ಹುಲಿ ವೇಷ

ಹುಲಿ ವೇಷಹುಲಿ ವೇಷ (ತುಳು:ಪಿಲಿ ವೇಷ) ತುಳುನಾಡಿನ ಬಹಳ ಶ್ರೇಷ್ಠವಾದ ಮತ್ತು ಜನಪ್ರಿಯ ಜಾನಪದ ಕಲೆ. ಹುಲಿ ವೇಷವನ್ನು ತಾಯಿ ಶಾರದೆಯ (ಸರಸ್ವತಿಯ ಇನ್ನೊಂದು ರೂಪವಾಗಿದ್ದು ಹುಲಿಯು ಈ ದೇವಿಯ ವಾಹನ) ಗೌರವಾರ್ಥವಾಗಿ ನಡೆಸಿಕೊಡಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯಲ್ಲಿ ಮತ್ತು ಗಣೇಶ ಚತುರ್ಥಿಯಂದು ಮೂಡುಬಿದಿರೆಯಲ್ಲಿ ನಡೆಸುವುದು ತುಳುನಾಡಿನ ವಾಡಿಕೆ.

5ರಿಂದ 10 ಮಂದಿಯ ಯುವಕರ  ಗುಂಪಿನಲ್ಲಿ, 3ರಿಂದ 5 ಮಂದಿ ಹುಲಿಯ ಬಣ್ಣವನ್ನು ಹಚ್ಚಿಕೊಂಡು, 2ರಿಂದ 3 ಮಂದಿ ಚಂಡೆ ವಾದಕರಿದ್ದು ಒಬ್ಬ ಮುಖ್ಯಸ್ತನ ಮೇಲ್ವಿಚಾರಣೆಯಲ್ಲಿ ಮುಂದೆ ಸಾಗುತ್ತಿರುತ್ತದೆ. ನವರಾತ್ರಿಯಂದು ಪಟ್ಟಣದ ಓಣಿಗಳಲ್ಲಿ/ಬೀದಿಗಳಲ್ಲಿ ಚಂಡೆ ವಾದನದೊಂದಿಗೆ ಇವರು ಗುಂಪಿನಲ್ಲಿ ಸಾಗುತಿರುತ್ತಾರೆ. ಮನೆ ಮತ್ತು ಅಂಗಡಿಗಳ ಎದುರು ಅಥವ ರಸ್ತೆಯ ಬದಿಯಲ್ಲಿ ಸುಮಾರು 10 ನಿಮಿಷ ಪ್ರದರ್ಶವನ್ನು ಕೊಟ್ಟು ಜನರಿಂದ ಕಾಣಿಕೆಯನ್ನು/ದುಡ್ಡನ್ನು ಸ್ವೀಕರಿಸುತ್ತಾರೆ.

ಮುಂಚಿನ ಕಾಲದಲ್ಲಿ ಹುಲಿ ವೇಷವನ್ನು ಹರಕೆಗಾಗಿ ಆಚರಿಸಲಾಗುತ್ತಿತ್ತು.ಹುಲಿ ವೇಷದ ಚಂಡೆ ಮರ್ದನವು ಬಹಳ ದೂರದವರೆಗೂ ಕೇಳಿಸುತ್ತದೆ ಮತ್ತು ಆ ಸ್ಥಳಕ್ಕೆ ಹುಡುಗರು ತಂಡೋಪತಂಡವಾಗಿ ಬಂದು ಹುಲಿವೇಷದೊಂದಿಗೆ ನಡೆಯುತ್ತ ಮುಂದೆ ಸಾಗುತ್ತಾರೆ. ತುಳು ನಾಡಿನ ಪ್ರತಿಯೊಬ್ಬ ಹುಡುಗನು ಹುಲಿ ವೇಷದ ತಾಳವನ್ನು ಬಾಯಲ್ಲಿ ನುಡಿಸಲಿ ಕಲೆತಿರುತ್ತಾನೆ.

ಹುಲಿ ವೇಷ ನೃತ್ಯದ ಸಮಯದಲ್ಲಿ ನರ್ತಕನು ಹಲವು ಶೌರ್ಯ ಪ್ರದರ್ಶನಗಳನ್ನು ಮಾಡುತ್ತಾನೆ. ಅದರಲ್ಲಿ ‘ಗಾವು ಜಿಗಿತ’ ಒಂದು.ನರ್ತಕನು ಕುರಿಯನ್ನು ತನ್ನ ಬಾಯಿಂದ  ಕಚ್ಚಿ ಎತ್ತಿ ಗಾಳಿಯಲ್ಲಿ ತೋರಿ ಸಾಯಿಸುವ ಒಂದು ಪ್ರದರ್ಶನ. ಇದನ್ನು ಹುಲಿಯ ಬೇಟೆಯಾಡಿ ಕೊಂದು ತಿನ್ನುವ ಪರಿಯನ್ನು ತೋರಿಸುವ ಸಲುವಾಗಿ ಪ್ರದರ್ಶಿಸುತ್ತಾರೆ ವಿನಃ ಕುರಿಯನ್ನು ಸಾಯಿಸಲಾಗುವುದಿಲ್ಲ. ಇದನ್ನು ಕೇವಲ ಸಾಂಕೇತಿಕವಾಗಿ ಪ್ರದರ್ಶಿಸಲಾಗುತ್ತದೆ. ಇದಲ್ಲದೆ ನರ್ತಿಸುತ್ತ ಹಿಂದಕ್ಕೆ ಬಾಗಿ ಬಾಯಲ್ಲಿ ಹಣದ ನೋಟನ್ನು ಕಚ್ಚಿ ಹಿಡಿಯುವಂತಹ ಅನೇಕ ಜನಪ್ರಿಯ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ.

http://www.youtube.com/watch?v=V8wa4L7NZJM

ಚಿತ್ತಾರ

ಚಿತ್ತಾರಚಿತ್ತಾರ ಎಂಬ ಜಾನಪದ ಕಲೆ ಬಹಳ ವಿಶೇಷವಾದದ್ದು.ಚಿತ್ತಾರ ಜಾನಪದ ಕಲೆಯನ್ನು ಪ್ರಕೃತಿ ಆರಾಧಕರು ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಹೆಂಗಸರು ಈ ಜಾನಪದ ಕಲೆಯಲ್ಲಿ ಭಾಗವಹಿಸುತ್ತಾರೆ.

