ಪ್ರೊ. ಸ. ಸ. ಮಾಳವಾಡ

ಪ್ರೊ. ಸ. ಸ. ಮಾಳವಾಡರವರು ಹಿರಿಯ ತಲೆಮಾರಿನ ಪ್ರಸಿದ್ಧ ಲೇಖಕರು. ಸೃಜನಶೀಲ ಬರಹಗಾರರು. ಹಳಗನ್ನಡ, ನಡುಗನ್ನಡ ಸಾಹಿತ್ಯದ ಅನೇಕ ಮಹತ್ವದ ಕೃತಿಗಳನ್ನು ಸಂಪಾದಿಸಿದವರು. ಹೊಸಗನ್ನಡವನ್ನು ತಮ್ಮ ವಿಮರ್ಶಾತ್ಮಕ ಬರಹಗಳಿಂದ ಶ್ರೀಮಂತಗೊಳಿಸಿದವರು.
ಅವರ ಜೀವನ ದೃಷ್ಟಿಯೇ ಅಪರೂಪದ್ದಾಗಿತ್ತು. ಅನಾನುಕೂಲಕ್ಕಿಂದ ಆತ್ಮಗೌರವ ಹೆಚ್ಚಿನದು, ಲಾಭಕ್ಕಿಂತ ನಿಷ್ಠೆ ಹೆಚ್ಚಿನದು ಎಂದು ಅವರು ಹೇಳುತ್ತಿದ್ದರು. ಸಾಹಿತ್ಯದ ಮೂಲಕ ಬಾಳಿನ ಅರ್ಥವನ್ನು ನಲಿವನ್ನೂ ಹೆಚ್ಚಿಸಿಕೊಳ್ಳುವುದು, ಪಡೆದ ತಿರುಳನ್ನು ಜನತೆಯಲ್ಲಿ ಹರಟಿ ಸಂತೋಷಪಡುವುದು ಅವರ ನಿಲುವಾಗಿತ್ತು.
ಪ್ರೊ. ಮಾಳವಾಡರು ವಿಜಾಪುರ ಜಿಲ್ಲೆಯ ಗೋವನಕೊಪ್ಪದವರು. ಸಂಗನಬಸಪ್ಪ ಮತ್ತು ಕಾಳಮ್ಮ ದಂಪತಿಗಳಿಗೆ ಹಿರಿಯ ಮಗನಾಗಿ ೧೯೧೦ರಂದು ಜನಿಸಿದರು. ಮನೆಯ ದೇವರಾದ ಸಂಗಮೇಶ್ವರನ ಹೆಸರನ್ನೇ ಸಂಗಪ್ಪ ಎಂದು ಇವರಿಗೆ ಇಡಲಾಯಿತು. ಇವರು ಗೋವನಕೊಪ್ಪದಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಕೊಲ್ಲಾಪುರದಲ್ಲಿ ಮ್ಯಟ್ರಿಕ್ ಪಾಸಾಗಿ ೧೯೧೯ ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿಗೆ ಪ್ರವೇಶ ಪಡೆದರು. ಧಾರವಾಡದಲ್ಲಿ ಅನೇಕ ಸಾಹಿತಿಗಳ ಸಂಬಂಧಕ್ಕೊಳಗಾಗಿ ಸಾಹಿತ್ಯಾಸಕ್ತಿ ಬೆಳಸಿಕೊಂಡರು. ೧೯೩೩ರಲ್ಲಿ ಬಿ.ಎ. ಆನರ್ಸ್ ಪಾಸಾಗಿ ಮುಂದೆ ಕೆಲಸ ಮಾಡುತ್ತಾ ಎಂ.ಎ. ಪದವಿ ಪಡೆದರು. ಮೊದಲ ಬಾರಿಗೆ ಇವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರಾಚೀನ ಕನ್ನಡ ಸಾಹಿತ್ಯದ ಸಂದೇಶ ದ ಬಗ್ಗೆ ಭಾಷಣ ಮಾಡಿದ್ದರು, ವಿಚಾರ ಪ್ರಚೋದಕವಾದ ಇಂಥ ವಿದ್ವತ್ಪೂರ್ಣ ಭಾಷಣಗಳು, ಲೇಖನಗಳು ಪ್ರಕಟಗೊಂಡವು. ೧೯೩೮ ರಲ್ಲಿ ಮಾಳವಾಡರು ಪ್ರಾರಂಭಿಸಿದ ಗದ್ಯಮಾಲೆ ಮಹತ್ವವಾಗಿತ್ತು. ಇವರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಆಕಾಶವಾಣಿ ಕೇಂದ್ರಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ೧೯೬೪ರಲ್ಲಿ ಅಮೇರಿಕೆಯ ಶಿಕ್ಷಣ ವ್ಯಾಸಂಗ ಗೋಷ್ಠಿಯಲ್ಲಿ ಭಾಗವಹಿಸಿದರು, ಬ್ರಿಟಿಷ್ ವಿಶ್ವವಿದ್ಯಾಲಯಗಳನ್ನೂ ಸಂದರ್ಶಿಸಿದರು.
ಸ್ವಾದಿ ಅರಸು ಮನೆತನ, ಉತ್ತಂಗಿ ಚೆನ್ನಪ್ಪ, ಮಧುರಚೆನ್ನ, ಬಸವಣ್ಣನವರು, ಶಿಶುನಾಳ ಶರೀಫರು, ನವಲಗುಂದ ಬಸವರಾಜ ಸ್ವಾಮಿ, ನಾಗಮಹಾಶಯ ಹೀಗೆ ೯ ಜೀವನ ಚರಿತ್ರೆಗಳನ್ನು ಹೊರತಂದರು. ಪಯಣದ ಕತೆ, ಭಾರತ-ನೇಪಾಳ ಪ್ರವಾಸದ ಅನುಭವ ವಿಶೇಷತೆಗಳನ್ನು ಒಳಗೊಂಡಿದೆ.
ಆಧ್ಯಾತ್ಮ ಕುರಿತಾಗಿ ಶ್ರೀಮಾತೆಯವರ ವಿಚಾರಧಾರೆ, ಶ್ರೀ ಅರವಿಂದ ಸ್ಮರಣೆ, ಅರವಿಂದ ಸಂಗಮ, ಶ್ರೀಮಾತೆಯ ಸಾಧನಾ ಪಥ, ವೀರಶೈದರ್ಶನ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಗದ್ಯಮಾಲೆ, ರಾಘವಾಂಕ ಚರಿತೆ, ಬಸವಣ್ಣನವರ ವಚನ ಸಂಗ್ರಹ, ಕಾವ್ಯ ಮಂಜರಿ ಮುಂತಾದ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ೧೯೮೭ರಲ್ಲಿ ಸ್ವರ್ಗಸ್ಥರಾದ ಮಾಳವಾಡರು ತಮ್ಮ ಮೌಲ್ಯಾಧಾರಿತ ಕೃತಿಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಇಂದಿಗೂ ವಿಶಿಷ್ಟ ಸ್ಥಾನಗಳಿಸಿದ್ದಾರೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