೆಲ್ಲ ಸಾಧನೆಯ ನಡುವೆಯೂ ಅವರು ಸಾಹಿತ್ಯವನ್ನು ಬಿಡಲಿಲ್ಲ. ಸಾಹಿತ್ಯ ಸಂಶೋಧನೆಯ ಕ್ಷೇತ್ರದೆಡೆಗೆ ಹೆಜ್ಜೆ ಹಾಕಿದರು. ಪ್ರೊ. ಸ. ಸ. ಮಾಳವಾಡರ ಮಾರ್ಗದರ್ಶನದಲ್ಲಿ ಕರ್ನಾಟಕದ ಕವಯತ್ರಿಯರು ಎಂಬ ಮಹಾಪ್ರಬಂಧವನ್ನು ಸಲ್ಲಿಸಿದರು. ಊರೂರು ಮಠಗಳಿಗೆ ಅಲೆದು ಹಸ್ತಪ್ರತಿ ಸಂಗ್ರಹಿಸಿ ಈ ಅಧ್ಯಯನವನ್ನು ಕೈಗೊಂಡರು. ಕರ್ನಾಟಕದ ಕುರಿತು ಮೊದಲ ಸಂಶೋಧನ ಕೃತಿ ಇದಾಗಿದೆ. ಇವರ ಸೇವೆ ಬಹುಮುಖವಾದುದು. ಶಿಕ್ಷಣ, ಸಾಮಾಜಿಕ, ರಾಜಕೀಯ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತ ಬಂದವರು. ಹಲವಾರು ಶಿಕ್ಷಣ ಸಂಸ್ಥೆಗಳೊಡನೆ ನಿಕಟ ಸಂಪರ್ಕ ಹೊಂದಿ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸಿದರು ತಮ್ಮದೇ ಆದ ಪ್ರಾಥಮಿಕ, ಮಾಧ್ಯಮಿಕ ಹಾಗು ಟ್ರೇನಿಂಗ್ ಕಾಲೇಜುಗಳ ಸಂಚಾಲಕರಾಗಿ ಶಿಕ್ಷ್ಣ ಕ್ಷೇತ್ರದಲ್ಲಿ ದುಡಿದಿದ್ದಾರೆ. ಇವರು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಉಪಾಧ್ಯಕ್ಷರಾಗಿ ಒರಿಸ್ಸಾ, ಜಗನ್ನಾಥಪುರಿ, ಜಯಪುರ, ಭೂಪಾಲ, ಶೃಂಗೇರಿ, ಕೇರಳ, ಗುರುವಾಯೂರ್ಗಳಲ್ಲಿ ಸಂಸ್ಕೃತ ಸಂಸ್ಥಾನದ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾಗಿದ್ದರೆ.
ರಾಜಕೀಯದಲ್ಲಿ ಇವರ ಸಾಧನೆ ಅಪರೂಪವಾದುದು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪೈಕಿ ಇವರು ಅಗ್ರಗಣ್ಯರು. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದ ಮಹಿಳೆ. ಆಗಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಆಪ್ತಸಚಿವರಾಗಿ ದಕ್ಷ ಕಾರ್ಯ ನಿರ್ವಹಿಸಿದವರು. ೧೯೭೪-೭೬ರ ಅವಧಿಯಲ್ಲಿ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರ ಖಾತೆಯಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಐಹೊಳೆ, ಪಟ್ಟದಕಲ್ಲು, ಬಾದಾಮಿಯಂತಹ ಐತಿಹಾಸಿಕ ಕ್ಷೇತ್ರಗಳಲ್ಲಿ ಪ್ರವಾಸಿ ಮಂದಿರಗಳನ್ನು ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ಕರ್ನಾಟಕ ಸರಕಾರ ನೇಮಿಸಿದ ಆಯೋಗದ ಅಧ್ಯಕ್ಷರಾಗಿ ೧೯೮೪-೮೬ರ ಅವಧಿಯಲ್ಲಿ ಮಹಿಷಿ ವರದಿಯನ್ನು ಸಲ್ಲಿಸಿದ್ದಾರೆ.
ರೂಪಾ ಕಥಾ ಸಂಕಲನ, ಸ್ವಾತಂತ್ರ ಕಹಳೆ, ಹಿಮಾಚಲದಿಂದ ರಾಮೇಶ್ವರ, ಮುಳ್ಳುಗುಲಾಬಿ ಇವು ಮಹಿಷಿಯವರ ಸಾಹಿತ್ಯ ಕೃತಿಗಳು. ಮಂಕುತಿಮ್ಮನ ಕಗ್ಗವನ್ನು ಹಿಂದಿ ಭಾಷೆಗೆ ಸಮರ್ಥವಾಗಿ ಅನುವಾದಿಸಿದ್ದಾರೆ. ಕಾರಂತರ ಅಪೂರ್ವ ಪಶ್ಚಿಮ ಪ್ರವಾಸ ಕಥನ, ಕುವೆಂಪುರ ರಾಮಾಯಣ ದರ್ಶನಂ ಕಾವ್ಯವನ್ನು ಹಿಂದಿಗೆ ಸರಳ ಸುಂದರ ಶೈಲಿಯಲ್ಲಿ ಅನುವಾದಿಸಿದ್ದಾರೆ.

ಸಾಹಿತ್ಯ ಮಂಥನ ವೆಂಬುದು ಬಾಣ, ಕಾಳಿದಾಸ, ನಾಗವರ್ಮ, ಜಯಕೀರ್ತಿಯಂತಹ ಉದ್ಧಾಮ ಕವಿಗಳನ್ನು ಅವರ ಸಾಹಿತ್ಯವನ್ನು ಕುರಿತು ಬರೆದಿರುವ ವಿದ್ವತ್ಪೂರ್ಣ ಗ್ರಂಥ. ಕರ್ನಾಟಕದ ಕವಯತ್ರಿಯರು ವೇದ ಕಾಲದಿಂದ ಆಧುನಿಕ ಕಾಲದವರೆಗಿನ ಸಾಮಾಜಿಕ ಹಿನ್ನಲೆಯಲ್ಲಿ ಕವಯತ್ರಿಯರ ಕವ್ಯ ಪರಂಪರೆಯನ್ನು ಅದರಲ್ಲೂ ಕನ್ನಡ ಕವಯತ್ರಿಯರ ಸಾಧನೆಯನ್ನು ಕನ್ನಡಿಗರಿಗೆ ಪರಿಚಯಿಸಿದ ಮೊದಲ ಸಂಶೋಧನ ಕೃತಿಯಾಗಿದೆ.

ಕರ್ನಾಟಕದ ಹೆಮ್ಮೆಯ ಮಹಿಳೆಯಾಗಿರುವ ಡಾ|ಸರೋಜಿನಿ ಮಹಿಷಿಯವರಿಗೆ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವು ೨೦೦೯ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ರಾಜಕೀಯ ಮುತ್ಸದಿಯಾಗಿ, ಸಾಹಿತಿಯಾಗಿ, ಸಂಘಟಕರಾಗಿ, ಶಿಕ್ಷಣ ಕ್ಷೇತ್ರದ ಚಿಂತಕೆಯಾಗಿ, ದಕ್ಷ ಆಡಳಿತಗಾರರಾಗಿ ನಮ್ಮ ದೇಶಕ್ಕೆ, ನಾಡಿಗೆ ಅಮೋಘವಾದ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ೨೦೦೫ರಲ್ಲಿ ವಿಧಿವಶರಾದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