ಪಶ್ಚಿಮ ಘಟ್ಟಗಳು ವ್ಯಾಪಿಸಿರುವ ಉತ್ತರ ಕನ್ನಡದಲ್ಲಿ ವಾಸಿಸುವ ‘ದೇವರು’ ಎಂಬ ಜನಾಂಗದವರು ಈ ಕಲೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುತ್ತಾರೆ. ಚಿತ್ತಾರ ಎಂದರೆ ಬರವಣಿಗೆ ಸುಂದರವಾದ ಬಣ್ಣಗಳ ಸಮಾಗಮ. ಬಣ್ಣ ಬಣ್ಣದ ರಂಗೋಲಿಗಳ ಸಮಾಗಮವೇ ಚಿತ್ತಾರ. ಚಿತ್ತಾರ ಬಿಡಿಸುವವರು ಸಾಮಾಜಿಕ ವಿಚಾರಗಳು ಮತ್ತು ಭೌಗೋಳಿಕ ವ್ಯವಸ್ಥೆಗಳು ಎಲ್ಲವನ್ನೂ ಒಳಗೊಂಡಿರುತ್ತವೆ. ಚಿತ್ತಾರ ಬಿಡಿಸುವವರಿಗೆ ಸಾಮಾಜಿಕ ಮತ್ತು ಭೌಗೋಳಿಕ ಅಂಶಗಳ ಬಗ್ಗೆ ತಿಳಿದಿರಬೇಕು. ಈ ಜಾನಪದ ಕಲೆಯು ಇಂದಿಗೂ ಆ ಭಾಗದ ಹೆಣ್ಣು ಹೃದಯಗಳಿಗೆ ದಿನದಿನದ ಒಂದು ಭಾಗವಾಗಿರುತ್ತದೆ. ಈ ಕಲೆಯು ಜೀವನದ ಒಂದು ಭಾಗವಾಗಿ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶವಾಗಿ ಹೊರಹೊಮ್ಮಿದೆ.

ಸಾಮಾನ್ಯವಾಗಿ ಚಿತ್ತಾರಗಳು ಎರಡರಿಂದ ಮೂರು ಅಡಿ ಅಗಲವಿರುತ್ತದೆ. ಚಿತ್ತಾರ ಬಿಡಿಸಲು ಬಳಸುವ ಪದಾರ್ಥಗಳು ಪ್ರಕೃತಿಗೆ ಹಾನಿಕಾರಗವಾಗಿರುವುದಿಲ್ಲ, ಅಕ್ಕಿಹಿಟ್ಟು ಬಿಳಿಬಣ್ಣಕ್ಕೆ, ಹುರಿದ ಅಕ್ಕಿ ಹಿಟ್ಟು ಕಪ್ಪು ಬಣ್ಣಕ್ಕೆ, ಗುರಿಗೆ ಹಿಟ್ಟು ಹಳದಿ ಬಣ್ಣಕ್ಕೆ, ಈ ರೀತಿ ಎಲ್ಲೂ ರಾಸಾಯಿನಕದ ಉಪಯೋಗ ಇರುವುದಿಲ್ಲ. ‘ದೇವರು’ ಜನಾಂಗದ ಹೆಂಗಸರಿಗೆ ಚಿತ್ತಾರ ಕಲೆ ಸಂತೋಷದ, ಸಮೃದ್ಧಿಯ ಮತ್ತು ಹೊಸತನ ಸೃಷ್ಠಿಯ ಮೂಲ, ತಮ್ಮ ಈ ಕಲೆಯ ಬಗ್ಗೆ ಅವರಿಗೆ ಹೆಮ್ಮೆ ಇದೆ. ಸಮಾಜದಲ್ಲಿ ಒಂದಾಗಿದ್ದು, ಆಚರಣೆಗಳಲ್ಲಿ ಬೇರೆ ಬೇರೆ ಇರುವ ಎಲ್ಲರನ್ನೂ ಈ ಚಿತ್ತಾರ ಕಲೆ ಒಂದುಗೂಡಿಸುತ್ತದೆ. ಮತ್ತು ಈ ರೀತಿಯ ಕರಕುಶಲತೆ ಇರುವ ಕಲೆ ಹೆಂಗಸರಿಗೆ ಒಂದು ರೀತಿಯ ಸಂತೃಪ್ತ ಭಾವವನ್ನು ನೀಡುತ್ತದೆ.

ಉತ್ತರ ಕರ್ನಾಟಕದ ಜಾನಪದ ಕಲೆಗಳು

ಉತ್ತರ ಕರ್ನಾಟಕದ ಜಾನಪದ ಕಲೆಗಳುಜಗ್ಗ ಹಲಿಗೆ ಒಂದು ಚರ್ಮ ವಾದ್ಯವಾಗಿದ್ದು ಅದನ್ನು ಎತ್ತಿನ ಬಂಡಿಯ ಗಾಲಿಗೆ ಎಮ್ಮೆ   ಚರ್ಮವನ್ನು   ಸುತ್ತಿ ಮಾಡಲಾಗಿರುತ್ತದೆ. ಕಾಮನ ಹುಣ್ಣಿಮೆ ಮತ್ತು ಯುಗಾದಿ ಅಂದು ‘ಬ್ಯಾಹಟ್ಟಿ’ಯ ಜನರು ವಿಜೃಂಭಣೆಯಿಂದ ಆರು ಜೋಡಿ ಚರ್ಮವಾದ್ಯಗಳನ್ನು ಮೆರವಣಿಗೆಯಲ್ಲಿ ಕೊಂಡೈಯುತ್ತಾರೆ. ಬೇರೆ ಚರ್ಮ ವಾದ್ಯಗಳಿಗೆ ಹೋಲಿಸಿದರೆ ಜಗ್ಗಲಿಗೆಯೇ ದೊಡ್ಡದು ಮತ್ತು ಇದರ ಲಯವನ್ನು ಸೂತ್ರದಾರನು ತನ್ನ ಬಳಿ  ಇರುವ  ಚಿಕ್ಕ ಚರ್ಮ ವಾದ್ಯ ‘ಕಣಿಹಲಗೆ’ಯ ಮೂಲಕ ನಿಯಂತ್ರಿಸುತ್ತಾನೆ.

ಕರಡಿಮಜಲು
ಇದು ಉತ್ತರ ಕರ್ನಾಟಕದ ಜನಪ್ರಿಯವಾದ ಜಾನಪದ ಕಲೆ. ಇದನ್ನು ಅನೇಕ ಮಂಗಳಕರ ಸಮಾರಂಭಗಳಲ್ಲಿ ಮತ್ತು ಮೆರವಣಿಗೆಗಳಲ್ಲಿ ನಡೆಸಿಕೊಡುತ್ತಾರೆ.  ಶೆಹನಾಯಿ ಮಧುರತೆ ಮೂಡಿಸಿದರೆ ಕರಡೆ ಎಂಬ ಇನ್ನೊಂದು ಪಕ್ಕ ವಾದ್ಯ ಲೋಹದ ಝೇಂಕಾರವನ್ನು ಹೊಮ್ಮಿಸುತ್ತದೆ.

ಕೃಷ್ಣ ಪಾರಿಜಾತ
 ಉತ್ತರ ಕರ್ನಾಟಕದ ಜಾನಪದ ನಾಟಕ ಪ್ರಕಾರಗಳಲ್ಲಿ ಕೃಷ್ಣ ಪಾರಿಜಾತವು ಒಂದು.ಇದು ಯಕ್ಷಗಾನ ಮತ್ತು ಬಯಲಾಟದ ಸಮ್ಮಿಶ್ರಣವಾಗಿದ್ದು, ಮಹಾಭಾರತದ ಕಥೆ ಮತ್ತು ಘಟನೆಗಳನ್ನು  ಸುಂದರವಾಗಿ ವರ್ಣಿಸುತ್ತದೆ.

