ಅಳೀರ್ ಗುಡುಗುಡು

ಅಳೀರ್ ಗುಡುಗುಡುಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ ಒಬ್ಬೊಬ್ಬ ನಾಯಕ, ಎರಡು ಗುಂಪಿನವರು ಪರಸ್ಪರ ಎದುರು ಬದುರು ನಿಂತು ಈರ್ವರ ನಡುವೆ ನೆಲದ ಮೇಲೆ ಒಂದು ಗೆರೆ ಎಳೆದುಕೊಳ್ಳುತ್ತಾರೆ. ಅದು ಆಟದ ನಿರ್ಣಾಯಕ ಗಡಿರೇಖೆ. ನಾಣ್ಯವನ್ನು ಮೇಲೆ ಎಸೆದು ಯಾರು ಮೊದಲು ಆಟ ಪ್ರಾರಂಭಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಟಾಸ್ ಗೆದ್ದವರು ಮೊದಲು  ಅಳೀರ್ ಗುಡುಗುಡು  ಎನ್ನುತ್ತಾ ನಿರ್ಣಾಯಕ ರೇಖೆ ದಾಟಿ ಎದುರು ಗುಂಪಿನತ್ತ ಧಾವಿಸುತ್ತಾರೆ. ಎದುರು ಗುಂಪಿನ ಯಾರನ್ನಾದರೂ ಮುಟ್ಟಿ ಅವರಿಂದ ತಪ್ಪಿಸಿಕೊಂಡು ಗುಡುಗುಡು ಎನ್ನುವುದನ್ನು ನಿಲ್ಲಿಸದೆ ಗೆರೆ ದಾಟಿದರೆ ಮುಟ್ಟಿಸಿಕೊಂಡವರು ಸೋತಂತೆ. ಅಳೀರ್ ಗುಡುಗುಡು  ಎಂದು ಹೋದವನನ್ನು ಎದುರು ಗುಂಪಿನವರು ಹಿಡಿದು ಅವನು ಗೆರೆ ದಾಟದೆ ಗುಡುಗುಡು ಎಂದು ಹೇಳುವುದನ್ನು ನಿಲ್ಲಿಸಿದರೆ ಅವನು ಸೋತಂತೆ. ಸೋತವರು ಗುಂಪನ್ನು ಬಿಟ್ಟು ಹೊರಗೆ ಕೂರಬೇಕು. ಪ್ರತಿ ಸಾರಿಯೂ ಒಂದು ಗುಂಪಿನಿಂದ ಒಬ್ಬರು ಮಾತ್ರ ಅಳೀರ್ ಗುಡುಗುಡು ಎನ್ನುತ್ತಾ ಎದುರಾಳಿ ಗುಂಪಿನೊಳಗೆ ಪ್ರವೇಶಿಸಬೇಕು. ಒಂದು ಗುಂಪಿನಲ್ಲಿರುವವರೆಲ್ಲ, ಮುಟ್ಟಿಸಿಕೊಂಡೊ ಇಲ್ಲವೆ ಗಡಿರೇಖೆ ಮುಟ್ಟಲಾಗದೆ ಗುಡುಗುಡು ಎನ್ನಲಾಗದೆ ಒಟ್ಟಾರೆ ಅವರೆಲ್ಲರೂ ಸೋತವರಾಗುತ್ತಾರೆ. ಗೆದ್ದವರಿಗೆ ಒಂದು ಆಟ ಗೆದ್ದಂತೆ. ಆಟಕ್ಕೆ ಮೊದಲೇ ಇಷ್ಟು ಆಟಗಳು ಎಂದು ಪರಸ್ಪರ ಒಪ್ಪಿಗೆಯ ಮೇಲೆ ನಿಷ್ಕರ್ಷೆಯಾಗುತ್ತದೆ. ಹೆಚ್ಚಿನ ಆಟಗಳನ್ನು ಆಡಿದ ಗುಂಪು ಗೆದ್ದಂತೆ.

ಬಯಲು ಸೀಮೆ ಮತ್ತು ಕರ್ನಾಟಕದ ಉತ್ತರಭಾಗದಲ್ಲಿ ಕಂಡುಬರುವ ಆಟವಿದು. ಬಯಲು ಸೀಮೆಯಲ್ಲಿ ಕಬಡ್ಡಿ ಎಂದು ಕರೆದರೆ, ಉತ್ತರ ಕರ್ನಾಟಕದಲ್ಲಿ ಈ ಆಟಕ್ಕೆ ತೀತೀ (ತೂತು) ಅಥವಾ ಹುತುತು ಎಂದು ಕರೆಯುತ್ತಾರೆ.

Leave a comment