ಡೊಳ್ಳು ಕುಣಿತ

ಡೊಳ್ಳು ಕುಣಿತಡೊಳ್ಳು ಕುಣಿತ ಕರ್ನಾಟಕದ ಜಾನಪದ ಕಲೆಗಳಲ್ಲಿ ಮೇರು ಸ್ಥಾನವನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಚರ್ಮ ವಾದ್ಯವಾಗಿರುವ ಡೊಳ್ಳನ್ನು ಬಾರಿಸುವುದನ್ನ ಕೇಳುತ್ತಲಿದ್ದರೆ ನಮಗೇ ಗೊತ್ತಿಲ್ಲದಂತೆ ನಮ್ಮ ಕಾಲುಗಳಿಗಷ್ಟು ಶಕ್ತಿ ಬಂದು ನೃತ್ಯ ಮಾಡುತ್ತಿರುತ್ತದೆ. ಸ್ವಾಮಿ ಬೀರೇಶ್ವರನ ಆರಾಧನೆಯಲ್ಲಿ ಡೊಳ್ಳು ಮಹತ್ವದ ಪಾತ್ರವನ್ನು ವಹಿಸುತ್ತದೆ.

ಬೀರೇಶ್ವರನ ಎಲ್ಲ ದೇವಸ್ಥಾನಗಳಲ್ಲು ಡೊಳ್ಳನ್ನು ಪ್ರಾಂಗಣದಲ್ಲಿ ನೇತುಹಾಕಿರುತ್ತಾರೆ. ಪ್ರತೀ ಬಾರಿಯು ಬೀರೇಶ್ವರನ ಪೂಜೆ ನಡೆಯುವಾಗ ಡೊಳ್ಳು ಬಡಿಯುವುದು ಸಂಪ್ರದಾಯವಾಗಿರುತ್ತದೆ. ಆದರೆ ಈ ನಡುವೆ ಡೊಳ್ಳು ಕುಣಿತ ದೇವೆಸ್ಥಾನದಿಂದ ಹೊರಬಂದು, ಎಲ್ಲಾ ಕಾರ್ಯಕ್ರಮಗಳಲ್ಲೂ ಒಂದು ಭಾಗವಾಗಿದೆ, ಸರ್ಕಾರ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿರಲಿ, ಯಾವುದೋ ರಾಜಕಾರಿಣಿಯ ಭಾಷಣ ಕಾರ್ಯಕ್ರಮವಿರಲಿ, ಡೊಳ್ಳು ಬಾರಿಸಿ ಡೊಳ್ಳು ಕುಣಿತ ಮಾಡಿಸಿ ಶುಭಾರಂಭ ಮಾಡುವ ಪರಿಪಾಠ ಸೃಷ್ಠಿಯಾಗಿದೆ. ಉತ್ತರ ಕರ್ನಾಟಕದ ಯಾವುದೇ ಹಬ್ಬಗಳಾಗಲಿ ಡೊಳ್ಳು ಕುಣಿತಕ್ಕೊಂದು ವಿಶೇಷತೆ ಇದ್ದೇ ಇರುತ್ತದೆ. ಬಿತ್ತನೆ ಕಾಲ ಶುರುಮಾಡುವಾಗಲೂ ಸಹ ಮಳೆರಾಯನನ್ನು ಡೊಳ್ಳು ಕುಣಿತದೊಂದಿಗೆ ಸ್ವಾಗತಿಸುತ್ತಾರೆ.

ಕುಣಿಯುವಾಗ ಕಲೆಗಾರರು ಬೀರೇಶ್ವರ ಸ್ವಾಮಿಯ ಮಹಾತ್ಮೆಯನ್ನು ಹಾಡುತ್ತಿರುತ್ತಾರೆ. ಒಬ್ಬೊಬ್ಬರು ಒಂದೊಂದು ಸ್ವರದಲ್ಲಿ ಹಾಡುವುದರಿಂದ ಬೇರೆ ಜಾನಪದ ಕಲೆಗಳಿಗಿಂತಲು ಡೊಳ್ಳು ಕುಣಿತ ವಿಶೇಷತೆಯನ್ನು ಹೊಂದುತ್ತದೆ. ಡೊಳ್ಳನ್ನು ತಮ್ಮ ಹೆಗಲ ಮೇಲಿಂದ ಮುಂದಕ್ಕೆ ನೇತು ಹಾಕಿಕೊಂಡು, ಒಂದು ಕೈಯಲ್ಲಿ ಕೋಲಿನಿಂದ ಮತ್ತೊಂದು ಕಡೆ ಕೈನಿಂದ ನಾದವನ್ನು ಬರಿಸುತ್ತಾರೆ, ಡೊಳ್ಳು ಬಾರಿಸುವಾಗ ನೃತ್ಯವೂ ಸಹ ಆಕರ್ಷಣೀಯ. ದಸರಾ ಉತ್ಸವದಲ್ಲಿ ಡೊಳ್ಳು ಕುಣಿತ ನೋಡಲೆಂದೇ ಬಹಳಷ್ಟು ಪ್ರವಾಸಿಗರು ಬರುತ್ತಾರೆ. ಕಲೆಗಾರರು ಮತ್ತು ವೀಕ್ಷಕರು ಡೊಳ್ಳು ಕುಣಿತ ನೋಡುವಾಗ ಬೇರೆಯೇ ಲೋಕಕ್ಕೆ ಕಳೆದುಹೋಗುವುದರಲ್ಲಿ ಸಂಶಯವಿಲ್ಲ.

Leave a comment