ಸುಗ್ಗಿ ಕುಣಿತ

ಸುಗ್ಗಿ ಕುಣಿತಉತ್ತರ ಕರ್ನಾಟಕದ ಭಾಗದಲ್ಲಿ ಹಾಲಕ್ಕಿ ಒಕ್ಕಲಿಗರು ಸುಗ್ಗಿ ಕುಣಿತ ಜಾನಪದ ಕಲೆಯನ್ನು ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಬೆಳೆಯ ಕೊಯ್ಲಿನ ಸಮಯದಲ್ಲಿ ಸುಗ್ಗಿ ಕುಣಿತ ಮಾಡುತ್ತಾರೆ.ಸುಗ್ಗಿ ಎಂದರೆ ಸಂತೋಷವನ್ನು ಸೂಚಿಸುವಂತಹುದು, ಕಾಮನ ಹುಣ್ಣಿಮೆ ಅಥವಾ ಹೋಳಿ ಹಬ್ಬದ ದಿನಕ್ಕೆ ನಾಲ್ಕು ದಿನ ಮೊದಲಿನಿಂದಲೇ ಸುಗ್ಗಿ ಕುಣಿತ ಶುರು ಆಗಿರುತ್ತದೆ.

12 ಅಥವಾ 14 ಜಾನಪದ ಕಲಾವಿದರು ಗುಂಪು ಗುಂಪಾಗಿ ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಾ ಗಮ್ಮಟೆ ಎಂಬ ವಾದ್ಯವನ್ನು ನುಡಿಸುತ್ತಾ, ಸಮೃದ್ಧಿಯ ಬೆಳೆ ಕೊಯ್ಲಿನ ಒಳಿತಿನ ಹಾಡುಗಳನ್ನು ಹಾಡುತ್ತಾ ಸಾಗುತ್ತಾರೆ.

ಈ ರೀತಿ ಹಾಡುತ್ತಾ ಸಾಗುವಾಗ ರೈತರಿಂದ ಧವಸ ಧಾನ್ಯಗಳನ್ನು ಮತ್ತು ಹಣವನ್ನು ಪಡೆಯುತ್ತಾರೆ. ಜಾನಪದ ಗುಂಪು ಈ ರೀತಿಯ ಓಡಾಟ ಮುಗಿಸಿಕೊಂಡು ಕಾಮನ ಹುಣ್ಣಿಮೆಯಂದು ಮತ್ತೆ ತಮ್ಮ ಊರಿಗೆ ಮರಳುತ್ತಾರೆ. ಕಾಮ ಎಂಬ ಆಕೃತಿಯನ್ನು ಸುಟ್ಟು ಹಾಕಿ ತಮ್ಮ ಮನದಲ್ಲಿರುವ ಕೆಟ್ಟ ಭಾವನೆಗಳನ್ನು ತೊರೆದುಕೊಳ್ಳುತ್ತಾರೆ. ನಂತರ ಎಲ್ಲರೂ ಗ್ರಾಮವೆಲ್ಲ ಮೆರವಣಿಗೆ ಹೊರಡುತ್ತಾರೆ, ಈ ಮೆರವಣಿಗೆಯಿಂದ ಗ್ರಾಮದಲ್ಲಿ ಒಳ್ಳೆಯ ಮಳೆ ಬೆಳೆ ಆಗುತ್ತದೆ, ಗ್ರಾಮಸ್ಥರು ರೋಗ ರುಜಿನಗಳಿಂದ ದೂರವಿರುತ್ತಾರೆ ಎಂಬುದು ನಂಬಿಕೆ.

ಕಲಾವಿದರು ಸುಂದರವಾದ ಉಡುಗೆಯನ್ನು ಧರಿಸಿರುತ್ತಾರೆ, ತಲೆಗೆ ಮರದ ಟೋಪಿ ಧರಿಸಿ ಅದಕ್ಕೆ ಸುಂದರವಾದ ಹಕ್ಕಿಗಳ ಪುಕ್ಕ ಮತ್ತು ಹೂಗಳಿಂದ ಸಿಂಗರಿಸಿರುತ್ತಾರೆ. ಅವರ ಮುಕುಟವು ಸಮೃದ್ಧಿಯ ಸಂಕೇತವಾಗಿ ಕಾಣುತ್ತದೆ.ಜಾನಪದ ಕಲಾವಿದರು ಕುಣಿಯುವಾಗ ಒಂದು ಕೈಲಿ ಕೋಲು ಮತ್ತೊಂದು ಕೈಲಿ ನವಿಲಿನ ಗರಿಗಳಿಂದ ಮಾಡಿದಂದಹ ವಿಶಿಷ್ಠ ವಸ್ತುವನ್ನು ಇಟ್ಟುಕೊಂಡಿರುತ್ತಾರೆ.ಈ ನಾಟ್ಯ ತಂಡದೊಂದಿಗೆ ಸ್ವಲ್ಪ ಹಾಸ್ಯವನ್ನು ಸಹ ಮಿಶ್ರಣ ಮಾಡಲು ಸೋಗಿನವರು ಮತ್ತು ಹಾಸ್ಯಗಾರರು ಎಂಬ ಪಾತ್ರಗಳನ್ನು ಸೃಷ್ಠಿ ಮಾಡಿರುತ್ತಾರೆ. ಸುಗ್ಗಿ ಕುಣಿತ ಮಾಡುತ್ತ ಮೆರವಣಿಗೆ ಹೊರಡುವಾಗ ಪ್ರತಿಯೊಂದು ಮನೆಯ ಬಳಿಯೂ ಆರತಿಯೊಂದಿಗೆ ಬರಮಾಡಿಕೊಳ್ಳುತ್ತಾರೆ.

ಕೋಲಾಟ

ಕೋಲಾಟಕೋಲಾಟ, ಒಂದು  ವಿಶೇಷವಾದ ಜಾನಪದ ನೃತ್ಯ, ಈ ಕೋಲಾಟದಲ್ಲಿ ಭಾಗವಹಿಸುವ ಕಲಾಕಾರರು ಎಗರುವುದು, ಹಿಗ್ಗಿ ಬಗ್ಗುವುದು, ಕುಳಿತು ಕುಣಿಯುವುದು ಮುಂತಾದ ವಿವಿಧ ರೀತಿಯ  ಅತ್ಯಾಕರ್ಷಕ ಭಂಗಿಗಳಲ್ಲಿ ಕುಣಿಯುತ್ತಾರೆ. ಎರಡು ಕೈಲು ಬಣ್ಣದ ಕೋಲುಗಳನ್ನು ಹಿಡಿದು ಪಕ್ಕದ ಪಟುಗಳ ಕೋಲುಗಳಿಗೆ ಹೊಡೆಯುತ್ತ ವಿಶೇಷವಾದ ನಾದವನ್ನು ಹೊಮ್ಮುತ್ತಾ ಅದಕ್ಕೆ ತಕ್ಕನಂತೆ ಪದಗಳನ್ನು ಹಾಡುತ್ತಾ ಕುಣಿಯುವುದೇ ಈ ಜಾನಪದ ಕಲೆಯ ವಿಶೇಷತೆ.

ಕೋಲಾಟವನ್ನು ಮೈಸೂರಿನ ಮಂಡ್ಯದ ಮತ್ತು ಹಾಸನದ ವಕ್ಕಲಿಗ, ಗೊಲ್ಲ ಮತ್ತು ನಾಯಕ ಕುಲದವರು ಉತ್ತರ ಕರ್ನಾಟಕದ ಹಾಲಕ್ಕಿ ಗೌಡ ಕುಲದವರು ಮತ್ತು ಕೊಡಗಿನ ಕೊಡವ ಕುಲಬಾಂಧವರು ಈ ನೃತ್ಯಕಲೆಯಲ್ಲಿ ನಿಸ್ಸೀಮರು.

ಕೋಲಾಟಕ್ಕೆ ಅದರದೇ ಆದ ಮಹತ್ವ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಲಭಿಸಿದೆ, ಕೋಲಾಟ ಎಲ್ಲ ವಯೋಮಾನದವರಿಗೂ ಹಿಡಿಸಿ ನೋಡಿಸಿಕೊಂಡು ಹೋಗುವಂತಹ ಕಲೆ.

ಭೂತಾರಾಧನೆ

ಭೂತಾರಾಧನೆಭೂತಾರಾಧನೆ (ಭೂತ ಕೋಲ) ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೆಲೆಸಿರುವ ತುಳು ಮಾತಾಡುವ ಸಮುದಾಯದವರು  ಆಚರಿಸಿಕೊಂಡು ಬರುತ್ತಿರುವ ಒಂದು ಪುರಾತನ ಧಾರ್ಮಿಕ ಪದ್ಧತಿ. ಭೂತಾರಾಧನೆಯು ನಂಬಿಕೆ, ಆಚರಣೆ, ಸಾಹಿತ್ಯ, ಸಂಗೀತ, ನಾಟಕ ಅಂಶಗಳ ಸಂಕೀರ್ಣ ಮಿಶ್ರಣವಾಗಿದ್ದು ಇದರ ಮೂಲ ಕಂಡು ಹುಡುಕುವುದು ಕಷ್ಟ. ಪೂಜಿಸಲ್ಪಡುವ ಭೂತ ಮತ್ತು ದೈವಗಳು ಗ್ರಾಮ ಹಿತರಕ್ಷಕರೆಂದು, ತಮ್ಮ ಆಶೀರ್ವಾದದಿಂದ ಜನರನ್ನು ಮತ್ತು ಜಾನುವಾರುಗಳನ್ನು ರಕ್ಷಿಸುತ್ತಾರೆ ಎಂದು ನಂಬಲಾಗಿದೆ.

ಈ ದೈವಗಳು ಶಿವ ಸೇವಕರು ಎಂದು ನಂಬಲಾಗಿದ್ದು , ಮೆರವಣಿಗೆಯು ತಾಳಮದ್ದಲೆ ಮತ್ತು ಸುಡುಮದ್ದು ಪ್ರದರ್ಶನದಿಂದ ಕಂಗೊಳಿಸುತ್ತದೆ. ಮೆರವಣಿಗೆಯ ನಂತರ ವಿಗ್ರಹವನ್ನು ವೇದಿಕೆ ಮೇಲೆ ಇಟ್ಟು ದರ್ಶನ ಪಾತ್ರಿಗಳು ಭೂತದಂತೆ (ಪವಿತ್ರ ದೈವ) ವರ್ತಿಸುತ್ತ ಕಾಯಲ್ಲಿ ಖಡ್ಗ ಮತ್ತು ಕಾಲ್ಗೆಜ್ಜೆಗಳೊಂದಿಗೆ ವೇದಿಕೆ  ಸುತ್ತ ನರ್ತಿಸುತ್ತಾರೆ. ನರ್ತಕ ಒಂದು ಹಂತದಲ್ಲಿ ನರ್ತನೆಯ  ಪರಾಕಾಷ್ಟೆಯನ್ನು ತಲುಪಿ ನಂತರ ನಿಧಾನಿಸುತ್ತ,  ದೈವೀ  ಶಕ್ತಿಯ ಆವಾಹನೆಯಾಗಿರುವುದನ್ನು ಸೂಚಿಸುತ್ತಾನೆ.

ದೈವವನ್ನು ಪ್ರತಿನಿಧಿಸುವ  ದರ್ಶನ ಪಾತ್ರಿ ಕತ್ತಿ ಮತ್ತು ಕಾಲ್ಗೆಜ್ಜೆಗಳೊಂದಿಗೆ ವೃತ್ತಾಕಾರವಾಗಿ ಹೆಜ್ಜೆಹಾಕುತ್ತಾನೆ. ಮೆರವಣಿಗೆ ಅಂತ್ಯಗೊಂಡಾಗ ಮೂರ್ತಿಗಳನ್ನು ಪೀಟದ ಮೇಲೆ ಇರಿಸಲಾಗುತ್ತದೆ ಮತ್ತು ದೈವಿ ಶಕ್ತಿ ಆವಾಹನೆಯಾದ ನರ್ತಕ ದೇವರ ಮಾತುಗಳಿಗೆ ಮಧ್ಯವರ್ತಕನಂತೆ ದೈವ ಮಾಧ್ಯಮವಾಗಿ ನುಡಿ ಕೊಡುತ್ತಾನೆ. ಭೂತ ಕೋಲದ ಪ್ರಮುಖ ಅಂಶವೆಂದರೆ ಆವೇಶ ಬರುವಿಕೆ, ಆವೇಶ  ಸ್ಥಿತಿ ಮತ್ತು ಭಕ್ತರ ಜೊತೆಗೆ ನಡೆಸುವ ಸಂವಾದ.ಇಂತಹ ಸ್ಥಿತಿಯಲ್ಲಿ ನರ್ತಕನು ದೈವದ ಅವತಾರದಂತೆ ವರ್ತಿಸುತ್ತ ಭಕ್ತರ ಸಮಸ್ಯೆಗಳನ್ನು ಕೇಳುತ್ತ, ಪರಿಹರಿಸುತ್ತ, ಎಚ್ಚರಿಸುತ್ತ, ಅಭಯ  ಕೊಡುತ್ತಾನೆ ಮತ್ತು ಹಳ್ಳಿಯ ಕಾನೂನು ಮತ್ತು ನ್ಯಾಯಾಂಗ  ಸಮಸ್ಯೆಗಳನ್ನು ಪರಿಹರಿಸುತ್ತಾನೆ.ಅತ್ಯಾಕರ್ಷಕವಾಗಿ  ಅಲಂಕಾರಗೊಂಡ ಸಮಾರಂಭ ಸ್ಥಳವು  ಒಂದು ಸಾಂಪ್ರದಾಯಿಕ ಮೆರುಗನ್ನು ನೀಡಿದರೆ, ದೈವ ಮತ್ತು ಪೂಜಾ ಸಾಮಗ್ರಿಗಳು ಒಂದು ಕಡೆ ಸಾಲಾಗಿ ಜೋಡಿಸಲಾಗಿದ್ದು ಇನ್ನೊಂದು ಕಡೆ ಭಕ್ತರು ಶಿಸ್ತಿನಿಂದ ಸಾಲಾಗಿ ನಿಂತಿರುತ್ತಾರೆ. ಸಂಗೀತಗಾರರು ತಮ್ಮ ವಾದ್ಯಗಳೊಂದಿಗೆ ಇನ್ನೊಂದು ಕಡೆ ಕುಳಿತುಕೊಂಡು ಮೆರವಣಿಗೆಯ ವಿವಿದ ಹಂತಗಳಿಗನುಸಾರವಾಗಿ ವಿವಿಧ ಸ್ತರಗಳ್ಳಲ್ಲಿ ವಾದ್ಯ ನುಡಿಸುತ್ತಾರೆ. ಸಮಾರಂಭ ಸ್ಥಳದ ಚಪ್ಪರ ತಾಳೆ ಎಲೆ, ಮಾವಿನ ಎಲೆ ಮತ್ತು  ಹಿಂಗಾರದಿಂದ ತಯಾರಿಸಿದ ವಿವಿಧ ಆಕೃತಿಗಳಿಂದ ಕಂಗೊಳಿಸುತ್ತದೆ. ಭೂತ  ಅಥವಾ ದೈವವನ್ನು ಆಹ್ವಾನಿಸುವವನು ವರ್ಣಮಯ ವಸ್ತ್ರ, ಖಡ್ಗ, ಗೆಜ್ಜೆ, ಮತ್ತು ಇನ್ನಿತರ ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಾನೆ.ಅವನನ್ನು ಸ್ವಯಂ ಸಂಮೋಹನ ಮತ್ತು ದೈವದ ಆವಾಹನೆಗೆ ನಿಧಾನವಾಗಿ ಸಜ್ಜುಗೊಳಿಸಲಾಗುತ್ತದೆ. ಮನಸ್ಸನ್ನು ಶಾಂತವಾಗಿಡಲು ಸಾಂಪ್ರದಾಯಿಕ ಎಣ್ಣೆ ಸ್ನಾನವನ್ನು ನೀಡಲಾಗುತ್ತದೆ. ಸಸ್ಯಮೂಲದ ಬಣ್ಣಗಳಿಂದ ಆವಾಹನೆಗೊಳಗಾದ ನರ್ತಕನನ್ನು ಅಲಂಕರಿಸಲಾಗುತ್ತದೆ ಮತ್ತು ಪ್ರತಿಯೊಂದು ಬಣ್ಣವು ಆ ದೈವದ ಗುಣಲಕ್ಷನೆಗಳನ್ನು ಪ್ರತಿಬಿಂಬಿಸುತ್ತದೆ.ದೈವದ ಹುಟ್ಟು, ಭೂಮಿಗಿಳಿದ ಕಥೆ, ಧೀರೋದಾತ್ತ ಕಾರ್ಯಗಳು, ಸಂಚಾರ, ಪ್ರಭಾವದ ವಿಸ್ತಾರವನ್ನು ಪಾಡ್ದನದ  ಮೂಲಕ ಅವನ ಹೆಂಡತಿ, ತಂಗಿ ಅಥವಾ ತಾಯಿ ಹಾಡುತ್ತಾರೆ.

ಗೊಂಬೆಯಾಟ

ಗೊಂಬೆಯಾಟಕರ್ನಾಟಕದ ಶ್ರೀಮಂತ ಕಲೆಗಳಲ್ಲಿ ಗೊಂಬೆಯಾಟವು ಒಂದು.ಸೂತ್ರ ಗೊಂಬೆಯಾಟವು ಕಥೆ, ಕಥಾ ಪ್ರಯೋಗ, ಸಂಗೀತ, ವಸ್ತ್ರವಿನ್ಯಾಸ,ಪ್ರಸಾಧನ ಮತ್ತು ರಂಗಪ್ರಯೋಗಗಳಲ್ಲಿ ಯಕ್ಷಗಾನವನ್ನು ಹೋಲುವುದರಿಂದ ಯಕ್ಷಗಾನ ಗೊಂಬೆಯಾಟವೆಂದೂ ಕರೆಯಲ್ಪಡುತ್ತದೆ. ರಾಮಾಯಣದ ವಿವಿಧ ಪ್ರಸಂಗಗಳನ್ನು ಕಥಾ ವಸ್ತುವಾಗಿ ಉಪಯೋಗಿಸಲಾಗುತ್ತದೆ. ಸೂತ್ರವನ್ನು ಎರಡು ಕಿವಿ, ಮೊಣಕಾಲು ಮತ್ತು ಕೈಗಳಿಗೆ ಅಳವಡಿಸಿ ಗೊಂಬೆಯನ್ನು ಆಡಿಸಲಾಗುತ್ತದೆ. 3 ಸಣ್ಣ ಕಟ್ಟಿಗೆ ತುಂಡುಗಳಿಗೆ ಕಟ್ಟಿದ ಸೂತ್ರವನ್ನು ಹಿಡಿದು ಸೂತ್ರಧಾರನು ಹಾಡನ್ನು ಹೇಳುತ್ತ ಗೊಂಬೆಯಾಡಿಸುತ್ತಾನೆ.

ಸೂತ್ರ ಮತ್ತು ಸಲಾಕೆ / ಕಂಬಿ ಗೊಂಬೆಯಾಟವನ್ನು ಸಲಾಕೆ ಗೊಂಬೆಯಾಟವೆಂದು ಕರೆಯಲಾಗುತ್ತದೆ ಮತ್ತು ಆಡಿಸಲು ಎರಡನ್ನು (ಸೂತ್ರ ಮತ್ತು ಸಲಾಕೆ) ಉಪಯೋಗಿಸಲಾಗುತ್ತದೆ. ಎರಡೂ ಕೈಗಳ ಮೂಲಕ ಹೊರಹೊಮ್ಮುವ ಕಬ್ಬಿಣದ ಕಂಬಿ ಇನ್ನೊಂದು ತುದಿಯಲ್ಲಿ ಮರದ ಕಟ್ಟಿಗೆಗೆ ಜೋಡಿಸಲಾಗಿರುತ್ತದೆ. ಸೂತ್ರಗಳು ಒಂದು ತುದಿಯಲ್ಲಿ ಕಿವಿಗಳಿಗೆ ಮತ್ತು ತಲೆಯ ಮದ್ಯಭಾಗಕ್ಕೆ ಜೋಡಿಸಲಾಗಿದ್ದರೆ ಇನ್ನೊಂದು ಕಡೆಯಲ್ಲಿ ಸುತ್ರದಾರನ ತಲೆಯ ಮೇಲಿರಿಸಲಾಗಿರುವ ಕಬ್ಬಿಣದ ಬಳೆಗೆ (ಬಟ್ಟೆಯಿಂದ ಹೊಲಿದಿರುತ್ತಾರೆ) ಜೊಡಿಸಿರಲಾಗಿರುತ್ತದೆ .ಇಂತಹ ವಿನ್ಯಾಸದಿಂದ ಗೊಂಬೆಗಳಿಂದ ದೀಪ ಹಚ್ಚುವುದು, ಇನ್ನೊಂದು ಗೊಂಬೆಗೆ ಹಾರ ಹಾಕುವಂತಹ ವಿಶೇಷ ಅಭಿನಯಗಳನ್ನು ಮಾಡಿಸಬಹುದು.ಸುತ್ರದಾರನು ತನ್ನ ಮೊಣಕಾಲುಗಳಿಂದ ಗೊಂಬೆಗಳನ್ನು ದೂಡಿ ಚಲನೆಯನ್ನು ಮಾಡಿಸುತ್ತಾನೆ.

ನೆರಳು ಗೊಂಬೆಯಾಟವನ್ನು ತೊಗಲು ಗೊಂಬೆಯಾಟವೆಂದೂ  ಕರೆಯಲಾಗುತ್ತದೆ.ಗಣೇಶನ ಸ್ತುತಿಯೊಂದಿಗೆ ಪ್ರಾರಂಬಿಸಿ ರಾಮಾಯಣದ ಹಲವು ಪ್ರಸಂಗಗಳನ್ನು ಪ್ರಸ್ತುತಪಡಿಸುತ್ತಾರೆ. ಕರ್ನಾಟಕಕ್ಕೆ ವಿಶೇಷವಾದ ತೊಗಲು ಗೊಂಬೆಯಾಟ, ಇಡಿಯ ಭಾರತಕ್ಕೂ ವಿಶೇಷವಾಗಿದೆ.ಕನ್ನಡದಲ್ಲಿ ತೊಗಲು ಗೊಂಬೆಯಾಟವೆಂದರೆ ಚರ್ಮದ ಗೊಂಬೆಗಳ ಆಟವೆಂದು ಅರ್ಥ.ಕರ್ನಾಟಕ ಚಿತ್ರ ಕಲಾ ಪರಿಷತ್ತು ಈ ಕಲೆಯನ್ನು ಅಧ್ಯಯನ ಮಾಡಿದೆ ಮತ್ತು ಹಲವು ಚರ್ಮದ ಗೊಂಬೆಗಳ ಸಂಗ್ರಹವನ್ನು ಮಾಡಿದೆ.

ಬೆಂಗಳೂರು ಕರಗ

ಬೆಂಗಳೂರು ಕರಗಬೆಂಗಳೂರಿನ ಹೃದಯಭಾಗದಲ್ಲಿ ಆಚರಿಸುವ ಪುರಾತನವಾದ ಒಂದು ಹಬ್ಬ. ತಿಗಳ ಕುಲದವರು ಅಥವಾ ವಹ್ನಿಕುಲ ಕುಲದವರು ಆಚರಿಸುವ ವಿಶೇಷವಾದ ಆಚರಣೆ.

ಈ  ಕಲೆಯನ್ನು ಆ ಸಮಾಜದ ಗಂಡಸರು ಆಚರಿಸುತ್ತಾರೆ ಇದು ಸಾಮಾನ್ಯವಾಗಿ ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುವ ಆಚರಣೆ ಆಗಿರುತ್ತದೆ. ಆ ಸಮಾಜದವರ ಪ್ರಕಾರ  ಮಹಾಭಾರತದ ಕಡೆಯ ಭಾಗದಲ್ಲಿ  ತ್ರಿಪುರಾಸುರ ಎಂಬ ರಾಕ್ಷಸ ಇನ್ನು ಬದುಕಿರುತ್ತಾನೆ. ಆ ಸಮಯದಲ್ಲಿ ಪಾಂಡವರ ಪತ್ನಿಯಾದ ದ್ರೌಪತಿಯು ಶಕ್ತಿ ದೇವತೆಯ ಅವತಾರವನ್ನೆತ್ತಿ ದೊಡ್ಡ ಸೈನ್ಯವನ್ನು ಸೃಷ್ಥಿ  ಮಾಡುತ್ತಾಳೆ ಅದಕ್ಕೆ ವೀರ ಕುಮಾರರು  ಎಂದು ಹೆಸರಿಸುತ್ತಾಳೆ. ನಂತರ ಯುದ್ಧ ಮಾಡಿ ರಾಕ್ಷಸನನ್ನು ಸಂಹರಿಸುತ್ತಾಳೆ. ನಂತರ ಮತ್ತೆ ವಾಪಾಸು ಹೊರಡುವಾಗ, ವೀರ ಕುಮಾರರು ತಮ್ಮೊಡನೆ ಇರಲು ವಿನಂತಿಸಿಕೊಳ್ಳುತ್ತಾರೆ,  ಆದರೆ ದ್ರೌಪತಿ ಗೆ ಇರಲು ಸಾಧ್ಯವಾಗದಿರುವುದರಿಂದ ಪ್ರತಿ ವರ್ಷ ಮೊದಲನೇ ಪೌರ್ಣಮಿಯಂದು ಬರುವುದಾಗಿ ಮಾತು ಕೊಡುತ್ತಾಳೆ. ಅದರಂತೆ ಪ್ರತಿ ವರ್ಷ ಮೊದಲನೇ ಹುಣ್ಣಿಮೆಯಂದು ಕರಗ ಹಬ್ಬವನ್ನು ಆಚರಿಸಲಾಗುತ್ತದೆ  ಕರಗ ಎನ್ನುವುದು ಉದ್ದವಾಗಿ ಹೂವಿನಿಂದ  ಸಿಂಗಾರಗೊಂಡ ಕಲಶ. ಮುಖ್ಯ ಆರಾಧಕ ಅದನ್ನ ತಮ್ಮ ತಲೆಯ ಮೇಲೆ ಹೊತ್ತು ಕುಣಿಯುತ್ತಾರೆ. ಕಲಶಕ್ಕೆ ಮಾಡಿರುವ ವಿಶೇಷ ಹೂವಿನ ಅಲಂಕಾರ ಆಕರ್ಷಣೀಯ.

ಕರಗ ಹೊರುವ ವ್ಯಕ್ತಿ ಹೆಣ್ಣಿನ ರೀತಿ ಸೀರೆಯನ್ನು ಉಟ್ಟು ಕಲಶವನ್ನು ಹೊತ್ತು, ಊರಿನ ಎಲ್ಲ ಬೀದಿಗಳಲ್ಲೂ ಸಂಚಾರ ಮಾಡುತ್ತಾನೆ. ಪ್ರಮುಖ ದೇವಾಲಯದ ಬಳಿ ಕರಗ ಹೊತ್ತು ಮಾಡುವ ನೃತ್ಯ  ನೋಡುಗರ ಮನಸೂರೆಗೊಳ್ಳುತ್ತದೆ.ಪ್ರತಿವರ್ಷ ದೇವಿಯು ಬಂದು ಮೂರುದಿನ ತಿಗಳ ಕುಲದವರೊಂದಿಗೆ ನೆಲೆಸಿರುತ್ತಾಳೆ ಎಂಬುದು ಅವರ ನಂಬಿಕೆ. ಇದಕ್ಕಾಗಿ ಎಲ್ಲರೂ ಹನ್ನೊಂದು ದಿನಗಳ ವ್ರತವನ್ನು ಆಚರಿಸಿತ್ತಿರುತ್ತಾರೆ .

ಕರಗ ಎಲ್ಲ ಧರ್ಮದವರು ಸೇರಿ ಸಂಭ್ರಮಿಸುವಂತಹ ಹಬ್ಬ ಎಂದರೆ ತಪ್ಪಾಗಲಾರದು. ಸಪ್ತಮಿಯಂದು ಧ್ವಜಾರೋಹಣೆಯೊಂದಿಗೆ ಕರಗ ಪ್ರಾರಂಭವಾಗುತ್ತದೆ. ಆ ದಿನ  ಸಮಾರಂಭವನ್ನು ಹಸಿ ಕರಗ ಎಂದು ಕರೆಯುತ್ತಾರೆ.  ಕರಗ ಹೊತ್ತು ಪ್ರದಕ್ಷಿಣೆ ಮಾಡಿದ ನಂತರ ಕೊಳದ ಮಧ್ಯೆ ಅದನ್ನು ಜೋಪಾನವಾಗಿ ಇಡಲಾಗುತ್ತದೆ. ಅಷ್ಟು ಉದ್ದದ ಕಲಶವನ್ನು ಕೌಶಲ್ಯ ಪೂರ್ವಕವಾಗಿ ತಲೆಯ ಮೇಲೆ ಹೊತ್ತು ಕುಣಿಯುವುದೇ ಇ ಜಾನಪದ ಕಲೆಯ ವಿಶೇಷತೆ.

ನಾಗಾರಾಧನೆ

ನಾಗಾರಾಧನೆತುಳು ನಾಡು ಎಂದು ಕರೆಯಲ್ಪಡುವ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡಿನಲ್ಲಿ ಭೂತ  ಕೊಲದಂತೆ ಪ್ರಚಲಿತವಿರುವ ಇನ್ನೊಂದು ಸಂಪ್ರದಾಯ- ನಾಗಾರಾಧನೆ,ಅಂದರೆ ನಾಗನ ಪೂಜೆ.ತುಳುನಾಡಿನ ಬಂಟರು ತಾವು ನಾಗವಂಶಿಯ  ಕ್ಷತ್ರಿಯರೆಂದು ಹೇಳಿಕೊಳ್ಳುತ್ತಾರಾದರು ನಾಗ ಪೂಜೆ ಪ್ರಾಯಶಃ ಅವರಿಂದ ಜನಪ್ರಿಯಗೊಂಡಿರಬಹುದು ಮತ್ತು  ನಾಗಾರಾಧನೆಯ ಮೂಲವನ್ನು ಕ0ಡು ಹಿಡಿಯುವುದು ಕಷ್ಟವಾಗಿದೆ.ಹಾವುಗಳನ್ನು ಹೆಚ್ಚಾಗಿ ಸಂತಾನಾಭಿವೃದ್ದಿಯ ಸಂಕೇತವಾಗಿ ಕಾಣಲಾಗುತಿತ್ತು. ನಾಗ ಬನವಿಲ್ಲದ ಬಂಟರ ಮನೆ ತುಂಬಾ ಅಪರೂಪ.ತುಳುನಾಡಿನಲ್ಲಿ ಆಚರಿಸುವ ಈ ನಾಗಾರಾಧನೆ ಬೇರೆ ಆಚರಣೆಗಳಿಗಿಂತ  ವಿಬಿನ್ನವಾಗಿದೆ ಮತ್ತು ಅನನ್ಯವಾಗಿದೆ.

ನಾಗಬನವೆಂಬ ಪವಿತ್ರ ತೋಪುಗಳಲ್ಲಿ ಹಾವುಗಳಿಗೆ ತಮ್ಮದೇ ಸ್ವಂತ ದೇವಾಲಯಗಳನ್ನು ನಿರ್ಮಿಸಿರುತ್ತಾರೆ ಮತ್ತು ಅವುಗಳ ಮೇಲೆ ನಾಗನ ಕೆತ್ತನೆಗಳಿರುತ್ತವೆ.ನಾಗನ ಆರಾಧನೆಯಲ್ಲಿ  ಎರಡು ವಿಭಿನ್ನ ಆಚರಣೆಗಳಿವೆ-ಆಶ್ಲೇಷಬಲಿ ಮತ್ತು ನಾಗಮಂಡಲ. ಇವುಗಳಲ್ಲಿ ನಾಗಮಂಡಲ ಹೆಚ್ಚೇ ವರ್ಣರಂಜಿತವಾಗಿರುತ್ತದೆ  ಮತ್ತು ದೀರ್ಘಾವಧಿಯದಾಗಿರುತ್ತದೆ  .ನಾಗಮಂಡಲ ಹಾವುಗಳ ದೈವಿ ಮಿಲನವನ್ನು ಚಿತ್ರಿಸುತ್ತದೆ ಮತ್ತು ಸಾಮಾನ್ಯವಾಗಿ ಇದನ್ನು ಎರಡು ಪಾತ್ರಿಗಳು  ನಡೆಸಿಕೊಡುತ್ತಾರೆ. ಮೊದಲನೆಯ ಪಾತ್ರಿ, ಹಿಂಗಾರವನ್ನು ಆಘ್ರಾಣಿಸುತ್ತ ಗಂಡು  ಸರ್ಪವಾಗುತ್ತಾನೆ  .ಎರಡನೆಯ ಪಾತ್ರಿ , ನಾಗಕನ್ನಿಕೆ-ಹೆಣ್ಣು ಹಾವು, ನೈಸರ್ಗಿಕ ಬಣ್ಣಗಳಿಂದ ರಚಿಸಿದ ವಿಸ್ತಾರವಾದ ನಾಗಮಂಡಲದ ಸುತ್ತ ಹಾಡನ್ನು ಹೇಳುತ್ತಾ ಕುಣಿಯುತ್ತಾನೆ.ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಡಕ್ಕೆ ಎಂಬ ವಾದ್ಯವನ್ನು ನುಡಿಸಲಾಗುತ್ತದೆ. ಈ ಪವಿತ್ರ ಜಾಗದಲ್ಲಿ ಬಿಡಿಸಿರುವ ನಾಗಮಂಡಲ ೫ ವಿಬಿನ್ನ ಬಣ್ಣಗಳಿಂದ ಕೂಡಿರುತ್ತದೆ. ಬಿಳಿ (ಬಿಳಿ ಮಣ್ಣು), ಕೆಂಪು (ಸುಣ್ಣ ಮತ್ತು ಅರಶಿನದ ಮಿಶ್ರಣ), ಹಸಿರು (ಹಸಿರು ಎಲೆಗಳ ಪುಡಿ), ಹಳದಿ (ಹಳದಿ ಪುಡಿ), ಮತ್ತು ಕಪ್ಪು (ಹುರಿದು ಪುಡಿ ಮಾಡಿದ ಬತ್ತದ ಹೊಟ್ಟು).ಆಶ್ಲೇಷ ಬಲಿಯು ಹಿಂದು ಪದ್ದತಿಯ ಅಪರಸಂಸ್ಕಾರವನ್ನು ಹೋಲುತ್ತದೆ. ನಾಗಮಂಡಲವನ್ನು ಕೇಂದ್ರ ಬಿಂದುವಾಗಿಸಿ ನಡೆಸುವ ಈ ಪದ್ದತಿಯು ಮುಂಜಾನೆವರೆಗೂ ನಡೆಯುತ್ತದೆ.

ಕೊಡವರ ಜಾನಪದ ಕಲೆಗಳು

ಕೊಡವರ ಜಾನಪದ  ಕಲೆಗಳುಕರ್ನಾಟಕದ ಕಶ್ಮೀರ ಎಂದೇ  ಭಾವಿಸಲಾದ ಕೊಡಗಿನಲ್ಲಿ ಬಹಳಷ್ಟು ಜಾನಪದ ಕಲೆಗಳಿವೆ. ಅವುಗಳ ಸಣ್ಣ ಪರಿಚಯ.

ಹುತ್ತರಿ

ಬೆಳೆಯ ಕೊಯ್ಲಿನ ಸಮಯದಲ್ಲಿ ಮುಖ್ಯವಾಗಿ ಹುತ್ತರಿ ನೃತ್ಯವನ್ನು ಮಾಡಲಾಗುತ್ತದೆ. ಈ ನೃತ್ಯವನ್ನು ಮಾಡುವಾಗ ಎಲ್ಲರು ಕೊಡವರ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿರುತ್ತಾರೆ. ಕೊಡವರ ಸಾಂಪ್ರದಾಯಿಕ ಉಡುಗೆಯೇ ವಿಶಿಷ್ಠವಾಗಿದೆ, ಉದ್ದನೆಯ ಕಪ್ಪನೆಯ ದಿರಿಸು, ಸೊಂಟಕ್ಕೆ ಬಂಗಾರದ ಬಣ್ಣದ ಬೆಲ್ಟು, ಅದರಲ್ಲೇ ಒಂದು ಚಿಕ್ಕ ಚೂರಿ. ಗಂಡಸರು ನಿಧಾನಗತಿಯ ನೃತ್ಯವನ್ನು ಹಿನ್ನೆಲೆ ಸಂಗೀತಕ್ಕನುಗುಣವಾಗಿ ಉದ್ದನೆಯ ಕೋಲನ್ನು ಹಿಡಿದು ಕುಣಿಯುತ್ತಾರೆ. ಈ ರೀತಿಯ ನೃತ್ಯಕ್ಕೆ ಲುತ್ತರಿ ಕೋಲಾಟ ಎಂದು ಕರೆಯುತ್ತಾರೆ.

ಬೋಲಕಾಟ್

ಇತಿಹಾಸಕಾರರ ಪ್ರಕಾರ ಭಗವಾನ್ ವಿಷ್ಣುವು ವಿಧವಿಧವಾದ ಅವತಾರಗಳನ್ನು ದುಷ್ಟರ ಸಂಹಾರಕ್ಕಾಗಿ ಧರಿಸಿದ್ದನಂತೆ. ಅದೇ ರೀತಿ ಭಸ್ಮಾಸುರ ಎಂಬ ರಾಕ್ಷಸನ ಸಂಹಾರಕ್ಕಾಗಿ ವಿಷ್ಣುವು 30 ಬಗೆಯ ನೃತ್ಯವನ್ನು ಮಾಡಿದ್ದನಂತೆ, ಆ 30 ಬಗೆಯಲ್ಲಿ ಬೋಲಕಾಟ್ ನೃತ್ಯ ಶೈಲಿ ಸಹ ಒಂದು. ಈ ನೃತ್ಯವನ್ನು ಎಣ್ಣೆಯ ದೀಪದ ಮುಂದೆ ತೆರೆದ ಪ್ರದೇಶದಲ್ಲಿ ಮಾಡುತ್ತಾರೆ, ಈ ನೃತ್ಯವನ್ನು ಕೊಡಗಿನ ಸಂಪ್ರದಾಯಿಕ ಉಡುಗೆಯನ್ನು ತೊಟ್ಟ ಗಂಡಸರು ಪ್ರದರ್ಶಿಸುತ್ತಾರೆ. ನೃತ್ಯವನ್ನು ಪ್ರದರ್ಶಿಸುವಾಗ ಒಂದು ಕೈಲಿ ಕೋಣದ ಚರ್ಮ ಮತ್ತೊಂದು ಕೈಲಿ ಕೊಡವರ    ಕತ್ತಿಯನ್ನು ಹಿಡಿದು ಕುಣಿಯುತ್ತಾರೆ.ಕೆಲವು ಸಲಿ ಬರೀ ಕತ್ತಿ ಹಿಡಿದು ಕುಣಿಯುವುದೂ ಉಂಟು ಅದನ್ನು ಕತ್ತಿಯಾಟ ಎಂದು ಕರೆಯುತ್ತಾರೆ.

ಕೊಂಬಾಟ

ಈ ನೃತ್ಯವನ್ನು ಬರೀ ದೇವಾಲಯದ ಒಳಗೆ ಮಾತ್ರ ಮಾಡಲಾಗುತ್ತದೆ, ಗಂಡಸರು ಜಿಂಕೆಯ ಕೊಂಬುಗಳನ್ನು ಹಿಡಿದು ಕುಣಿಯುತ್ತಾರೆ, ಇದೇ ಈ ನೃತ್ಯ ಶೈಲಿಯ ವಿಶೇಷತೆ. ನೃತ್ಯದಲ್ಲಿ ಕೆಲವು ಸಾಹಸೀ ಪ್ರದರ್ಶನಗಳೂ ಸಹ ಇರುತ್ತದೆ, ಕೊಡವರು ಮೂಲವಾಗಿ ವೀರರು ಮತ್ತು ಯುದ್ಧಕಲಿಗಳು ಎಂದು ಇದರಿಂದಲೇ ತಿಳಿಯುತ್ತದೆ.